Home Uncategorized ಮಹಾತ್ಮಾ ಗಾಂಧಿಯವರ ಕಲ್ಪಿತ ಸಂದರ್ಶನ ಮತ್ತು ಸುಳ್ಳು ಸುದ್ದಿ ಎಂಬ ಹಳೆಯ ವ್ಯಾಧಿ

ಮಹಾತ್ಮಾ ಗಾಂಧಿಯವರ ಕಲ್ಪಿತ ಸಂದರ್ಶನ ಮತ್ತು ಸುಳ್ಳು ಸುದ್ದಿ ಎಂಬ ಹಳೆಯ ವ್ಯಾಧಿ

8
0

ಗಾಂಧಿಯವರು ಡಿಸೆಂಬರ್ 1931ರಲ್ಲಿ ಇಂಗ್ಲೆಂಡಿನಲ್ಲಿ ನಡೆದ ಎರಡನೇ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿ, ಭಾರತಕ್ಕೆ ಹಿಂದಿರುಗುತ್ತಿದ್ದಾಗ, ಅವರು ಪ್ರಯಾಣಿಸುತ್ತಿದ್ದ ಹಡಗು ಇಟಲಿಯಲ್ಲಿ ಸ್ವಲ್ಪ ಕಾಲ ತಂಗಿತ್ತು. ಆಗ ಅಲ್ಲಿಯ ಪತ್ರಿಕಾ ಪ್ರತಿನಿಧಿಯೊಬ್ಬರಿಗೆ ಗಾಂಧಿಯವರು ಕೊಟ್ಟಿದ್ದರೆನ್ನಲಾದ ಸಂದರ್ಶನವೊಂದನ್ನು ಅಲ್ಲಿಯ ಜಿಯೋರ್ನೇಲ್ ಡಿ’ಇಟಾಲಿಯಾ ಎಂಬ ದಿನಪತ್ರಿಕೆಯೊಂದು ಪ್ರಕಟಿಸಿತು. ಅದು ಇಂಗ್ಲೆಂಡ್ನಲ್ಲಿ ಸಾಕಷ್ಟು ರಾಜಕೀಯ ಸಂಚಲನಕ್ಕೆ ಕಾರಣವಾಯಿತು.

ಈಲೇಖನ ಎಂ.ಕೆ. ಗಾಂಧಿಯವರ ಬೋಧನೆಗಳು ಅಥವಾ ಅವರ ರಾಜಕೀಯ ಮತ್ತು ಆಧ್ಯಾತ್ಮಿಕ ಸಂಘರ್ಷಗಳನ್ನು ಕುರಿತದ್ದಾಗಲಿ ಅಲ್ಲ. ಇದು 1934ರಲ್ಲಿ ಅವರ ಜೀವನದಲ್ಲಿ ನಡೆದ ಒಂದು ಅತ್ಯಂತ ಸಾಮಾನ್ಯ ಸಂಗತಿ ಕುರಿತಾದದ್ದು. ಸಂಗತಿ ಎಷ್ಟೇ ಸಣ್ಣದು, ಸಾಮಾನ್ಯವಾದದ್ದು ಎನಿಸಿದರೂ, ಇದು ಗಾಂಧಿಯವರ ದೊಡ್ಡ ತತ್ವಗಳ ಪುಟ್ಟ ನಿದರ್ಶನದಂತಿದೆ. ಅಸತ್ಯ ಎಂಬುದು ಎಷ್ಟೇ ಸಂಚರಿಸಿ, ಸ್ಥಾಪಿತಗೊಂಡಿದ್ದರೂ, ತಡವಾಗಿಯಾದರೂ ಸರಿ, ಅದಕ್ಕೆ ತಡೆಗೋಡೆಯೊಡ್ಡುವುದು ಮುಖ್ಯ ಎಂಬುದನ್ನು ಈ ಸಂಗತಿ ತೋರಿಸಿಕೊಡುತ್ತದೆ. ಸತ್ಯಾನ್ವೇಷಕರು ಸತ್ಯವನ್ನು ಸಹಜವಾಗಿ ಅರಿತುಕೊಳ್ಳಲು ಸಾಧ್ಯವಾಗುವಂತೆ ಅದನ್ನು ಅದರ ಸಮಯ, ಸಂದರ್ಭ, ನಿಜ ಉದ್ದೇಶದ ಸಮೇತ ತೆರೆದಿಡುವ ಅವರ ಜೀವನದ ಪ್ರಕ್ರಿಯೆ ತಿಳಿದು ಬರುತ್ತದೆ. ನಾವು ನಕಲಿ ಸುದ್ದಿಗಳು, ಸತ್ಯಾಂಶ ಪರಿಶೀಲನೆ, ಸತ್ಯೋತ್ತರ ಕಾಲ, ವ್ಯವಸ್ಥಿತ ಪ್ರಚಾರ, ಇತ್ಯಾದಿಗಳ ಬಗ್ಗೆ ಸಾಕಷ್ಟು ಮಾತನಾಡುವ ಈ ಕಾಲಘಟ್ಟದಲ್ಲಿ, ಗಾಂಧಿಯವರ ಜೀವನದ ದಾಖಲೆಗಳ ರಾಶಿಯಲ್ಲಿ ಬೆಳಕಿಗೆ ಬರದೆ ಉಳಿದಿದ್ದ ಮಾಹಿತಿಯನ್ನಾಧರಿಸಿ ಬರೆದ ಈ ಲೇಖನ ನಮ್ಮ ಕಾಲಕ್ಕೆ ಅತ್ಯಂತ ಪ್ರಸ್ತುತವಾದದ್ದು.

ಗಾಂಧಿಯವರು ಡಿಸೆಂಬರ್ 1931ರಲ್ಲಿ ಇಂಗ್ಲೆಂಡಿನಲ್ಲಿ ನಡೆದ ಎರಡನೇ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿ ಭಾರತಕ್ಕೆ ಹಿಂದಿರುಗುತ್ತಿದ್ದಾಗ, ಅವರು ಪ್ರಯಾಣಿಸುತ್ತಿದ್ದ ಹಡಗು ಇಟಲಿಯಲ್ಲಿ ಸ್ವಲ್ಪ ಕಾಲ ತಂಗಿತ್ತು. ಆಗ ಅಲ್ಲಿಯ ಪತ್ರಿಕಾ ಪ್ರತಿನಿಧಿಯೊಬ್ಬರಿಗೆ ಗಾಂಧಿಯವರು ಕೊಟ್ಟಿದ್ದರೆನ್ನಲಾದ ಸಂದರ್ಶನವೊಂದನ್ನು ಅಲ್ಲಿಯ ಜಿಯೋರ್ನೇಲ್ ಡಿ’ಇಟಾಲಿಯಾ (Giornale d’Italia) ಎಂಬ ದಿನಪತ್ರಿಕೆಯೊಂದು ಪ್ರಕಟಿಸಿತು. ಈ ಆರೋಪಿತ ಸಂದರ್ಶನ ಪ್ರಕಟವಾದಾಗ, ಅದು ಇಂಗ್ಲೆಂಡ್ನಲ್ಲಿ ಸಾಕಷ್ಟು ರಾಜಕೀಯ ಸಂಚಲನಕ್ಕೆ ಕಾರಣವಾಯಿತು. ಆದರೆ ಈ ಮಧ್ಯೆ ಗಾಂಧಿಯವರು ಭಾರತದಲ್ಲಿ ಸೆರೆಮನೆವಾಸಿಗಳಾಗಿದ್ದರಿಂದ, ಈ ಪ್ರಕಟನೆ ಮತ್ತು ಅದು ಹುಟ್ಟು ಹಾಕಿದ ಪರಿಣಾಮಗಳು ಅವರ ಅರಿವಿಗೆ ಬಂದಿರಲಿಲ್ಲ. ಇದು ಅವರಿಗೆ ಗೊತ್ತಾಗಿದ್ದು ಅವರು ಆಗಸ್ಟ್ 1933ರಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರವಷ್ಟೆ. ಇದನ್ನು ಅವರ ಗಮನಕ್ಕೆ ತಂದವರು ಅವರ ಶಿಷ್ಯೆಯಾದ ಮೀರಾಬಾಯಿ ಸ್ಲೇಡ್ ಎಂದೇ ಪರಿಚಿತರಾದ ಮೆಡಲೀನ್ ಸ್ಲೇಡ್. ವಿಷಯ ತಿಳಿದ ಗಾಂಧಿಯವರು ಈ ಕಲ್ಪಿತ ಸಂದರ್ಶನ ಪ್ರಕಟವಾಗಿ ಸುಮಾರು ಎರಡೂವರೆ ವರ್ಷಗಳ ನಂತರ, ಅಂದರೆ, ಮಾರ್ಚ್ 1934ರಲ್ಲಿ ತಾವು ಇಂತಹ ಯಾವುದೇ ಸಂದರ್ಶನ ನೀಡಿರಲಿಲ್ಲ ಎಂದು ಸ್ಪಷ್ಟನೆ ಪತ್ರವನ್ನು ಬರೆಯುತ್ತಾರೆ. ಈ ಪತ್ರ ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದ ದಾಖಲೆಗಳಲ್ಲಿ ಹೆಚ್ಚಾಗಿ ಯಾರ ಗಮನಕ್ಕೂ ಬಾರದೆ ಉಳಿದುಕೊಂಡಿದೆ.

ಈ ನಿಟ್ಟಿನಲ್ಲಿ ಗಾಂಧಿಯವರು ಒದಗಿಸಿದ ಸ್ಪಷ್ಟನೆ ಮತ್ತು ಅದರ ಬಗ್ಗೆ ಅವರು ಮಾಡಿಟ್ಟ ಒಂದಷ್ಟು ಟಿಪ್ಪಣಿಗಳು, ಗಾಂಧಿಯವರ ಇಬ್ಬರು ಅತ್ಯಂತ ವಿಶ್ವಾಸಾರ್ಹ ಸಹವರ್ತಿಗಳೂ ಮತ್ತು ಆಳವಾದ ಆಧ್ಯಾತ್ಮಿಕ ಪ್ರಜ್ಞೆಯುಳ್ಳವರೂ ಆಗಿದ್ದ ಹೊರೇಸ್ ಅಲೆಕ್ಸಾಂಡರ್ ಮತ್ತು ಸಿ. ಎಫ್. ಆ್ಂಯಡ್ರ್ಯೂಸ್ ಅವರ ನಡುವಿನ ಪತ್ರವ್ಯವಹಾರದಲ್ಲಿ ನಮಗೆ ಓದಲು ಸಿಗುತ್ತವೆ. ಅಲೆಕ್ಸಾಂಡರ್ ಅವರು ಸೆಪ್ಟಂಬರ್ 1934ರಲ್ಲಿ ಬರ್ಮಿಂಗ್ಹ್ಯಾಮ್ನಲ್ಲಿದ್ದ ತಮ್ಮ ಸ್ನೇಹಿತರೊಬ್ಬರಿಗೆ ಬರೆದ ಪತ್ರದಲ್ಲಿ ಹೀಗೆ ಹೇಳುತ್ತಾರೆ: ‘‘ಕಳೆದ ಮೇ ತಿಂಗಳಲ್ಲಿ ಸಿ.ಎಫ್. ಆ್ಂಯಡ್ರ್ಯೂಸ್ ಇಂಗ್ಲೆಂಡ್ ಬಿಟ್ಟು ಹೊರಡುವ ಸಂದರ್ಭದಲ್ಲಿ, ಶ್ರೀಯುತ ಗಾಂಧಿಯವರು ಡಿಸೆಂಬರ್ 1931ರಲ್ಲಿ ರೋಮ್ನಲ್ಲಿ ನೀಡಿದ್ದರೆನ್ನಲಾದ ಸಂದರ್ಶನದ ಕುರಿತು ಅವರ ಸ್ಪಷ್ಟೀಕರಣವನ್ನು ಒಂದು ಲಕೋಟೆಯಲ್ಲಿಟ್ಟು ಕೊಟ್ಟು, ‘ಅದರ ಬಗ್ಗೆ ಏನಾದರೂ ಮಾಡಿ,’ ಎಂದು ಹೇಳಿದ್ದರು. ಈ ಸ್ಪಷ್ಟೀಕರಣವನ್ನು ಪತ್ರಿಕೆಯಲ್ಲಿ ಪ್ರಕಟಿಸುವುದಾಗಲಿ ಅಥವಾ ರೇಡಿಯೊದಲ್ಲಿ ಬಿತ್ತರಿಸುವುದಾಗಲಿ ಮಾಡುವ ಬದಲು, ಯಾರಿಗೆ ಅದರ ಬಗ್ಗೆ ಆಸಕ್ತಿ ಇದೆಯೋ ಅವರಿಗೆ ಖಾಸಗಿಯಾಗಿ ಅದನ್ನು ತಲುಪಿಸುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ,’’

ತಮ್ಮ ಪತ್ರದೊಂದಿಗೆ ಲಗತ್ತಿಸಿದ ಟಿಪ್ಪಣಿಯಲ್ಲಿ, ಅಲೆಕ್ಸಾಂಡರ್ ಅವರು ಈ ವಿವಾದ ಏನು ಎಂಬುದನ್ನು ವಿವರಿಸುತ್ತಾರೆ: ‘‘ಈ ಕಲ್ಪಿತ ಸಂದರ್ಶನ ಪ್ರಕಟವಾದಾಗಿನಿಂದ ಈಗಿನ ತನಕ ಏನೆಲ್ಲಾ ನಡೆದಿದೆ ಎಂಬುದನ್ನು ನೋಡಿದರೆ, ಈಗ ನಮಗೆ ಅದು ಕ್ಷುಲ್ಲಕ ಎಂದೆನ್ನಿಸಬಹುದು ಮತ್ತು ಆಗ ಅದನ್ನು ಓದಿದ ಇಂಗ್ಲೆಂಡ್ನ ಬಹುತೇಕ ಜನರು ಈಗ ಅದನ್ನು ಮರೆತು ಬಿಟ್ಟಿರುವ ಸಾಧ್ಯತೆ ಕೂಡಾ ಇದೆ. ಆದರೆ ಅದು ಪ್ರಕಟವಾದ ಕಾಲಕ್ಕೆ ದೊಡ್ಡ ಕಿಡಿಗೇಡಿತನಕ್ಕೆ ಕಾರಣವಾಗಿತ್ತು. ಹಾಗಾಗಿ, ಈಗಲಾದರೂ ನಿಜವಾಗಿ ನಡೆದದ್ದು ಏನು ಎಂಬುದರ ಸ್ಪಷ್ಟ ವಿವರಣೆಯನ್ನು ಪ್ರಕಟಿಸಲು ಸಾಧ್ಯವಾಗುವ ಅವಕಾಶ ಇರುವಾಗ, ನಿಖರವಾಗಿ ಸತ್ಯವನ್ನು ಅನಾವರಣಗೊಳಿಸುವುದು ಅಗತ್ಯ ಎಂದು ತೋರುತ್ತದೆ.. ರೋಮ್ನಲ್ಲಿ ಕೊಟ್ಟಿದ್ದರೆನ್ನಲಾದ ಸಂದರ್ಶನದಲ್ಲಿ ಪ್ರಸ್ತಾಪವಾದ ಕೆಲವು ಅಂಶಗಳು ಲಂಡನ್ನಲ್ಲಿ ನಡೆದ ದುಂಡು ಮೇಜಿನ ಸಭೆಯ ಕೊನೆಗೆ ಶ್ರೀಯುತ ಗಾಂಧಿಯವರು ಮಾಡಿದ ಹೇಳಿಕೆಗಳೊಂದಿಗೆ ತಾಳೆಹಾಕುತ್ತಿದ್ದವು ಎಂಬ ಕಾರಣಕ್ಕೆ ಈ ಕಲ್ಪಿತ ಸಂದರ್ಶನವನ್ನು ಇಂಗ್ಲೆಂಡ್ನವರು ಹೆಚ್ಚು ಬಳಸಿಕೊಂಡರು. ಸಭೆಯ ಕೊನೆಗೆ ಬ್ರಿಟನ್ನ ಪ್ರಧಾನ ಮಂತ್ರಿಯವರು ಮಾಡಿದ ನೀತಿ ಘೋಷಣೆಯನ್ನು ಕೇಳಿದ ನಂತರ, ಶ್ರೀಯುತ ಗಾಂಧಿಯವರು,‘ನಾವು ಬೇರೆ ಬೇರೆ ಮಾರ್ಗ ಹಿಡಿಯುವ ಹಂತ ತಲುಪಿದ್ದೇವೆಯೇನು?’ ಎಂದು ಪ್ರಶ್ನಿಸಿದ್ದರು ಮತ್ತು ಅವರು ಪ್ರಧಾನಿಯವರ ಹೇಳಿಕೆಯಲ್ಲಿದ್ದ ಸುಪ್ತಾರ್ಥಗಳ ಬಗ್ಗೆ ಕೂಡ ಮಾತನಾಡಿದ್ದರು.’’

ಅಲೆಕ್ಸಾಂಡರ್ ಅವರು ಮುಂದುವರಿದು ಸಭೆಯ ಕೊನೆಯ ದಿನಗಳಲ್ಲಿ ಗಾಂಧಿಯವರ ಮನಸ್ಸಿನಲ್ಲಿ ಏನಿತ್ತು ಎಂಬುದರ ಬಗ್ಗೆ ಬರೆಯುತ್ತಾರೆ: ‘‘ಭಾರತದ ಸಾರ್ವಜನಿಕ ಸಾಲ ಮತ್ತು ಬಂಗಾಳದಲ್ಲಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಸರಕಾರ ಆಗಷ್ಟೇ ಕೈಗೊಂಡಿದ್ದ ಹೊಸ ಕ್ರಮಗಳ ಬಗ್ಗೆ ಗಾಂಧಿಯವರು ಪ್ರಶ್ನೆಗಳನ್ನೆತ್ತಿದ್ದರು. ಸಾರ್ವಜನಿಕ ಋಣಭಾರದ ಕುರಿತಂತೆ ಚರ್ಚೆಗೆ ಅವಕಾಶ ದೊರಕದ ಹೊರತು, ದುಂಡುಮೇಜಿನ ಚರ್ಚೆಗಳಲ್ಲಿ ತಮ್ಮ ಭಾಗವಹಿಸುವಿಕೆಯನ್ನು ಮುಂದುವರಿಸುವಂತೆ ಕಾಂಗ್ರೆಸ್ಗೆ ಸಲಹೆ ನೀಡಲು ತಮ್ಮಿಂದ ಸಾಧ್ಯವಿಲ್ಲ ಎಂದು ಶ್ರೀಯುತ ಗಾಂಧಿಯವರು ಭಾವಿಸಿದ್ದರು. ಬಂಗಾಳದಲ್ಲಿ ಜಾರಿಯಲ್ಲಿದ್ದ ಸುಗ್ರೀವಾಜ್ಞೆಯು ಭಯೋತ್ಪಾದನೆಯನ್ನು ನಾಶಪಡಿಸುವ ಬದಲು, ಅದು ಜನರ ಮನಸ್ಸಿನಲ್ಲಿ ಹೆಚ್ಚಿನ ಕಹಿಭಾವನೆಯನ್ನು ಹುಟ್ಟಿಸಿದೆ ಮತ್ತು ಭಯೋತ್ಪಾದನೆಯನ್ನು ತೀವ್ರಗೊಳಿಸಿದೆ ಎಂದು ಅವರು ನಂಬಿದ್ದರು. ಆದಾಗ್ಯೂ, ಅವರು ಇಂಗ್ಲೆಂಡ್ನಿಂದ ಹೊರಡುವ ಮೊದಲು ಪ್ರಧಾನ ಮಂತ್ರಿ ಮತ್ತು ಸರ್ ಸ್ಯಾಮ್ಯುಯೆಲ್ ಹೋರ್ (ಭಾರತದ ವ್ಯವಹಾರ ನೋಡಿಕೊಳ್ಳುತ್ತಿದ್ದ ಮಂತ್ರಿ) ಅವರೊಂದಿಗೆ ಮಾತುಕತೆ ನಡೆಸಿದ್ದರು. ಆ ಮಾತುಕತೆಗಳು ಅವರಲ್ಲಿ ವಿಶ್ವಾಸವನ್ನು ತುಂಬಿದ್ದವು… ಕೊನೆಗೆ, ಇಂಗ್ಲೆಂಡ್ನಿಂದ ಹೊರಡುವ ಮುನ್ನಾದಿನದಂದು, ಶ್ರೀಯುತ ಗಾಂಧಿಯವರು ತಮ್ಮ ಇಂಗ್ಲಿಷ್ ಸ್ನೇಹಿತರಿಗೆ ಭಾರತದೊಂದಿಗೆ ಸಂಧಾನದ ಬಾಗಿಲನ್ನು ತೆರೆದಿಡಲು ತಮ್ಮ ಕೈಯಲ್ಲಾಗುವುದೆಲ್ಲವನ್ನೂ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಈ ದುಂಡು ಮೇಜಿನ ಸಭೆ ಒಂದು ದೀರ್ಘವೂ, ಪ್ರಯಾಸದಾಯಕವೂ ಆದ ಅನುಭವವಾಗಿದ್ದರೂ, ದೇಶವನ್ನು ಕಾಡುತ್ತಿದ್ದ ಸಮಸ್ಯೆಗಳಿಗೆ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳಲು ಅವರು ಬದ್ಧರಾಗಿದ್ದರು. ಓದುಗರು ಈ ಹೇಳಿಕೆಗಳನ್ನು ಮತ್ತು ಬೆಳವಣಿಗೆಗಳನ್ನು ಗಂಭೀರವಾಗಿ ಅವಲೋಕಿಸಿದ್ದರೆ, ಗಾಂಧಿಯವರು ಯಾವುದೇ ಸಂದರ್ಶನವನ್ನು ನೀಡಿರಲಿಲ್ಲ ಎಂಬುದು ಅವರಿಗೆ ಗೊತ್ತಾಗುತ್ತದೆ,’’ ಎಂದು ಅಲೆಕ್ಸಾಂಡರ್ ತಮ್ಮ ಟಿಪ್ಪಣಿಯಲ್ಲಿ ಬರೆಯುತ್ತಾರೆ.

‘‘ಸಂದರ್ಶಕರಾದ ಸಿನ್ಯೋರ್ (ಶ್ರೀಯುತ) ಗೈದಾ ಅವರಿಗೆ ಶ್ರೀಯುತ ಗಾಂಧಿಯವರ ಇಂಗ್ಲಿಷ್ ಅಷ್ಟು ಸುಲಭವಾಗಿ ಅರ್ಥವಾಗಿರಲಿಕ್ಕಿಲ್ಲ; ವ್ಯಕ್ತಿಯೊಬ್ಬನಿಗೆ ಹಲವು ದಿಕ್ಕುಗಳಿಂದ ಪ್ರಶ್ನೆಗಳನ್ನು ಕೇಳಿದಾಗ, ಅವರು ಕೊಟ್ಟ ಹಲವು ಉತ್ತರಗಳಿಂದ ವರದಿಗಾರನೊಬ್ಬ, ಪ್ರಶ್ನೆಗಳನ್ನು ಪ್ರಸ್ತುತಪಡಿಸದೆ, ತನಗೆ ತೋಚಿದಂತೆ ಒಂದು ಕಥಾನಕವನ್ನು ಹೆಣೆದಾಗ, ಅಲ್ಲಿ ಮಾತುಗಳನ್ನು ತಿರುಚುವ, ತಪ್ಪಾಗಿ ಅರ್ಥೈಸುವ ಸಾಧ್ಯತೆ ಹೆಚ್ಚಿರುತ್ತದೆ,’’ ಎಂದು ಅವರು ಒಕ್ಕಣಿಸುತ್ತಾರೆ.

‘‘ಈ ಕಾಲ್ಪನಿಕ ಸಂದರ್ಶನವನ್ನು ಆಧರಿಸಿ, ಡಿಸೆಂಬರ್ 15, 1931ರಂದು ಇಂಗ್ಲೆಂಡಿನ ಲಂಡನ್ ಟೈಮ್ಸ್ ದಿನಪತ್ರಿಕೆಯು ವರದಿಯೊಂದನ್ನು ಪ್ರಕಟಿಸಿತು. ಅದು ಇಂಗ್ಲೆಂಡಿನಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಯಿತು. ಅಲ್ಲಿಗೆ ನಿಲ್ಲದೆ, ಶ್ರೀಯುತ ಗಾಂಧಿಯವರು ‘ತಾವು ಈ ಸಂದರ್ಶನ ನೀಡಿಲ್ಲ,’ ಎಂದು ಅಧಿಕೃತವಾಗಿ ಕೊಟ್ಟರೆನ್ನಲಾದ ಹೇಳಿಕೆಗೆ, ಗಾಂಧಿಯ ವರು ಮೆಡಿಟರೇನಿಯನ್ ಸಾಗರದಲ್ಲಿ ಪ್ರಯಾಣಿಸುತ್ತಿದ್ದ ಇಟಾಲಿಯನ್ ಹಡಗು ‘ಪಿಲಾನ’ದಲ್ಲಿ ಅವರಿಗೆ ಹತ್ತಿರವಿದ್ದವೆನ್ನಲಾದ ‘ಅಧಿಕೃತ ಮೂಲ’ಗಳನ್ನು ಉದ್ಧರಿಸಿ,

18 ಡಿಸೆಂಬರ್ 1931ರಂದು ಸ್ಪಷ್ಟನೆಯೊಂದನ್ನು ಪ್ರಕಟಿಸಿತ್ತು. ಈ ತಿಳಿಯದ ಮೂಲಗಳು ಕೂಡ ತಾವು ಗಾಂಧಿಯವರ ಟೆಲಿಗ್ರಾಫಿಕ್ ಸಂದೇಶವನ್ನು ಉಲ್ಲೇಖಿಸುತ್ತಿದ್ದೇವೆ ಎಂದು ಹೇಳಿದ್ದವು. ಖಡಾಖಂಡಿತವಾದ ಈ ಸಂದೇಶದ ಪ್ರಕಾರ, ಗಾಂಧಿಯವರು ರೋಮ್ನಲ್ಲಿ ಪತ್ರಿಕಾ ಪ್ರತಿನಿಧಿಗಳಿಗೆ ಯಾವುದೇ ಸಂದರ್ಶನವನ್ನು ನೀಡಿರಲಿಲ್ಲ ಮತ್ತು ಅವರು ಈ ಹಿಂದೆ ಸ್ವಿಟ್ಝರ್ಲ್ಯಾಂಡ್ನ ವಿಲ್ಲೆನ್ಯೂವ್ನಲ್ಲಿ ರಾಯಿಟರ್ಗೆ ನೀಡಿದ್ದೇ ಅಲ್ಲಿಯ ತನಕದ ಕೊನೆಯ ಸಂದರ್ಶನವಾಗಿತ್ತು. ಸಂದರ್ಶನದ ಹಾಗೆ, ಸ್ಪಷ್ಟನೆ ಕುರಿತಾಗಿಯೂ ಗಾಂಧಿಯವರಿಗೆ ಅರಿವಿರಲಿಲ್ಲ ಎಂಬುದನ್ನು ಇಲ್ಲಿ ಒತ್ತಿ ಹೇಳಬೇಕು.

ಆದರೆ ಈ ನಿರಾಧಾರ ಸ್ಪಷ್ಟನೆ ಪ್ರಕಟವಾದ ನಂತರ ಕೂಡ, ಡಿಸೆಂಬರ್ 21, 1931ರಂದು ಟೈಮ್ಸ್ ಪತ್ರಿಕೆಯು ಮತ್ತೊಂದು ವರದಿ ಪ್ರಕಟಿಸಿ, ಅದರಲ್ಲಿ ಸಂದರ್ಶಕರಾದ ಶ್ರೀಯುತ ಗೈದಾ ಅವರು ತಾವು ತಮ್ಮ ಗಾಂಧಿ ಸಂದರ್ಶನಕ್ಕೆ ಬದ್ಧ ಎಂದು ಹೇಳಿರುವುದನ್ನು ಉದ್ಧರಿಸುತ್ತದೆ: ‘‘ಶ್ರೀಯುತ ಗೈದಾ ಅವರು ಒಂದು ಸಂಕ್ಷಿಪ್ತ ಟಿಪ್ಪಣಿ ಬರೆದು, ಅದರಲ್ಲಿ ತಮ್ಮ ಸಂದರ್ಶನದಲ್ಲಿ ಮಹಾತ್ಮಾ ಗಾಂಧಿಯವರು ಹೇಳಿದ್ದರೆನ್ನಲಾದ ಮಾತುಗಳನ್ನು ಸ್ವತಃ ಅವರ ಉಪಸ್ಥಿತಿಯಲ್ಲಿಯೇ, ಇತರ ಸಾಕ್ಷಿಗಳ ಸಮ್ಮುಖದಲ್ಲಿ ತಾನು ಬರೆದದ್ದು, ಎಂದು ಘೋಷಿಸುತ್ತಾರೆ. ಪ್ರಕರಣದ ಸತ್ಯಾಸತ್ಯತೆಯನ್ನು ನಾನು ಅರ್ಥಮಾಡಿಕೊಂಡಂತೆ, ಶ್ರೀಯುತ ಗೈದಾ ಅವರು ಶ್ರೀಯುತ ಗಾಂಧಿಯವರ ಔಪಚಾರಿಕ ಸಂದರ್ಶನ ನಡೆಸಲು ಯಾವುದೇ ಬೇಡಿಕೆ ಇಟ್ಟಿರಲಿಲ್ಲ ಮತ್ತು ತಾವು ಅಂತಹ ಯಾವುದೇ ಸಂದರ್ಶನ ನೀಡಿರಲಿಲ್ಲ ಎಂದು ಗಾಂಧಿಯವರು ಚಕಾರ ತೆಗೆದಿದ್ದಾರೆ. ಸತ್ಯ ಈ ಚಕಾರಕ್ಕ ಮಾತ್ರ ಸೀಮಿತವಾಗಿರಬಹುದು,’’ ಎಂದು ಹೇಳುತ್ತದೆ. ವಿಷಯವನ್ನು ಮತ್ತಷ್ಟು ತೀಕ್ಷ್ಣಗೊಳಿಸಲು ಟೈಮ್ಸ್ ವರದಿಗಾರನು, ತನ್ನ ವರದಿಯನ್ನು ಮುಗಿಸುತ್ತಾ, ‘‘ಶ್ರೀಯುತ ಗೈದಾ ಅವರಿಗೆ ಚೆನ್ನಾಗಿ ಇಂಗ್ಲಿಷ್ ಬರುತ್ತದೆ ಎಂದು ನಾನು ಪ್ರಮಾಣೀಕರಿಸಬಲ್ಲೆ ಮತ್ತು ಅವರು ಮಹಾತ್ಮ ಗಾಂಧಿಯವರ ಮಾತುಗಳನ್ನು ವಿಶೇಷ ಕಾಳಜಿಯಿಂದ ದಾಖಲಿಸಿದ್ದಾರೆ’’ ಎಂದು ಬರೆಯುತ್ತಾನೆ.

ಗಾಂಧಿಯವರು ಈ ವರದಿಗೆ ಪ್ರತಿಕ್ರಿಯೆಯಾಗಿ ಸರ್ ಸ್ಯಾಮ್ಯುಯೆಲ್ ಹೋರ್ ಅವರಿಗೆ ತಡವಾಗಿಯಾದರೂ ಮಾರ್ಚ್ 1934 ರಂದು ತಮ್ಮ ವಾರ್ಧಾ ಆಶ್ರಮದಿಂದ ಪತ್ರ ಬರೆಯುತ್ತಾರೆ. ಸುಮಾರು ಸಾವಿರ ಪದಗಳ ಈ ಪತ್ರದಲ್ಲಿ ಅವರು ಹೀಗೆಂದು ಹೇಳುತ್ತಾರೆ: ‘‘ಕಳೆದ ಆಗಸ್ಟ್ನಲ್ಲಿ, ನಾನು ನನ್ನ ಈ ಹಿಂದಿನ ಸೆರೆವಾಸದಿಂದ ಬಿಡುಗಡೆಯಾದ ನಂತರ, ಮೀರಾಬಾಯಿ ಸ್ಲೇಡ್ ಅವರು ಬಾಂಬೆಯ ವಿಲ್ಸನ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ನಮ್ಮ ಸ್ನೇಹಿತರಾದ ಪ್ರೊ. ಮ್ಯಾಕ್ಲೀನ್ ಅವರು ಈ ಸಂದರ್ಶನವನ್ನು ಪ್ರಸ್ತಾಪಿಸಿದ್ದನ್ನು ನೆನಪಿಸಿಕೊಳ್ಳುತ್ತಾ, ಈ ವಿಷಯ ಹಳೆಯದಾದರೂ, ರೋಮ್ ಪತ್ರಕರ್ತನ ನಿರಾಕರಣೆಯು ಅದು ಪ್ರಕಟವಾದ ಸಮಯದಲ್ಲಿ ಸಾಕಷ್ಟು ಆಳವಾದ ಪ್ರಭಾವವನ್ನು ಸೃಷ್ಟಿಸಿದ್ದನ್ನು ಮತ್ತು 1932ರಲ್ಲಿ ನನ್ನ ವಿರುದ್ಧ ವೈಸ್ ರೀಗಲ್ ಕ್ರಮವನ್ನು ಕೈಗೊಳ್ಳಲು ಇದೇ ಕಾರಣ ಇರಬಹುದು ಎಂಬ ಅಭಿಪ್ರಾಯವನ್ನು ಹಂಚಿಕೊಂಡರು. ಹಾಗಾಗಿ ಈ ಕುರಿತು ನಾನು ಒಂದು ಸ್ಪಷ್ಟೀಕರಣ ನೀಡುವುದು ಉಚಿತ ಎಂಬುದು ಅವರ ಅಂಬೋಣವಾಗಿತ್ತು. ನಾನು ಈ ವರದಿಗಳನ್ನು ಈಗ ಹಲವಾರು ಬಾರಿ ಓದಿದ್ದೇನೆ. A ಮತ್ತು C (ಬಹುಶಃ ಅವರ ಪತ್ರಕ್ಕೆ ಲಗತ್ತಿಸಲಾದ ಅನುಬಂಧಗಳು) ಏನು ನಡೆಯಿತು ಎಂಬುದು ಕೇವಲ ಹಾಸ್ಯಾಸ್ಪದ ಸೃಷ್ಟಿಗಳು ಎಂದು ನಾನು ಯಾವುದೇ ಹಿಂಜರಿಕೆಯಿಲ್ಲದೆ ಹೇಳಬಲ್ಲೆ. ಇವು ಇಟಾಲಿಯನ್ ಪತ್ರಕರ್ತರೊಬ್ಬರಿಗೆ ನಾನು ಕೊಟ್ಟ ದೀರ್ಘ ಹೇಳಿಕೆಯ ಸಾರಾಂಶಗಳು ಎಂದು ಈ ವರದಿಗಳು ಹೇಳುತ್ತವೆ. C ಯಲ್ಲಿ (ಮತ್ತೆ ಅನುಬಂಧಗಳ ಸಂಭವನೀಯ ಉಲ್ಲೇಖ) ಟೈಮ್ಸ್ ವರದಿಗಾರ, ಆಪಾದಿತ ಸಂದರ್ಶನದ ಬಗ್ಗೆ ನಾನು ಕೊಟ್ಟೆ ಎನ್ನಲಾದ ನನ್ನ ಸ್ಪಷ್ಟನೆಯನ್ನು ನೋಡಿ, ಶ್ರೀಯುತ ಗೈದಾ ಯಾವುದೇ ಔಪಚಾರಿಕ ಸಂದರ್ಶನ ಕೊಡುವಂತೆ ವಿನಂತಿಸಲಿಲ್ಲ ಮತ್ತು ಅಂತಹ ಯಾವುದೇ ಸಂದರ್ಶನವನ್ನು ಕೊಡಲಿಲ್ಲ ಅನ್ನುವ ಮಟ್ಟಿಗೆ ನಾನು ಹೇಳಿದ್ದು ಸರಿ ಇರಬಹುದು ಎಂದು ತಡವರಿಸಿ ಒಪ್ಪಿಕೊಳ್ಳುತ್ತಾನೆ. ಆದರೆ ನಾನು ಹೇಳಿದ್ದೆ ಎನ್ನಲಾದ ಮಾತುಗಳು ಬಹುತೇಕ ಸತ್ಯ ಎಂದು ವಾದಿಸುತ್ತಾನೆ. ಆದರೆ ನಾನು ಎ ಮತ್ತು ಸಿ ಅನ್ನು ವಿಶ್ಲೇಷಿಸುವುದಕ್ಕಿಂತಲೂ, ನನಗೆ ಇದರ ಬಗ್ಗೆ ಏನು ತಿಳಿದಿಲ್ಲವೋ ಅದನ್ನು ನೇರವಾಗಿ ಹೇಳುವುದರಿಂದ ಸತ್ಯಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ…’’.

ಶ್ರೀಯುತ ಗೈದಾ ಅವರಿಗೆ ತಾನು ಯಾವುದೇ ಸಂದರ್ಶನವನ್ನು ನೀಡಿಲ್ಲ ಮತ್ತು ತಮ್ಮನ್ನು ಭೇಟಿಯಾಗಲು ಅವರನ್ನು ಎಂದಿಗೂ ಆಹ್ವಾನಿಸಲಾಗಿರಲಿಲ್ಲ ಎಂದು ಗಾಂಧಿ ಹೇಳುತ್ತಾರೆ, ಆದರೆ ಗಾಂಧಿಯವರ ಇಟಾಲಿಯನ್ ಸ್ನೇಹಿತರೊಬ್ಬರು ಗಾಂಧಿಯವರನ್ನು ತಮ್ಮ ಮನೆಗೆ ಖಾಸಗಿ ಭೇಟಿಗೆ ಕರೆದ ಸಂದರ್ಭದಲ್ಲಿ ಕೆಲವು ಇಟಾಲಿಯನ್ ನಾಗರಿಕರನ್ನು ತಮಗೆ ಪರಿಚಯಿಸಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಗಾಂಧಿಯವರು ತಮ್ಮ ದೀರ್ಘವಾದ ಸ್ಪಷ್ಟೀಕರಣ ಪತ್ರದಲ್ಲಿ ತಮ್ಮ ವಿರುದ್ಧ ಮಾಡಲಾದ ಆರೋಪಗಳ ಪ್ರತೀ ಅಂಶವನ್ನು ಖಂಡಿಸುತ್ತಾ, ‘‘ನಾನು ಈ ಪತ್ರವನ್ನು ಪ್ರಕಟಿಸುತ್ತಿಲ್ಲ. ನಾನು ನನ್ನ ಹಲವಾರು ಸ್ನೇಹಿತರಿಗೆ ಅವರ ಖಾಸಗಿ ಓದಿಗಾಗಿ ಮಾತ್ರ ಇದರ ಪ್ರತಿಗಳನ್ನು ಕಳುಹಿಸುತ್ತಿದ್ದೇನೆ. ಆದರೆ ನಿಮಗೆ ಸಾಧ್ಯವಾದರೆ ನೀವು ಇದನ್ನು ಪ್ರಚಾರ ಮಾಡಲು ಅಥವಾ ಬರ್ಮಿಂಗ್ಹ್ಯಾಮ್ನಲ್ಲಿ ವಾಸವಿರುವ ಶ್ರೀ ಸಿ.ಎಫ್. ಆ್ಂಯಡ್ರ್ಯೂಸ್ ಅವರು ಬಯಸಿದರೆ, ಅವರಿಗೆ ಸರಿ ಕಂಡಂತೆ ಅವರು ಅದನ್ನು ಸಾರ್ವಜನಿಕವಾಗಿ ಬಳಸಿಕೊಳ್ಳಲು ನನ್ನ ಒಪ್ಪಿಗೆ ಇದೆ’’ ಎಂದು ಹೇಳುತ್ತಾರೆ.

ಸರ್ ಸ್ಯಾಮ್ಯುಯೆಲ್ ಅವರು ಎಪ್ರಿಲ್ 7, 1934ರಂದು ಗಾಂಧಿಯವರಿಗೆ ಬರೆದ ಪ್ರತಿಕ್ರಿಯೆಯಲ್ಲಿ ಹೀಗೆ ಬರೆದಿದ್ದಾರೆ: ‘‘ಈ ನಿರ್ದಿಷ್ಟ ಘಟನೆಯು ನನ್ನ ನೆನಪಿನಲ್ಲಿ ಇಲ್ಲದಿದ್ದರೂ, ಈ ಸತ್ಯಾಂಶ ಗಳನ್ನು ನೀವು ನನ್ನ ಸುಪರ್ದಿಗೆ ಒಪ್ಪಿಸುವ ನಿಮ್ಮ ಇಚ್ಛೆಯನ್ನು ನಾನು ಗೌರವಿಸುತ್ತೇನೆ’’.

ರೋಮ್ನಲ್ಲಿ ಕೊಟ್ಟಿದ್ದರೆನ್ನಲಾದ ಸಂದರ್ಶನದಲ್ಲಿ ಪ್ರಸ್ತಾಪವಾದ ಕೆಲವು ಅಂಶಗಳು ಲಂಡನ್ನಲ್ಲಿ ನಡೆದ ದುಂಡು ಮೇಜಿನ ಸಭೆಯ ಕೊನೆಗೆ ಶ್ರೀಯುತ ಗಾಂಧಿಯವರು ಮಾಡಿದ ಹೇಳಿಕೆಗಳೊಂದಿಗೆ ತಾಳೆಹಾಕುತ್ತಿದ್ದವು ಎಂಬ ಕಾರಣಕ್ಕೆ ಈ ಕಲ್ಪಿತ ಸಂದರ್ಶನವನ್ನು ಇಂಗ್ಲೆಂಡ್ನವರು ಹೆಚ್ಚು ಬಳಸಿಕೊಂಡರು. ಸಭೆಯ ಕೊನೆಗೆ ಬ್ರಿಟನ್ನ ಪ್ರಧಾನ ಮಂತ್ರಿಯವರು ಮಾಡಿದ ನೀತಿ ಘೋಷಣೆಯನ್ನು ಕೇಳಿದ ನಂತರ, ಶ್ರೀಯುತ ಗಾಂಧಿಯವರು,‘ನಾವು ಬೇರೆ ಬೇರೆ ಮಾರ್ಗ ಹಿಡಿಯುವ ಹಂತ ತಲುಪಿದ್ದೇವೆಯೇನು?’ ಎಂದು ಪ್ರಶ್ನಿಸಿದ್ದರು ಮತ್ತು ಅವರು ಪ್ರಧಾನಿಯವರ ಹೇಳಿಕೆಯಲ್ಲಿದ್ದ ಸುಪ್ತಾರ್ಥಗಳ ಬಗ್ಗೆ ಕೂಡ ಮಾತನಾಡಿದ್ದರು.

‘‘ಸಂದರ್ಶಕರಾದ ಸಿನ್ಯೋರ್ (ಶ್ರೀಯುತ) ಗೈದಾ ಅವರಿಗೆ ಶ್ರೀಯುತ ಗಾಂಧಿಯವರ ಇಂಗ್ಲಿಷ್ ಅಷ್ಟು ಸುಲಭವಾಗಿ ಅರ್ಥವಾಗಿರಲಿಕ್ಕಿಲ್ಲ; ವ್ಯಕ್ತಿಯೊಬ್ಬನಿಗೆ ಹಲವು ದಿಕ್ಕುಗಳಿಂದ ಪ್ರಶ್ನೆಗಳನ್ನು ಕೇಳಿದಾಗ, ಅವರು ಕೊಟ್ಟ ಹಲವು ಉತ್ತರಗಳಿಂದ ವರದಿಗಾರನೊಬ್ಬ, ಪ್ರಶ್ನೆಗಳನ್ನು ಪ್ರಸ್ತುತಪಡಿಸದೆ, ತನಗೆ ತೋಚಿದಂತೆ ಒಂದು ಕಥಾನಕವನ್ನು ಹೆಣೆದಾಗ, ಅಲ್ಲಿ ಮಾತುಗಳನ್ನು ತಿರುಚುವ, ತಪ್ಪಾಗಿ ಅರ್ಥೈಸುವ ಸಾಧ್ಯತೆ ಹೆಚ್ಚಿರುತ್ತದೆ,’’ ಎಂದು ಹೊರೇಸ್ ಅಲೆಕ್ಸಾಂಡರ್ ಒಕ್ಕಣಿಸುತ್ತಾರೆ.

LEAVE A REPLY

Please enter your comment!
Please enter your name here