ಬೆಂಗಳೂರು:
ಭ್ರಷ್ಟಾಚಾರ ಆರೋಪದಡಿ ತಮ್ಮ ವಿರುದ್ಧ ವಿಧಾನಸಭೆಯ ವಿಶೇಷ ಮಂಡಳಿ ಆರಂಭಿಸಿರುವ ವಿಚಾರಣೆ ರದ್ದುಗೊಳಿಸುವಂತೆ ಕೋರಿ ವಿಧಾನಸಭೆಯ ಕಾರ್ಯದರ್ಶಿ ಹುದ್ದೆಯಿಂದ ಅಮಾನತುಗೊಂಡಿರುವ ಎಸ್. ಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎನ್.ಎಸ್. ಸಂಜಯ್ ಗೌಡ ಅವರಿದ್ದ ಏಕಸದಸ್ಯ ಪೀಠ, ಆರು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸುವಂತೆ ವಿಧಾನಸಭೆಯ ವಿಶೇಷ ಮಂಡಳಿಗೆ ಸೂಚಿಸಿದೆ.
ವಿಶೇಷ ಮಂಡಳಿಯ ಅನುಮೋದನೆ ಪಡೆಯದೆ ದೋಷಾರೋಪಣೆ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದು ಮೂರ್ತಿ ಆರೋಪಿಸಿದ್ದರು.
2016 ಮತ್ತು 2017ನೇ ಸಾಲಿನಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನಮಂಡಲ ಅಧಿವೇಶನಗಳ ಸಮಯದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆಸಿರುವ ಆರೋಪದ ಮೇಲೆ ಮೂರ್ತಿ ಅವರನ್ನು ಹುದ್ದೆಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿತ್ತು. ನಂತರ ಮೂರ್ತಿ ವಿರುದ್ಧ ವಿಶೇಷ ಮಂಡಳಿಯಿಂದ ವಿಚಾರಣೆ ಕೂಡ ಆರಂಭಿಸಲಾಗಿದೆ.