Home ಕರ್ನಾಟಕ ಲೋಕಸಭಾ ಚುನಾವಣೆ: ಶಸ್ತ್ರಾಸ್ತ್ರಗಳ ಠೇವಣಿಗೆ ಸೂಚನೆ

ಲೋಕಸಭಾ ಚುನಾವಣೆ: ಶಸ್ತ್ರಾಸ್ತ್ರಗಳ ಠೇವಣಿಗೆ ಸೂಚನೆ

3
0

ಉಡುಪಿ, ಮಾ.18: ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ಮುಂದಿನ ಎ.26ರಂದು ಉಡುಪಿ ಹಾಗೂ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಶಸ್ತ್ರಾಸ್ತ್ರಗಳ ಠೇವಣಿ ಕಾರ್ಯಕ್ಕೆ ಸ್ಕೃಿನಿಂಗ್ ಸಮಿತಿ ರಚನೆಯಾಗಿದೆ.

ಜಿಲ್ಲೆಯಲ್ಲಿ ಮುಕ್ತ ನ್ಯಾಯಯುತ ಹಾಗೂ ನಿಷ್ಪಕ್ಷಪಾತವಾದ ಚುನಾವಣೆ ನಡೆಸುವುದನ್ನು ಖಾತ್ರಿಪಡಿಸುವ ಸಲುವಾಗಿ ಆಯುಧ ಪರವಾನಿಗೆ ಹೊಂದಿರುವ ಪರವಾನಿಗೆದಾರರನ್ನು ಪೂರ್ವಭಾವಿ ಪರಿಶೀಲನೆ ಮಾಡಿ ಚುನಾವಣೆಯ ಅವಧಿಯಲ್ಲಿ ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಮತ್ತು ಸಾರ್ವಜನಿಕ ಸುರಕ್ಷತೆ ಕಾಪಾಡುವ ದೃಷ್ಟಿಯಿಂದ ಆಯುಧ, ಶಸ್ತ್ರಾಸ್ತ್ರ, ಮಾರಕಾಯುಧಗಳು ಹಾಗೂ ಮದ್ದುಗುಂಡುಗಳನ್ನು ಹೊಂದುವುದು, ಸಾಗಿಸುವುದು ಮತ್ತು ಬಳಸುವುದರ ಮೇಲೆ ನಿರ್ಭಂಧಗಳನ್ನು ವಿಧಿಸುವುದು ಅತೀ ಅವಶ್ಯಕವೆಂದು ಮನಗಂಡು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಡಾ ಕೆ.ವಿದ್ಯಾಕುಮಾರಿ ಅವರು ದಂಡಪ್ರಕ್ರಿಯೆ ಸಂಹಿತೆಯ 144ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಾದ್ಯಂತ ಆದೇಶ ಹೊರಡಿಸಿದ ದಿನಾಂಕದಿಂದ ಲೋಕಸಭಾ ಚುನಾವಣೆ ಪ್ರಕ್ರಿಯೆ ಸಂಪೂರ್ಣವಾಗಿ ಮುಕ್ತಾಯ ಗೊಳ್ಳುವವರೆಗಿನ ಅವಧಿಯಲ್ಲಿ ಯಾವುದೇ ಶಸ್ತ್ರಾಸ್ತ್ರಗಳು, ಆಯುಧಗಳು ಮತ್ತು ಮದ್ದುಗುಂಡು ಗಳೊಂದಿಗೆ ಸಂಚರಿಸುವುದನ್ನು ಮತ್ತು ಅವುಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಆತ್ಮರಕ್ಷಣೆಗಾಗಿ ಮತ್ತು ಬೆಳೆ ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಿಗೆ ಹೊಂದಿರುವ ಎಲ್ಲಾ ಅಧಿಕೃತ ಪರವಾನಿಗೆದಾರರು ತಮ್ಮ ಪರವಾನಿಗೆಯಲ್ಲಿ ಹೊಂದಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು (ಎಸ್‌ಬಿಬಿಎಲ್/ಡಿಬಿಬಿಎಲ್/ಎಸ್‌ಬಿಎಂಎಲ್/ಡಿಬಿಎಂಎಲ್/ಎನ್‌ಪಿಬಿ ರೈಫಲ್/ ರಿವಾಲ್ವರ್/ ಪಿಸ್ತೂಲ್) ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಅಥವಾ ಅಧಿಕೃತವಾಗಿ ಪರವಾನಿಗೆ ಹೊಂದಿರುವ ಡೀಲರ್ ಶಾಪ್‌ಗಳಲ್ಲಿ ಮಾತ್ರ ಕಡ್ಡಾಯವಾಗಿ ವಿಳಂಬ ಮಾಡದೇ ಠೇವಣಿ ಮಾಡಿ ರಶೀದಿ ಪಡೆಯಬೇಕು.

ಚುನಾವಣಾ ನೀತಿ ಸಂಹಿತೆ ಮುಕ್ತಾಯಗೊಂಡ ನಂತರ ಶಸ್ತ್ರಾಸ್ತ್ರ ಠೇವಣಿ ಪಡೆದ ಠಾಣಾಧಿಕಾರಿಗಳಿಂದ ಅಥವಾ ಡೀಲರ್‌ ಗಳಿಂದ ಪರವಾನಿಗೆದಾರರು ಶಸ್ತ್ರಾಸ್ತ್ರಗಳನ್ನು ಮತ್ತೆ ಪಡೆದುಕೊಳ್ಳಬಹುದಾಗಿದೆ.

ಈ ನಿಷೇಧ ಆದೇಶವು ಸರಕಾರಿ ಕರ್ತವ್ಯಕ್ಕೆ ಹಾಗೂ ಬ್ಯಾಂಕ್ ಸೆಕ್ಯೂರಿಟಿ ಸಂಸ್ಥೆಗಳ ಭದ್ರತೆ ಹಾಗೂ ಸುರಕ್ಷತಾ ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆ ವೇಳೆ ಶಸ್ತ್ರಾಸ್ತ್ರ ಆಯುಧ ಬಳಸುವುದಕ್ಕೆ ಅನ್ವಯವಾಗುವುದಿಲ್ಲ.

ಈ ಠೇವಣಿ ಆದೇಶದಿಂದ ವಿನಾಯಿತಿ ಕೋರುವ ಶಸ್ತ್ರ ಪರವಾನಿಗೆ ದಾರರು ಮಾರ್ಚ್ 21ರ ಒಳಗೆ ಅರ್ಜಿಗಳನ್ನು ಸಲ್ಲಿಸಬೇಕು. ಈ ಅರ್ಜಿಗಳನ್ನು ಸ್ಕೃಿನಿಂಗ್ ಸಮಿತಿ ಮುಂದೆ ಮಂಡಿಸಿ ಅರ್ಜಿಗಳ ಅವಶ್ಯಕತೆ ಹಾಗೂ ನೈಜತೆಯ ಬಗ್ಗೆ ಪರಿಶೀಲಿಸಿ ಸಮಿತಿಯ ನಿರ್ಣಯದಂತೆ ವಿನಾಯಿತಿ ನೀಡುವ ಬಗ್ಗೆ ಕ್ರಮಕೈಗೊಳ್ಳಲಾಗುವುದು.

ಮೇಲಿನ ಆದೇಶಕ್ಕೆ ವ್ಯತಿರಿಕ್ತವಾಗಿ ಹಾಗೂ ಯಾವುದೇ ರೀತಿಯ ಕಾನೂನು ಬಾಹಿರವಾಗಿ ಪರವಾನಿಗೆ ರಹಿತ ಶಸ್ತ್ರಾಸ್ತ್ರ ಹಾಗೂ ಆಯುಧ ಇತ್ಯಾದಿಗಳ ಸಂಗ್ರಹಣೆ, ಬಳಕೆ ಹಾಗೂ ಸಾಗಾಟ ಮಾಡುತ್ತಿರುವ ಸುಳಿವು ದೊರೆತಲ್ಲಿ ಈ ಕುರಿತು ಹತ್ತಿರದ ಪೋಲೀಸ್ ಠಾಣೆಗೆ ತಕ್ಷಣವೇ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here