ಹುಬ್ಬಳ್ಳಿ: ಅಸಂಘಟಿತ ಕಾರ್ವಿುಕ ವಲಯದಲ್ಲಿರುವ ಶ್ರಮಜೀವಿಗಳ ಶ್ರೇಯೋಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕ ಸ್ವಾವಲಂಬನೆಯ ಅಭಯ ನೀಡಿದ್ದಾರೆ. ಆರ್ಥಿಕವಾಗಿ ಸದೃಢರಾಗುವುದರ ಜತೆಗೆ ದೇಶಕ್ಕೆ ತೆರಿಗೆದಾತರಾಗಲು ಪ್ರೇರೇಪಿಸಿದ್ದಾರೆ ಎಂದು ಪಿಎಂ ಸ್ವ-ನಿಧಿ ರಾಜ್ಯ ಸಂಚಾಲಕ, ಮಾಜಿ ಸಚಿವ ಎ. ರಾಮದಾಸ ಅವರು ಹೇಳಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪಿಎಂ ಸ್ವ-ನಿಧಿ ಕುರಿತ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಇತರ ಕಾಯಕಯೋಗಿಗಳಿಗೆ ಸ್ವ-ನಿಧಿಯಿಂದ ಸಮೃದ್ಧಿವರೆಗೆ ಮಹೋತ್ತರ ಲಾಭಗಳಿವೆ. ರಾಜ್ಯದ 315 ಸ್ಥಳೀಯ ಸಂಸ್ಥೆಗಳ ಮೂಲಕ ಲಾಭದ ಅರಿವು ಮೂಡಿಸಲಾಗುತ್ತಿದೆ. ರಾಜ್ಯದ 18 ಜಿಲ್ಲೆಗಳ 5,102ಗ್ರಾಮ ಪಂಚಾಯಿತಿಗಳಲ್ಲೂ ಇದನ್ನು ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ ಎಂದರು.
ಪಿಎಂ ಸ್ವ-ನಿಧಿ ಅಡಿ ಮೊದಲು 10 ಸಾವಿರ ರೂ. ಸಾಲ ಪಡೆಯುವ ಫಲಾನುಭವಿ ಸರಿಯಾಗಿ ಬ್ಯಾಂಕ್ಗೆ ಮರುಪಾವತಿ ಮಾಡಿದರೆ, ಹಂತ ಹಂತವಾಗಿ 10 ಲಕ್ಷ ರೂ. ವರೆಗೂ ಸಾಲ ಪಡೆಯಬಹುದು. ಇದರ ಜತೆಗೆ ಅನೇಕ ಯೋಜನೆಗಳನ್ನು ಒಟ್ಟುಗೂಡಿಸಲಾಗಿದೆ. ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳನ್ನು ಭೇಟಿಯಾದರೆ ಮತ್ತಷ್ಟು ಮಾಹಿತಿ ನಿಮಗೆ ಲಭಿಸಲಿದೆ ಎಂದು ತಿಳಿಸಿದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರ ಸಬಲೀಕರಣಕ್ಕೆ ಹಲವು ಯೋಜನೆ ಜಾರಿಗೆ ತಂದಿದೆ. ಮೋದಿ ಅವರು ಕನಸಿನ ಭಾರತ ಸಾಕಾರಕ್ಕೆ ಮುಂದಡಿ ಇಟ್ಟಿದ್ದಾರೆ. ಅವರೊಟ್ಟಿಗೆ ಕೈಜೋಡಿಸುವ ಅಗತ್ಯವಿದೆ. ಸ್ವಾಭಿಮಾನಿ-ಸಮೃದ್ಧ ಭಾರತ ನಿರ್ವಣದತ್ತ ನಾವೆಲ್ಲರೂ ದಾಪುಗಾಲಿಡೋಣ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ, ಧಾರವಾಡ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಭುದೇವ ಎನ್.ಜಿ. ಮಾತನಾಡಿದರು. ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮೇಯರ್ ವೀಣಾ ಬರದ್ವಾಡ, ಪಾಲಿಕೆ ಪ್ರತಿಪಕ್ಷ ನಾಯಕಿ ಸುವರ್ಣಾ ಕಲ್ಲಕುಂಟ್ಲಾ, ಸದಸ್ಯರಾದ ವಿಜಯಾನಂದ ಶೆಟ್ಟಿ, ರೂಪಾ ಶೆಟ್ಟಿ, ಸಂತೋಷ ಚವ್ಹಾಣ, ಶಿವು ಹಿರೇಮಠ, ಉಮಾ ಮುಕುಂದ, ಸುನಿತಾ ಮಾಳವದೆಕರ, ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಮನೋಹರ ಪರ್ವತಿ, ಹೋರಾಟಗಾರ ಪ್ರೇಮನಾಥ ಚಿಕ್ಕತುಂಬಳ ಇತರರು ಇದ್ದರು.
The post ಶ್ರಮಜೀವಿಗಳಿಗೆ ಪ್ರಧಾನಿ ಮೋದಿ ಅಭಯ -ಎ. ರಾಮದಾಸ appeared first on Ain Live News.