ಉಡುಪಿ: ದೇಶದ ಸಂವಿಧಾನವನ್ನು ಬದಲಿಸುವ ಹುನ್ನಾರವನ್ನು ಬಿಜೆಪಿ ನಡೆಸಿದೆ. ಇದು ಬಿಜೆಪಿಯ ಹಿಡನ್ ಅಜೆಂಡಾ ಆಗಿದ್ದು, ದೇಶದ ಜನ ಇದನ್ನು ವಿಫಲಗೊಳಿಸಬೇಕು. ದೇಶದ ಸಂವಿಧಾನ ಉಳಿದರೆ ಮಾತ್ರ ದೇಶ ಉಳಿಯುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಉಡುಪಿಯ ಎಂಜಿಎಂ ಕಾಲೇಜಿನ ಆರೂರು ಲಕ್ಷ್ಮೀನಾರಾಯಣ ರಾವ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಬುಧವಾರ ಆಯೋಜಿಸಲಾದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಸಮಾವೇಶ, ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ವಿವಿಧ ಕಾಮಗಾರಿಗಳನ್ನು ಅಡಿಕೆ ಪಿಂಗಾರವನ್ನು ಅರಳಿಸಿ, ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಂವಿಧಾನವನ್ನು ಬದಲಿಸುವುದಕ್ಕಾಗಿಯೇ ಅಧಿಕಾರಕ್ಕೆ ಬಂದಿರುವುದಾಗಿ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಇದೀಗ ಎರಡನೇ ಬಾರಿಗೆ ಹೇಳಿದ್ದಾರೆ. ಅವರೇನೂ ಪಕ್ಷದ ಸಾಮಾನ್ಯ ಕಾರ್ಯಕರ್ತನಲ್ಲ. ಐದಾರು ಬಾರಿ ಸಂಸತ್ ಸದಸ್ಯರಾಗಿ ಆಯ್ಕೆಯಾದವರು, ಮಾಜಿ ಕೇಂದ್ರ ಸಚಿವರು ಎಂದರು.
ಡಾ.ಅಂಬೇಡ್ಕರ್ ನೀಡಿದ ಸಂವಿಧಾನದ ಬದಲು ಮನುಸ್ಮೃತಿ ಜಾರಿ ಬಿಜೆಪಿ ಹುನ್ನಾರ. ಬಡವರು, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು, ಕಾರ್ಮಿಕರು, ಹಿಂದುಳಿದವರು ಈ ದೇಶದಲ್ಲಿ ಬದುಕಲು ಸಂವಿಧಾನ ಉಳಿಯಲೇಬೇಕು. ಹೀಗಾಗಿ ಬಿಜೆಪಿಯ ಹುನ್ನಾರಕ್ಕೆ ಬಲಿಯಾಗಬೇಡಿ, ದೇಶವನ್ನು ಉಳಿಸಿ ಎಂದರು.
ಗೋಬ್ಯಾಕ್ ಬಿಜೆಪಿ…: ಜನರಿಗೆ ಸುಳ್ಳು ಹೇಳಿ, ಜನರ ದಾರಿ ತಪ್ಪಿಸಿ ನರೇಂದ್ರ ಮೋದಿ ಕಳೆದ ಹತ್ತು ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಇನ್ನು ಸಾಕು. ಅಧಿಕಾರದಿಂದ ಅವರನ್ನು ತೆಗೆದುಹಾಕಿ. ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರಿಗೆ ಕ್ಷೇತ್ರದ ಜನತೆ ಗೋಬ್ಯಾಕ್…ಗೋಬ್ಯಾಕ್ ಹೇಳುತಿದ್ದಾರೆ. ಇದರೊಂದಿಗೆ ಬಿಜೆಪಿ ಗೋ ಬ್ಯಾಕ್…ಎಂದರೆ ಬಿಜೆಪಿಯನ್ನು ಗೋಬ್ಯಾಕ್ ಮಾಡಿದರೆ ದೇಶ ಉಳಿಯುತ್ತದೆ, ರಾಜ್ಯ ಉಳಿಯುತ್ತದೆ ಎಂದು ಸಿದ್ದರಾಮಯ್ಯ ನುಡಿದರು.
ಬೆಲೆ ಏರಿಕೆಯಿಂದ ಕಷ್ಟದಲ್ಲಿರುವ ಜನರಿಗೆ ಆರ್ಥಿಕ ಬಲ ನೀಡಲು ಗ್ಯಾರಂಟಿಗಳನ್ನು ನೀಡುವ ಮೂಲಕ ಬಹವರ ಪರ ಕೆಲಸ ಮಾಡುವುದು ಕಾಂಗ್ರೆಸ್ ಸರಕಾರ ಗುರಿಯಾಗಿದೆ. ಆದರೆ ಬಿಜೆಪಿ ಗ್ಯಾರಂಟಿ ಯೋಜನೆ ಗಳ ಬಗ್ಗೆ ತಪ್ಪು ಮಾಹಿತಿ ಕೊಡುತ್ತಿದೆ. ಫಲಾನುಭವಿಗಳಿಗೆ, ರಾಜ್ಯದ ಜನತೆಗೆ ಈ ಬಗ್ಗೆ ತಿಳಿಸಲು, ಬಿಜೆಪಿ ಆರೋಪ ಸುಳ್ಳು ಎಂದು ಖಾತ್ರಿ ಮಾಡಲು ಪ್ರತಿ ಜಿಲ್ಲೆಗಳಲ್ಲೂ ಇಂಥ ಸಮಾವೇಶವನ್ನು ಮಾಡುತ್ತಿದ್ದೇವೆ ಎಂದರು.
ಅನುಷ್ಠಾನ ಸಮಿತಿ ರಚನೆ: ಗ್ಯಾರಂಟಿ ಯೋಜನೆಗಳು ರಾಜ್ಯದ ಮೂಲೆಮೂಲೆಗಳಲ್ಲಿ ಪ್ರತಿಯೊಬ್ಬರಿಗೂ ತಲುಪಬೇಕೆಂಬ ಉದ್ದೇಶದಿಂದ ರಾಜ್ಯದಲ್ಲಿ ಹಾಗೂ ಪ್ರತಿ ಜಿಲ್ಲಾ ಮಟ್ಟದಲ್ಲಿ ಅನುಷ್ಠಾನ ಸಮಿತಿಗಳನ್ನು ರಚಿಸಿದ್ದೇವೆ. ಎಚ್.ಎಂ.ರೇವಣ್ಣ ರಾಜ್ಯಮಟ್ಟದ ಸಮಿತಿಗೆ ಅಧ್ಯಕ್ಷರು. ಸಮಿತಿಯ ಉಪ್ಧ್ಯಾಕ್ಷರಾದ ಪುಷ್ಪಾ ಅಮರನಾಥ್ ಇಲ್ಲಿದ್ದಾರೆ. ಜಿಲ್ಲಾ ಮಟ್ಟದಲ್ಲೂ ಗ್ಯಾರಂಟಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಜಿಲ್ಲಾ ಮಟ್ಟದ ಸಮಿತಿ ರಚನೆಯಾಗಿದ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ಗ್ಯಾರಂಟಿಗಳಿಂದಾಗಿ ಅಭಿವೃದ್ಧಿಗೆ ದುಡ್ಡು ಇರಿಸಲು ಸಾಧ್ಯವಿಲ್ಲ ಎಂಬ ಟೀಕೆ ಕೇಳಿಬಂದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದಲ್ಲಿ ಮಾತನಾಡುತ್ತಾ ಕರ್ನಾಟಕದ ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿ ಯಾಗುತ್ತದೆ, ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದಿದ್ದರು.
ಬನ್ನಿ.. ಚರ್ಚೆಗೆ ಬನ್ನಿ: ಆದರೆ ನಾವು ಕೊಟ್ಟ ಮಾತಿನಂತೆ ನಡೆದು ಕೊಂಡಿದ್ದೇವೆ. ಗ್ಯಾರಂಟಿ ಯೋಜನೆಗೆ ಈ ವರ್ಷದ ಬಜೆಟ್ನಲ್ಲಿ 36 ಸಾವಿರ ಕೋಟಿ ಖರ್ಚು ಮಾಡುತ್ತಿದ್ದೇವೆ. ಮುಂದಿನ ವರ್ಷಕ್ಕೆ 52,092 ಕೋಟಿ ರೂ.ಗಳನ್ನು ಬಜೆಟ್ನಲ್ಲಿ ಗ್ಯಾರಂಟಿಗಾಗಿ ಇಟ್ಟಿದ್ದೇವೆ ಎಂದು ರಾಜ್ಯದ ಜನತೆಗೆ ಮಾಹಿತಿ ನೀಡಿದ ಸಿದ್ದರಾಮಯ್ಯ, ಪ್ರಧಾನಿಗಳೇ, ಕರ್ನಾಟಕ ಆರ್ಥಿಕ ದಿವಾಳಿಯಾಗಿಲ್ಲ ಎಂದು ಘೋಷಿಸಿದರು.
ಅಲ್ಲದೇ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನೂ ನಡೆಸಲಾಗುತ್ತಿದೆ. ಅಭಿವೃದ್ಧಿ ಹಾಗೂ ಗ್ಯಾರಂಟಿಗಳಿಗೆ ಸೇರಿ ಈ ಬಾರಿಯ ಬಜೆಟ್ನಲ್ಲಿ ಒಟ್ಟು 1,20,000 ಕೋಟಿ ರೂ.ಗಳನ್ನು ಇರಿಸಲಾಗಿದೆ. ಓ ಬಸವರಾಜ ಬೊಮ್ಮಾಯಿ, ಅಶೋಕಾ…, ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಯಡಿಯೂರಪ್ಪಾ ಯಾಕ್ರಿ ಸುಳ್ಳು ಹೇಳ್ತೀರಾ.. ಬನ್ನಿ ಒಂದೇ ವೇದಿಕೆಗೆ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.
ರಾಜ್ಯದಿಂದ ಈ ವರ್ಷ ತೆರಿಗೆ ರೂಪದಲ್ಲಿ ಒಟ್ಟು 4.30 ಲಕ್ಷ ಕೋಟಿ ರೂ.ಗಳನ್ನು ಕೇಂದ್ರಕ್ಕೆ ಕೊಟ್ಟಿದ್ದೇವೆ. ಇದರಲ್ಲಿ ರಾಜ್ಯಕ್ಕೆ ಮರಳಿ ಬಂದಿರುವುದು ಕೇವಲ 50,257 ಕೋಟಿ ರೂ.ಮಾತ್ರ. ಇದು ಅನ್ಯಾಯ ಅಲ್ವಾ…ಪ್ರಧಾನಿ ಮೋದಿ ಅವರ ಕಾಲದಲ್ಲಿ ಕರ್ನಾಟಕಕ್ಕೆ ದೊಡ್ಡ ಅನ್ಯಾಯವಾಗಿದೆ. ಈ ಬಗ್ಗೆ ನಮ್ಮ ಶೋಭಾ ಸೇರಿದಂತೆ ರಾಜ್ಯದ ಯಾವುದೇ ಸಂಸತ್ ಸದಸ್ಯರು ತುಟಿ ಬಿಚ್ಚಿಲ್ಲ ಎಂದು ಆರೋಪಿಸಿದರು.
ಶೋಭಾ ಕರಂದ್ಲಾಜೆಯನ್ನು ಗೆಲ್ಲಿಸಬೇಡಿ: ಕೇಂದ್ರ ಸರಕಾರದಿಂದ ರಾಜ್ಯಕ್ಕಾದ ತೆರಿಗೆ ಅನ್ಯಾಯದ ಬಗ್ಗೆ ಶೋಭಾ ಒಂದಿನನೂ ಮಾತನಾಡಿಲ್ಲ. ಅನ್ಯಾಯ ಆಗಿದೆ ಎಂದು ಹೇಳದೆ 7ಕೋಟಿ ಕನ್ನಡಿಗರಿಗೆ ಸಂಸದರು ದ್ರೋಹ ಮಾಡುತ್ತಿದ್ದಾರೆ. ಹೀಗಾಗಿ ಶೋಭಾರನ್ನು ಮತ್ತೆ ಗೆಲ್ಲಿಸಬೇಡಿ ಎಂದು ಕರೆ ನೀಡಿದ ಸಿದ್ಧರಾಮಯ್ಯ, ಅಚ್ಛೇ ದಿನ್ ಆಯೇಂಗೆ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದು ದೂರಿದರು.
2013ರಲ್ಲಿ ನಮ್ಮ ಕಾಂಗ್ರೆಸ್ ಸರಕಾರ ಚುನಾವಣಾ ಪ್ರಣಾಳಿಕೆಯಲ್ಲಿ 165 ಭರವಸೆಗಳನ್ನು ನೀಡಿದ್ದು, ಅವುಗಳಲ್ಲಿ 158ನ್ನು ಈಡೇರಿಸಿದೆ. ಆದರೆ 2018ರಲ್ಲಿ ಬಿಜೆಪಿ ಸರಕಾರ ನೀಡಿದ 600 ಭರವಸೆಗಳಲ್ಲಿ ಈಡೇರಿಸಿದ್ದು 60 ಮ್ತ್ರಾ. ಬಿಜೆಪಿಯವರು ಶೇ.10ನ್ನು ಮಾತ್ರ ಜಾರಿಗೊಳಿಸಿದ್ದರೆ ನಾವು ಶೇ.98ನ್ನು ಅನುಷ್ಠಾನಗೊಳಿಸಿದ್ದೇವೆ ಎಂದರು.
ಬಿಜೆಪಿ ಬಡವರ ಪರ, ಸಾಮಾಜಿಕ ನ್ಯಾಯದ ಪರ ಇಲ್ಲ. ಮೋದಿಜೀ ಕ್ಯೂಂ ಜೂಟ್ ಬೋಲ್ ದಿಯಾ? ಎಂದು ಹಿಂದಿಯಲ್ಲಿ ಮೋದಿಗೆ ಪ್ರಶ್ನೆ ಕೇಳಿದ ಸಿದ್ದರಾಮಯ್ಯ, ಮೋದಿ ಮುಖ ನೋಡಿ ಓಟ್ ಹಾಕ್ತೇವೆ ಅಂತಾರೆ. ನಾನು ನಮ್ಮೂರಲ್ಲಿ ಎರಡು ರಾಮ ಮಂದಿರ ಕಟ್ಟಿಸಿದ್ದೇನೆ. ಅಲ್ಲಿ ಜೈ ಶ್ರೀರಾಮ್ ಅಲ್ಲ ಜೈ ಸೀತಾರಾಮ್ ಹೇಳಿದ್ದೇನೆ ಎಂದರು.
ಬಿಜೆಪಿಯವರು ರಾಮನನ್ನು ಸೀತೆ, ಲಕ್ಷ್ಮಣ, ಹನುಮಂತನಿಂದ ಬೇರ್ಪಡಿ ಸಿದ್ದಾರೆ. ಅಂಜನಾದ್ರಿಗೆ 100 ಕೋಟಿ ಕೊಟ್ಟವ ಹಿಂದು ವಿರೋಧಿ ಆಗ್ತೀನಾ?. ಬಿಜೆಪಿಯವರು ಹಿಂದುತ್ವ ಬಗ್ಗೆ ನಮಗೆ ಪಾಠ ಮಾಡ್ತಾರೆ. ಹೀಗೆ ಜನರ ದಾರಿ ತಪ್ಪಿಸಿ ಮೋದಿಯವರು ಅಧಿಕಾರಕ್ಕೆ ಬರುತಿದ್ದು, 10 ವರ್ಷ ಅಧಿಕಾರ ಆಯ್ತು.. ಸಾಕು ಅಧಿಕಾರದಿಂದ ತೆಗೆದು ಹಾಕಿ ಎಂದರು. ಬಿಜೆಪಿ ಗೋ ಬ್ಯಾಕ್.. ಬಿಜೆಪಿಯನ್ನು ಗೋಬ್ಯಾಕ್ ಮಾಡಿದ್ರೆ ದೇಶ ಉಳಿಯುತ್ತದೆ ಎಂದರು.
ಕರಾವಳಿ ಪ್ರದೇಶದ ಅಭಿವೃದ್ಧಿಗೆ ಬದ್ಧ
ಬಸವಾದಿ ಶರಣರು ನುಡಿದಂತೆ ನಡೆದವರು ನಾವು. ಹೀಗಾಗಿ ನಾವು ಅವರನ್ನು ನೆನಪಿಸಿಕೊಳ್ಳುತ್ತೇವೆ. ವಿಶ್ವಗುರು ಬಸವಣ್ಣರನ್ನು ಸಾಂಸ್ಕೃತಿಕ ನಾಯಕರಾಗಿ ನಾವು ಘೋಷಿಸಿದ್ದೇವೆ. ಜಾತಿ, ಮತ, ಧರ್ಮ ತೊಲಗಿ ಎಲ್ಲರೂ ಸಮಾನವಾಗಿ ಬದುಕಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನುಡಿದರು.
ಈ ಬಾರಿ ಕರಾವಳಿಯ ಜನ ಬಿಜೆಪಿಯ ಬಣ್ಣದ ಮಾತಿಗೆ ಬಲಿಯಾಗಬೇಡಿ. ಬಡವರಿಗೆ, ಮೀನುಗಾರರಿಗೆ ಏನನ್ನೂ ನೀಡದವರು. ಮಾನ ಮರ್ಯಾದೆ ಇಲ್ಲದವರು ಬಿಜೆಪಿಯವರು, ಸುಳ್ಳನ್ನೇ ಹೇಳುತ್ತಾ ಬಂದವರು ಎಂದರು.
ಕರಾವಳಿಯನ್ನು ಅಭಿವೃದ್ಧಿ ಪಡಿಸುವ ಗುರಿ ನಮ್ಮದಾಗಿದೆ. ಮೀನುಗಾರಿಕಾ ಸಚಿವರಾಗಿ ಜಯಪ್ರಕಾಶ್ ಹೆಗ್ಡೆ ಮೀನುಗಾರರಿಗೆ, ಕರಾವಳಿ ಜನರಿಗೆ ಶಕ್ತಿ ತುಂಬುದ ಕೆಲಸ ಮಾಡಿದ್ದಾರೆ. ನಾವು ಮಾತು ಕೊಟ್ಟಂತೆ ನಡೆದುಕೊಳ್ಳು ತ್ತೇವೆ. ನಿಮ್ಮೊಂದಿಗೆ ಸದಾ ನಾವಿರುತ್ತೇವೆ. ಕರಾವಳಿಯ ಸರ್ವಾಂಗೀಣ ಅಭಿವೃದ್ಧಿ ನಮ್ಮ ಗುರಿ. ನಿಮ್ಮ ಬೆಂಬಲ, ಆಶೀರ್ವಾದ ಇರಲಿ. ನಮ್ಮ ಮೇಲೆ ವಿಶ್ವಾಸವಿಡಿ ಎಂದು ಮುಖ್ಯಮಂತ್ರಿಯಾಗಿ ಕೇಳಿಕೊಳ್ಳುತ್ತೇನೆ ಎಂದು ಸಿದ್ದರಾಮಯ್ಯ ನುಡಿದರು.
‘ಚುನಾವಣೆಯವರೆಗೆ ಅಲ್ಲ.. ಮುಂದಿನ ಐದು ವರ್ಷಗಳವರೆಗೆ ಗ್ಯಾರಂಟಿ ಯೋಜನೆ ಜಾರಿಯಲ್ಲಿರುತ್ತದೆ ಎಂದು ನಾನು ಭರವಸೆ ನೀಡುತ್ತೇನೆ. ನಮ್ಮ ಉದ್ದೇಶ ರಾಜ್ಯದ ಬಡವರಿಗೆ ಶಕ್ತಿ ತುಂಬುವುದು. ಪ್ರತಿ ತಿಂಗಳಿಗೆ ಕುಟುಂಬಕ್ಕೆ 4ರಿಂದ 5ಸಾವಿರ ರೂ. ಗ್ಯಾರಂಟಿ ರೂಪದಲ್ಲಿ ನೀಡುತಿದ್ದೇವೆ. ಇದರಿಂದ ವರ್ಷಕ್ಕೆ 50ರಿಂದ 60 ಸಾವಿರ ರೂ. ಹಾಗೂ ಐದು ವರ್ಷಕ್ಕೆ ಮೂರು ಲಕ್ಷ ರೂ. ಪ್ರತಿ ಕುಟುಂಬಕ್ಕೆ ಸಿಗುವಂತೆ ಮಾಡುತಿದ್ದೇವೆ. ಹೇಳಿ ಇದನ್ನು ಮೋದಿ ಯಾವಾತ್ತಾದರೂ ನೀಡಲು ಸಾಧ್ಯವಾ..?’
-ಸಿದ್ದರಾಮಯ್ಯ, ರಾಜ್ಯದ ಮುಖ್ಯಮಂತ್ರಿ.
