Home Uncategorized ಸುಳ್ಯ: ಫ್ಲೆಕ್ಸ್ ಗೆ ಹಾನಿ ಪ್ರಕರಣ ಭೇದಿಸಿದ ಪೊಲೀಸರು: ಹಾನಿ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ

ಸುಳ್ಯ: ಫ್ಲೆಕ್ಸ್ ಗೆ ಹಾನಿ ಪ್ರಕರಣ ಭೇದಿಸಿದ ಪೊಲೀಸರು: ಹಾನಿ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ

9
0

ಸುಳ್ಯ, ಜ.7: ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಆಟೋ ರಿಕ್ಷಾ ಸಂಘದ ವತಿಯಿಂದ ಜಾತ್ರೋತ್ಸವ ಹಾಗೂ ಅಯೋಧ್ಯೆ ಶ್ರೀರಾಮ ಮಂದಿರದ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಶುಭಕೋರಿ ಅಳವಡಿಸಿದ್ದ ಫ್ಲೆಕ್ಸ್ ಹರಿದಿರುವ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮಾನಸಿಕ ಅಸ್ವಸ್ಥನಂತೆ ತೋರುವ ವ್ಯಕ್ತಿಯೋರ್ವ ಬ್ಯಾನರ್ ಹರಿದಿರುವುದನ್ನು ಸಿಸಿಟಿವಿ ಕ್ಯಾಮರಾದ ದೃಶ್ಯಾವಳಿಯ ಆಧಾರದಲ್ಲಿ ಪತ್ತೆಹಚ್ಚಲಾಗಿದೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಜ.5ರಂದು ಮಧ್ಯರಾತ್ರಿ ಮಾನಸಿಕ ಅಸ್ವಸ್ಥನಂತೆ ತೋರುವ ವಯಸ್ಸಾದ ವ್ಯಕ್ತಿಯೋರ್ವ ಬ್ಯಾನರ್ ಹರಿದು ತನ್ನ ಕೈಯಲ್ಲಿ ಹಿಡಿದುಕೊಂಡು, ಸುಳ್ಯ ಪೇಟೆಯಲ್ಲಿ ಸುತ್ತಾಡಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿರುವ ದೃಶ್ಯವೊಂದರಲ್ಲಿ ಕಂಡುಬಂದಿದೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ ಎಂದು ಹೇಳಿದ್ದಾರೆ.

ಬ್ಯಾನರ್ ಹರಿದಿರುವ ಆರೋಪಿಗಳ ಪತ್ತೆಗೆ ಬಿಜೆಪಿ, ಸಂಘ ಪರಿವಾರ ಪ್ರತಿಭಟನೆ, ಧರಣಿ ನಡೆಸುತ್ತಿರುವ ಮಧ್ಯೆಯೇ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಸಮೀಪ ಸುಳ್ಯ ಆಟೋ ರಿಕ್ಷಾ ಸಂಘದ ವತಿಯಿಂದ ಸುಳ್ಯ ಜಾತ್ರೋತ್ಸವ ಹಾಗೂ ಅಯೋಧ್ಯೆ ಶ್ರೀರಾಮ ಮಂದಿರದ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಶುಭಕೋರಿ ಮುಖ್ಯ ರಸ್ತೆಯ ಬದಿ ಫ್ಲೆಕ್ಸ್ ಅಳವಡಿಸಲಾಗಿತ್ತು. ಇದನ್ನು ಜ.5ರಂದು ರಾತ್ರಿ ಯಾರೋ ಹರಿದಿರುವುದಾಗಿ ಜ.6ರಂದು ಆಟೊ ರಿಕ್ಷಾ ಸಂಘದ ಅಧ್ಯಕ್ಷರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಸುಳ್ಯ ನಗರದ ಸುಮಾರು 40 ಸಿಸಿಟಿವಿ ಕ್ಯಾಮರಾಗಳ ಪೂಟೇಜ್ಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಜ.5ರಂದು ಮಧ್ಯರಾತ್ರಿ ಮಾನಸಿಕ ಅಸ್ವಸ್ಥನಂತೆ ಕಂಡುಬರುತ್ತಿರುವ ಅಪರಿಚಿತ ವಯಸ್ಸಾದ ವ್ಯಕ್ತಿಯೋರ್ವ ಈ ಫ್ಲೆಕ್ಸ್ ಅನ್ನು ಮಧ್ಯಭಾಗದಿಂದ ಹರಿದು ಕೈಯಲ್ಲಿ ಹಿಡಿದುಕೊಂಡು ಸುಳ್ಯ ಪೇಟೆಯಲ್ಲಿ ಸುತ್ತಾಡಿರುವುದು ಪತ್ತೆಯಾಗಿದೆ ಪೊಲೀಸ್ ಪ್ರಕಟನೆ ತಿಳಿಸಿದೆ.

ಬಳಿಕ ಆ ವ್ಯಕ್ತಿ ಸುಳ್ಯದ ವಿವೇಕಾನಂದ ಸರ್ಕಲ್ ಬಳಿ ಹರಿದ ಫ್ಲೆಕ್ಸ್ ತುಂಡಿನಲ್ಲಿದ್ದ ಶ್ರೀ ರಾಮನ ಫೋಟೋವನ್ನಿಟ್ಟು ರಾಮ ಜಪ ಮಾಡಿದ್ದನ್ನು ಸಾರ್ವಜನಿಕರು ನೋಡಿರುವುದೂ ತನಿಖೆಯಿಂದ ತಿಳಿದುಬಂದಿದೆ ಎನ್ನಲಾಗಿದೆ.

ಹರಿದ ಫ್ಲೆಕ್ಸ್ ತುಂಡನ್ನು ಪರಿಶೀಲಿಸಲಾಗಿದ್ದು, ಅದರಲ್ಲಿದ್ದ ಅಯೋಧ್ಯೆಯ ಪೋಟೋ ಅಥವಾ ಶ್ರೀರಾಮನ ಪೋಟೋಗಾಗಲಿ ಯಾವುದೇ ರೀತಿಯಲ್ಲಿ ಹಾನಿಯಾಗಿರುವುದು ಕಂಡುಬಂದಿಲ್ಲ ಎಂದು ಪೊಲೀಸರು ಪ್ರಕಟನೆಯಲ್ಲಿ ಸ್ಪಷ್ಟಪಡಿಸಿದ್ದು, ತನಿಖೆ ಮುಂದುವರಿದಿದೆ ಎಂದು ಹೇಳಿದ್ದಾರೆ.

ಈ ನಡುವೆ ಸಿಸಿಟಿವಿ ಕ್ಯಾಮರಾದಲ್ಲಿ ಕಂಡುಬಂದಿರುವ ಶಂಕಿತ ವ್ಯಕ್ತಿ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ ಎನ್ನಲಾಗಿದೆ.

LEAVE A REPLY

Please enter your comment!
Please enter your name here