ಹಾವೇರಿ ಜಿಲ್ಲೆಯ ಮೂಕಾ ಬಸರಿಕಟ್ಟಿ ಗ್ರಾಮದಲ್ಲಿ ಕ್ಷುಲ್ಲಕ ವಿಚಾರಕ್ಕೆ ದಲಿತ ವ್ಯಕ್ತಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಹಾವೇರಿ: ಜಿಲ್ಲೆಯ ಮೂಕಾ ಬಸರಿಕಟ್ಟಿ ಗ್ರಾಮದಲ್ಲಿ ಕ್ಷುಲ್ಲಕ ವಿಚಾರಕ್ಕೆ ದಲಿತ ವ್ಯಕ್ತಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಬಂಧಿತರನ್ನು ರಬ್ಬಾನಿ ರಾಜಾಸಾಬಣ್ಣವರ, ಜಹೀರ್ ಅಹ್ಮದ್ ಸವಣೂರು, ಮೋದಿನಸಾಬ್, ಅಹ್ಮದ್ ಸಾಬ್ ಮತ್ತು ರಾಜೇಸಾಬಣ್ಣವರ ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ರಾಮಪ್ಪ ಹರಿಜನ ಎಂದು ಗುರುತಿಸಲಾಗಿದೆ.
ಆ ಪ್ರದೇಶದಲ್ಲಿ ಡಿಶ್ ಆಂಟೆನಾದ ಕೇಬಲ್ ವೈರ್ ಕತ್ತರಿಸಲಾಗಿದೆ ಎಂದು ಆರೋಪಿಸಿ ಆರೋಪಿಗಳು ರಾಮಪ್ಪನಿಗೆ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ ವಿದ್ಯುಚ್ಛಕ್ತಿ ಕಂಪನಿ (ಕೆಇಬಿ) ಸಿಬ್ಬಂದಿ ಮರಗಳ ಕೊಂಬೆಗಳನ್ನು ಕತ್ತರಿಸಿದ್ದು, ಈ ವೇಳೆ ಕೇಬಲ್ ತಂತಿ ಕೂಡ ತುಂಡಾಗಿದೆ ಎನ್ನಲಾಗಿದೆ.
ರಾಮಪ್ಪ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಗಳು ಶಂಕಿಸಿದ್ದಾರೆ. ಆತನನ್ನು ಥಳಿಸಿ, ನಂತರ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ.
ದಲಿತ ಸಂಘಟನೆಗಳು ಈ ಘಟನೆಯನ್ನು ಖಂಡಿಸಿದ್ದು, ಆರೋಪಿಗಳ ಬಂಧನಕ್ಕೆ ಆಗ್ರಹಿಸಿವೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಶಿಗ್ಗಾಂವ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಮುಂದಿನ ತನಿಖೆ ನಡೆಯುತ್ತಿದೆ.