ಮಂಗಳೂರು:
ಎನ್‌ಇಪಿಯನ್ನು ಎಸ್‌ಇಪಿ ಮಾಡಬಹುದೇ ಹೊರತು ಅದರ ಅಂಶಗಳನ್ನು ತೆಗೆಯಲು ಸಾಧ್ಯವಿಲ್ಲ. ಅಷ್ಟು ಸುಲಭವೂ ಅಲ್ಲ. ಯಾಕೆಂದರೆ ಎನ್‌ಇಪಿಯಲ್ಲಿ ಮಕ್ಕಳ, ನಾಡಿನ ಭವಿಷ್ಯ ಅಡಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಶನ್ ಮಂಗಳೂರು ವತಿಯಿಂದ ಗುರುವಾರ ನಡೆದ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಕುರಿತು ಶಿಕ್ಷಣ ತಜ್ಞರ ವಿಶೇಷ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎನ್‌ಇಪಿ ಬಗ್ಗೆ ಚರ್ಚೆ ನಡೆಯಲಿ. ಅದರಲ್ಲಿ ತಪ್ಪು ಇದ್ದರೆ ಸರಿ ಮಾಡೋಣ. ಯಾವ ಕಾರಣದಿಂದ ಎನ್‌ಇಪಿ ಬೇಡ ಎಂಬುದನ್ನು ಉನ್ನತ ಶಿಕ್ಷಣ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವರು ಇನ್ನೂ ಹೇಳಿಲ್ಲ. ಉತ್ತರ ಭಾರತದ ಅಂಶವನ್ನು ಇದರಲ್ಲಿ ತುರುಕಲಾಗಿದೆ ಎನ್ನುತ್ತಾರೆ. ಅಂತಹ ಯಾವ ಅಂಶ ಎನ್‌ಇಪಿಯಲ್ಲಿ ಇದೆ ಎಂಬುವುದನ್ನು ಸಚಿವರು ತೋರಿಸಲಿ ಎಂದು ಸವಾಲು ಹಾಕಿದ ಬೊಮ್ಮಾಯಿ ಅವರು, ಯಾವುದೇ ಕಾರಣಕ್ಕೂ ಎನ್‌ಇಪಿ ಸಂಪೂರ್ಣ ಬದಲು ಮಾಡಲು ಸಾಧ್ಯವಿಲ್ಲ ಎಂದರು.
ರಾಜಕಾರಣ ಯಾವತ್ತಿಗೂ ಜನಪರವಾಗಿರಬೇಕು. ರಾಜಕಾರಣದಿಂದಾಗಿ ರಾಜ್ಯ ಹಿಂದೆ ಹೋಗಬಾರದು. ಜನಾಂಗವನ್ನು ದೂರ ನೂಕುವಂತಾಗಬಾರದು. ಜನಪರವಾಗಿರದಿದ್ದರೆ ಅಂತಹ ರಾಜಕೀಯ ದೇಶ, ರಾಜ್ಯಕ್ಕೆ ಮಾರಕ ಎಂದು ಅಭಿಪ್ರಾಯ ಪಟ್ಟರು.
ಎನ್‌ಇಪಿಯನ್ನು ರಾಜ್ಯದಲ್ಲಿ ಅನುಷ್ಠಾನ ಮಾಡುವಾಗ ಸಾಕಷ್ಟು ತಯಾರಿ ಮಾಡಿದ್ದೆವು. ಆದರೆ ಸುದೀರ್ಘ ಕಾಲ ಚಿಂತನೆ ಮಾಡಿ ತಯಾರಿಸಿದ ಎನ್‌ಇಪಿಯನ್ನು ಕಾಂಗ್ರೆಸ್ ಸರಕಾರ ಬಂದ 10-15 ದಿನಗಳಲ್ಲಿಯೇ ರದ್ದು ಮಾಡುತ್ತೇವೆ ಎಂದು ಹೇಳಿರುವುದು ರಾಜಕೀಯ ದ್ವೇಷದ ನಿರ್ಧಾರವಾಗಿದೆ. ಯಾವುದೇ ವಿಷಯದಲ್ಲಿ ರಾಜಕಾರಣ ಮಾಡಬಹುದು. ಆದರೆ, ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಮಾಡಬಾರದು. ಒಂದು ವೇಳೆ ರಾಜಕೀಯ ಮಾಡಿದರೆ ಅದು ಮಕ್ಕಳ ಭವಿಷ್ಯದಲ್ಲಿ ಕಳ್ಳತನ ಮಾಡಿದಂತಾಗುತ್ತದೆ ಎಂದರು.
ಇಲ್ಲಿಯವರೆಗೆ ದೇಶದಲ್ಲಿ ಇದ್ದ ಮೆಕಾಲೆ ಶಿಕ್ಷಣದಿಂದ ಅಕ್ಷರ ಓದು ಕಲಿಯಲು ಮಾತ್ರ ಸಾಧ್ಯವಾಗುತ್ತಿತ್ತು. ಆದರೆ, ಎನ್‌ಇಪಿಯಿಂದ ಸ್ವಂತ ಚಿಂತನೆಯ ಮೂಲಕ ಉನ್ನತ ಪರಿಣಾಮ ಕಾಣಲು ಅವಕಾಶವಿದೆ. ಮಕ್ಕಳಲ್ಲಿ ಪ್ರಯೋಗಶೀಲತೆ ಹೆಚ್ಚಲಿದೆ. ಆದರೆ, ಸಿದ್ದರಾಮಯ್ಯ ಅವರಿಗೆ ಪ್ರಯೋಗಶೀಲತೆ ಬೇಕಾಗಿಲ್ಲ. ಮಕ್ಕಳ ಭವಿಷ್ಯಕ್ಕೆ ಬೇಕು ಎಂದು ಹೇಳಿದರು.
ಬೆಂಗಳೂರಿನ ಸೆಸ್ ನಿರ್ದೇಶಕ ಗೌರೀಶ್, ಮಾಜಿ ಎಂಎಲ್‌ಸಿ ಅರುಣ್, ಶಾರದಾ ವಿದ್ಯಾಸಂಸ್ಥೆಗಳ ಮುಖ್ಯಸ್ಥ ಪ್ರೊ|ಎಂ.ಬಿ.ಪುರಾಣಿಕ್, ಕಾಲೇಜು ಶಿಕ್ಷಣ ಇಲಾಖೆಯ ವಿಶ್ರಾಂತ ಹೆಚ್ಚುವರಿ ನಿರ್ದೇಶಕ ಪ್ರೊ| ರಾಜಶೇಖರ್ ಹೆಬ್ಬಾರ್, ಮಂಗಳೂರು ವಿವಿ ನಿಕಟಪೂರ್ವ ಸಿಂಡಿಕೇಟ್ ಸದಸ್ಯ ರಮೇಶ್ ಕೆ. ವೇದಿಕೆಯಲ್ಲಿದ್ದರು.
ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಉನ್ನತ ಶಿಕ್ಷಣ ಸಚಿವ ಡಾ|ಸಿ.ಎನ್. ಅಶ್ವತ್ಥ ನಾರಾಯಣ, ಶಾಸಕರಾದ ವೇದವ್ಯಾಸ ಕಾಮತ್, ಡಾ|ವೈ ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.