13 killed in road accident in Chikkaballapur
ಚಿಕ್ಕಬಳ್ಳಾಪುರ:
ರಸ್ತೆಯ ಬದಿಯಲ್ಲಿ ನಿಂತಿದ್ದ ಟ್ಯಾಂಕರ್‌ಗೆ ಕಾರು ಡಿಕ್ಕಿಯಾಗಿ 13 ಮಂದಿ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರದ ಚಿತ್ರಾವತಿ ಬಳಿ ನಡೆದಿದೆ.
ಆಂಧ್ರಪ್ರದೇಶ ನೋಂದಣಿಯ ಟಾಟಾ ಸುಮೋ ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಇಂದು ಬೆಳಗ್ಗೆ 6:30ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ.
ಈ ದುರ್ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇಂದು ಬೆಳಗ್ಗೆ ಅತಿಯಾದ ಮಂಜು ಇತ್ತು. ಈ ಕಾರಣಕ್ಕೆ ಚಾಲಕನಿಗೆ ರಸ್ತೆಯ ಗುರುತು ಸಿಗದೇ ನಿಂತಿದ್ದ ಟ್ಯಾಂಕರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿರಬಹುದು ಎಂದು ಶಂಕಿಸಲಾಗಿದೆ.
ಪಬ್ಲಿಕ್ ಟಿವಿಗೆ ಪ್ರತ್ಯಕ್ಷದರ್ಶಿ ಪ್ರತಿಕ್ರಿಯಿಸಿ, ಬೆಳಗ್ಗೆ 6:30ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ಕಾರು ಬಹಳ ವೇಗವಾಗಿ ಸಂಚರಿಸುತಿತ್ತು. ಹೈದರಾಬಾದ್ – ಬೆಂಗಳೂರು ಹೈವೇಯಲ್ಲಿ ರಸ್ತೆಯ ಗುರುತು ಸಿಗದೇ ಈ ಕಾರು ಗುದ್ದಿರಬಹುದು. ಕಾರಿನಲ್ಲಿದ್ದ 14 ಮಂದಿ ಪೈಕಿ 10 ಮಂದಿ ಸ್ಥಳದಲ್ಲೇ ಸಾವನಪ್ಪಿದ್ದರೆ ಇಬ್ಬರು, ಮೂವರು ಮಾತ್ರ ಉಸಿರಾಡುತ್ತಿದ್ದರು ಎಂದು ತಿಳಿಸಿದ್ದಾರೆ
ಮೃತರು ಆಂಧ್ರದ ಗೊರೆಂಟ್ಲ ಮೂಲದವರಾಗಿದ್ದು ಬೆಂಗಳೂರಿನ ಹೊಂಗಸಂದ್ರದಲ್ಲಿ ವಾಸವಾಗಿದ್ದರು. ದಸರಾ ಹಬ್ಬಕ್ಕೆ ಗೊರೆಂಟ್ಲ ಗ್ರಾಮಕ್ಕೆ ತೆರಳಿದ್ದ ಇವರು ಹಬ್ಬ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅರುಣಾ, ನವೀನ್ ಕುಮಾರ್, ನಂಜುಂಡಪ್ಪ, ಪದ್ಮಾವತಿ, ಋತ್ವಿಕ್ ಕುಮಾರ್ ಮೃತಪಟ್ಟಿದ್ದಾರೆ. ಉಳಿದ ಹೆಸರು ಲಭ್ಯವಾಗಿಲ್ಲ.



