Home ರಾಜಕೀಯ ಬಿಜೆಪಿ ಸೇರಲು 15ರಿಂದ 20 ಕಾಂಗ್ರೆಸ್ ಶಾಸಕರ ಆಸಕ್ತಿ: ನಳಿನ್‍ಕುಮಾರ್ ಕಟೀಲ್

ಬಿಜೆಪಿ ಸೇರಲು 15ರಿಂದ 20 ಕಾಂಗ್ರೆಸ್ ಶಾಸಕರ ಆಸಕ್ತಿ: ನಳಿನ್‍ಕುಮಾರ್ ಕಟೀಲ್

20
0

ವಿಜಯಪುರ/ಬೆಂಗಳೂರು:

ಭಾರತೀಯ ಜನತಾ ಪಕ್ಷದ ಬಲವರ್ಧನೆ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನಪರ ಆಡಳಿತವನ್ನು ಮೆಚ್ಚಿಕೊಂಡು ರಾಜ್ಯದಲ್ಲೂ 15ರಿಂದ 20 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲು ಉತ್ಸಾಹ ತೋರುತ್ತಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು.

ವಿಜಯಪುರದ ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ಬುಧವಾರ ಬಿಜೆಪಿ ರಾಜ್ಯ ಪ್ರಕೋಷ್ಠಗಳ ಸಭೆಯ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲೂ ಅಸಮಾಧಾನ ಹೊಂದಿದ ಶಾಸಕರಿದ್ದಾರೆ. ಆದರೆ, ನಮಗೆ ಅವರ ಅವಶ್ಯಕತೆ ಇಲ್ಲ ಎಂದರು.

ಮೂರು ವಿಧಾನಸಭಾ ಚುನಾವಣೆ ಮತ್ತು ಒಂದು ಲೋಕಸಭಾ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸುವುದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್‍ನ ಆಧಾರದಲ್ಲಿ ರಚಿಸಿದ ಟ್ರಸ್ಟ್ ಶ್ರೀರಾಮ ಮಂದಿರ ನಿರ್ಮಿಸುತ್ತಿದೆ. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಅವರು ತಿಳಿಸಿದರು.

ಉದ್ಘಾಟನೆ: ಯುವ ಸಮುದಾಯದಲ್ಲಿ ಇಂದು ಬಿಜೆಪಿ ಬಗ್ಗೆ ಹೆಚ್ಚು ಒಲವಿದೆ. ಬಿಜೆಪಿ ಈಗಾಗಲೇ 12 ಕೋಟಿ ಸದಸ್ಯತ್ವ ಪಡೆದ ಬೃಹತ್ ಪಕ್ಷವಾಗಿ ಹೊರಹೊಮ್ಮಿದೆ ಎಂದು ಅವರು ಸಭೆ ಉದ್ಘಾಟನಾ ಸಂದರ್ಭದಲ್ಲಿ ತಿಳಿಸಿದರು.

ಹೊಸ ವ್ಯಕ್ತಿಗಳನ್ನು ಪಕ್ಷಕ್ಕೆ ತಂದು ಪಕ್ಷವನ್ನು ಬಲಪಡಿಸುವ ಮಹತ್ವದ ಜವಾಬ್ದಾರಿಯನ್ನು ಪ್ರಕೋಷ್ಠಗಳು ಮಾಡಬೇಕು. ಯಾರನ್ನೋ ಸಿ.ಎಂ. ಅಥವಾ ಪಿ.ಎಂ. ಮಾಡುವುದು ಬಿಜೆಪಿ ಚಿಂತನೆಯಲ್ಲ. ಭಾರತವನ್ನು ಪರಮ ವೈಭವ ಸ್ಥಿತಿಗೆ ಕೊಂಡೊಯ್ಯುವುದೇ ಬಿಜೆಪಿ ಜವಾಬ್ದಾರಿ ಎಂದು ಅವರು ವಿವರಿಸಿದರು.

ಜನಪರ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಮತ್ತು ರೈತಪರ ನಾಯಕ ಶ್ರೀ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರಕಾರಗಳು ಕೊರೊನಾವನ್ನು ಸಮರ್ಥವಾಗಿ ನಿಭಾಯಿಸಿವೆ. 1.50 ಕೋಟಿ ಜನರಿಗೆ ಅಗತ್ಯ ವಸ್ತುಗಳು, 60 ಕೋಟಿ ಕುಟುಂಬಗಳಿಗೆ ಆಹಾರ, 10 ಕೋಟಿ ಜನರಿಗೆ ಔಷಧಿ ನೀಡುವ ನಿಟ್ಟಿನಲ್ಲಿ ಪಕ್ಷ ಕಾರ್ಯ ನಿರ್ವಹಿಸಿದೆ ಎಂದು ಅವರು ತಿಳಿಸಿದರು.

ಹಿಂದೆ ಆಗಿನ ಪ್ರಧಾನಿಗಳಾದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ನಡವಳಿಕೆಯನ್ನು ಮತ್ತು ಕಾರ್ಯವೈಖರಿಯನ್ನು ವಿರೋಧ ಪಕ್ಷಗಳೂ ಕೊಂಡಾಡಿದ್ದವು. ಈಗ ಶ್ರೀ ನರೇಂದ್ರ ಮೋದಿ ಅವರ ಅತ್ಯುತ್ತಮ ನಡವಳಿಕೆ ಮತ್ತು ಕಾರ್ಯವೈಖರಿಯು ರಾಷ್ಟ್ರದಲ್ಲಿ ಅನೇಕ ಪರಿವರ್ತನೆಗಳಿಗೆ ಕಾರಣವಾಗಿದೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಪಕ್ಷವು ನಿರಂತರವಾಗಿ ಪ್ರಜಾಪ್ರಭುತ್ವದ ಕೊಲೆ ಮಾಡುತ್ತಲೇ ಬಂದಿದೆ. ತುರ್ತು ಪರಿಸ್ಥಿತಿ ಜಾರಿಗೊಳಿಸಿ ದೇಶ ಭಕ್ತರನ್ನು ಜೈಲಿಗೆ ತಳ್ಳಲಾಯಿತು. ಕಾಶ್ಮೀರದಲ್ಲಿ ಪಂಡಿತರ ಕೊಲೆ ನಡೆದಾಗ ಕಾಂಗ್ರೆಸ್ಸಿಗರಿಗೆ ಕಣ್ಣೀರು ಬರಲಿಲ್ಲ. ಅತಿ ಹೆಚ್ಚು ಸಿಖ್ಖರ ಕೊಲೆ ಮಾಡಿದ ಪಕ್ಷ ಕಾಂಗ್ರೆಸ್ ಎಂದು ಅವರು ತಿಳಿಸಿದರು.
ಶ್ರೀ ನರೇಂದ್ರ ಮೋದಿ ಅವರ ಉತ್ತಮ ಕಾರ್ಯಕ್ರಮಗಳು, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆಯಡಿ ಕಾರ್ಯವನ್ನು ಗಮನಿಸಿದ ಅಮೆರಿಕಾದ ಪಕ್ಷಗಳು ಇಲ್ಲಿನ ನೀತಿಯನ್ನೇ ಜಾರಿಗೊಳಿಸುವುದಾಗಿ ಹೇಳುತ್ತಿವೆ ಎಂದು ಅವರು ವಿವರಿಸಿದರು.

ಡ್ರಗ್ಸ್ ಮುಕ್ತ ರಾಜ್ಯ ನಿರ್ಮಿಸಿದ ಯಡಿಯೂರಪ್ಪ ಅವರ ಸರಕಾರವು ಗೋಹತ್ಯೆ ನಿಷೇಧಿಸಿದೆ. ಲವ್ ಜಿಹಾದ್ ನಿಷೇಧಕ್ಕೆ ಸರಕಾರ ಬದ್ಧವಾಗಿದೆ ಎಂದು ಅವರು ಪ್ರಕಟಿಸಿದರು.

ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಅರುಣ್‍ಕುಮಾರ್, ಸಂಸದರಾದ ಭಗವಂತ ಖೂಬಾ, ರಮೇಶ ಜಿಗಜಿಣಗಿ, ಶಾಸಕರಾದ ಪಿ. ರಾಜೀವ, ಸಂಜೀವ ಮಠಂದೂರು, ಸೋಮನಗೌಡ ಪಾಟೀಲ ಸಾಸನೂರ, ಹನುಮಂತ ನಿರಾಣಿ, ವಿಭಾಗ ಪ್ರಭಾರಿಗಳಾದ ಚಂದ್ರಶೇಖರ ಕವಟಗಿ, ಪ್ರಕೋಷ್ಠಗಳ ಸಂಚಾಲಕರಾದ ಭಾನುಪ್ರಕಾಶ್, ಸಹ ಸಂಚಾಲಕರಾದ ಶಿವಯೋಗಿ ಸ್ವಾಮಿ, ಜಿಲ್ಲಾಧ್ಯಕ್ಷರಾದ ಆರ್.ಎಸ್.ಪಾಟೀಲ, ಪ್ರಕೋಷ್ಠಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here