ಬೆಂಗಳೂರು, ಡಿ.22: ಬೆಂಗಳೂರು ನಗರದ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಮೆಟ್ರೋ ಜಾಲವನ್ನು ಭಾರೀ ಮಟ್ಟದಲ್ಲಿ ವಿಸ್ತರಿಸಲಾಗುತ್ತಿದ್ದು, 2027ರ ಡಿಸೆಂಬರ್ ವೇಳೆಗೆ ನಗರದಲ್ಲಿ ಒಟ್ಟು 175 ಕಿಲೋಮೀಟರ್ ಉದ್ದದ ಮೆಟ್ರೋ ಮಾರ್ಗ ಕಾರ್ಯನಿರ್ವಹಿಸಲಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಕಚೇರಿಯಲ್ಲಿ ಮೆಟ್ರೋ ಯೋಜನೆಗಳ ಪ್ರಗತಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ, ಡಿಕೆ ಶಿವಕುಮಾರ್ ಅವರು ಮಾಧ್ಯಮಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಪ್ರಸ್ತುತ ಮೆಟ್ರೋ ಸ್ಥಿತಿ
*“ಈಗ ಬೆಂಗಳೂರಿನಲ್ಲಿ 96 ಕಿ.ಮೀ ಉದ್ದದ ಮೆಟ್ರೋ ಮಾರ್ಗ ಕಾರ್ಯನಿರ್ವಹಿಸುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ *ಹಳದಿ ಮಾರ್ಗವನ್ನು ಚಾಲನೆಗೆ ತಂದು 24 ಕಿ.ಮೀ ಹೊಸ ಮಾರ್ಗ ಆರಂಭಿಸಲಾಗಿದೆ. ಈ ಮಾರ್ಗದಲ್ಲಿ ದಿನಕ್ಕೆ ಸುಮಾರು 1 ಲಕ್ಷ ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಸಂಚಾರಿ ಪೊಲೀಸರ ಮಾಹಿತಿಯಂತೆ ಈ ಕಾರಿಡಾರ್ನಲ್ಲಿ 30% ಸಂಚಾರ ದಟ್ಟಣೆ ಕಡಿಮೆಯಾಗಿದೆ” ಎಂದು ಅವರು ಹೇಳಿದರು.
ಮುಂದಿನ ಹಂತಗಳ ಯೋಜನೆ
ಡಿಸಿಎಂ ಮಾಹಿತಿ ನೀಡಿದಂತೆ:
- 2026ರಲ್ಲಿ ಹೆಚ್ಚುವರಿ 41 ಕಿ.ಮೀ ಮೆಟ್ರೋ ಮಾರ್ಗ ಚಾಲನೆಗೆ ಬರಲಿದೆ
- 2027ರ ಡಿಸೆಂಬರ್ ವೇಳೆಗೆ ವಿಮಾನ ನಿಲ್ದಾಣ ಮಾರ್ಗ ಸೇರಿ 38 ಕಿ.ಮೀ ಹೊಸ ಮಾರ್ಗ ಆರಂಭವಾಗಲಿದೆ
“ಇದರೊಂದಿಗೆ ಬೆಂಗಳೂರಿನಲ್ಲಿ ಒಟ್ಟು 175 ಕಿ.ಮೀ ಮೆಟ್ರೋ ಮಾರ್ಗ ಕಾರ್ಯನಿರ್ವಹಿಸಲಿದೆ” ಎಂದು ಅವರು ಸ್ಪಷ್ಟಪಡಿಸಿದರು.
ಮೆಟ್ರೋ ವಿಸ್ತರಣೆ ಯೋಜನೆಯಡಿ ಮಾಗಡಿ ರಸ್ತೆ ಮೂಲಕ ತಾವರೆಕೆರೆ, ಹೊಸಕೋಟೆ, ಬಿಡದಿ ಹಾಗೂ ನೆಲಮಂಗಲವರೆಗೆ ಮಾರ್ಗ ವಿಸ್ತರಣೆ ಕೈಗೆತ್ತಿಕೊಳ್ಳಲಾಗಿದ್ದು, ಕೆಲವಡೆ ಕಾಮಗಾರಿ ಆರಂಭವಾಗಿದ್ದು, ಉಳಿದ ಭಾಗಗಳಿಗೆ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಮೂರನೇ ಹಂತದ ಮೆಟ್ರೋ: ಜನವರಿಯಲ್ಲಿ ಟೆಂಡರ್
“ಮೆಟ್ರೋ ಮೂರನೇ ಹಂತದ ಯೋಜನೆಯಡಿ ಎಲಿವೇಟೆಡ್ ಕಾರಿಡಾರ್ (ಡಬಲ್ ಡೆಕ್ಕರ್) ಸೇರಿದಂತೆ ಸುಮಾರು 100 ಕಿ.ಮೀ ಉದ್ದದ ಕಾಮಗಾರಿಗೆ ಜನವರಿಯಲ್ಲಿ ಟೆಂಡರ್ ಕರೆಯಲಾಗುವುದು” ಎಂದು ಡಿಕೆ ಶಿವಕುಮಾರ್ ಘೋಷಿಸಿದರು.
ಜನರ ಪ್ರಯಾಣಕ್ಕೆ ಅನುಕೂಲವಾಗಲು ಹಾಗೂ ಸಂಚಾರ ದಟ್ಟಣೆ ನಿಯಂತ್ರಿಸಲು ಕಾಮಗಾರಿಗಳನ್ನು ವೇಗವಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಜೊತೆಗೆ ಮೆಟ್ರೋ ನಿಲ್ದಾಣಗಳ ಸುತ್ತಮುತ್ತ ಹೆಚ್ಚುವರಿ ಭೂಸ್ವಾಧೀನ ಮಾಡಿ ವಾಣಿಜ್ಯ ಚಟುವಟಿಕೆಗಳು ಹಾಗೂ ವಾಹನ ನಿಲುಗಡೆ ಸೌಲಭ್ಯ ಒದಗಿಸಲು ಸೂಚಿಸಲಾಗಿದೆ.
ಯೋಜನೆ ವೆಚ್ಚ ಮತ್ತು ಸಾಲ
ಮೂರನೇ ಹಂತದ ಯೋಜನೆಗೆ ಸಂಬಂಧಿಸಿದಂತೆ:
- ಒಟ್ಟು ಯೋಜನಾ ವೆಚ್ಚ: ₹25,311 ಕೋಟಿ
- ಜೈಕಾ ಸಾಲ: ₹15,600 ಕೋಟಿ
- ಡಬಲ್ ಡೆಕ್ಕರ್ ಎಲಿವೇಟೆಡ್ ಕಾರಿಡಾರ್ ವೆಚ್ಚ: ₹9,700 ಕೋಟಿ
ಈ ಭಾಗದ ಟೆಂಡರ್ ಕೂಡ ಜನವರಿಯಲ್ಲಿ ಕರೆಯಲಾಗುತ್ತದೆ ಎಂದು ಅವರು ತಿಳಿಸಿದರು.
ಸಂಪೂರ್ಣ ಡಬಲ್ ಡೆಕ್ಕರ್ ಕಾರಿಡಾರ್
ಮೂರನೇ ಹಂತದ ಎಲ್ಲಾ ಮಾರ್ಗಗಳು ಡಬಲ್ ಡೆಕ್ಕರ್ ಆಗಿರುತ್ತವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆ,
“ಮೂರನೇ ಹಂತದಲ್ಲಿ ಎಲ್ಲಾ ಮಾರ್ಗಗಳನ್ನೂ ಎಲಿವೇಟೆಡ್ ಡಬಲ್ ಡೆಕ್ಕರ್ ಕಾರಿಡಾರ್ ಆಗಿಯೇ ನಿರ್ಮಿಸಲಾಗುತ್ತದೆ. ತಾವರೆಕೆರೆ ಬಳಿ ಮೆಟ್ರೋ ನಿಲ್ದಾಣಕ್ಕೆ ಜಾಗ ಅಂತಿಮಗೊಳಿಸುವ ಪ್ರಯತ್ನ ನಡೆಯುತ್ತಿದೆ. ಹಾಸನದಿಂದ ಬರುವ ವಾಹನ ಸಂಚಾರವೂ ಇಲ್ಲಿ ಸೇರುವುದರಿಂದ ಈ ಭಾಗದಲ್ಲೂ ಡಬಲ್ ಡೆಕ್ಕರ್ ಅಗತ್ಯವಾಗಿದೆ” ಎಂದು ಹೇಳಿದರು.
ಟನಲ್ ರಸ್ತೆ ಟೆಂಡರ್ ಕುರಿತು ಕೇಳಿದ ಪ್ರಶ್ನೆಗೆ, ಅಧಿಕೃತ ಮಾಹಿತಿ ಬಂದ ನಂತರವೇ ಪ್ರತಿಕ್ರಿಯೆ ನೀಡಲಾಗುವುದು ಎಂದು ಡಿಸಿಎಂ ಸ್ಪಷ್ಟಪಡಿಸಿದರು.
