No Tax, No Business: ಬೆಂಗಳೂರು ಪೂರ್ವದಲ್ಲಿ ಬ್ಯಾಂಕ್–ಹೋಟೆಲ್ಗಳಿಗೆ ಸೀಲಿಂಗ್
ಬೆಂಗಳೂರು: ಆಸ್ತಿ ತೆರಿಗೆ ಪಾವತಿಸದೆ ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದ ವಸತಿಯೇತರ (ವಾಣಿಜ್ಯ) ಬಳಕೆಯ ಕಟ್ಟಡಗಳ ವಿರುದ್ಧ ಸೀಲಿಂಗ್ ಮೂಲಕ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ತೆರಿಗೆ ವಸೂಲಾತಿಗೆ ಆದ್ಯತೆ ನೀಡಲಾಗಿದೆ ಎಂದು ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ತಿಳಿಸಿದ್ದಾರೆ.
ಅವರ ಮಾರ್ಗದರ್ಶನದಂತೆ, ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದೆ ಸುಸ್ತಿದಾರರಾಗಿದ್ದ ಬ್ಯಾಂಕ್ಗಳು, ಹೋಟೆಲ್ಗಳು ಹಾಗೂ ವಾಣಿಜ್ಯ ಸಂಕೀರ್ಣಗಳು ಸೀಲಿಂಗ್ಗೆ ಒಳಗಾಗಿವೆ. ನಿಯಮಾನುಸಾರ ಈಗಾಗಲೇ ನೋಟಿಸ್ ನೀಡಿ, ಸಾಕಷ್ಟು ಸಮಯಾವಕಾಶ ನೀಡಿದರೂ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೀಲಿಂಗ್ ಮೂಲಕ ತೆರಿಗೆ ವಸೂಲಾತಿ
ಒಂದು ವರ್ಷ ಮತ್ತು ಅದಕ್ಕಿಂತ ಹೆಚ್ಚು ಅವಧಿಯ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಸ್ವತ್ತುಗಳನ್ನು ಗುರುತಿಸಿ, ವಲಯ ಜಂಟಿ ಆಯುಕ್ತರಾದ ಡಾ. ದಾಕ್ಷಾಯಿಣಿ ಕೆ. ಅವರ ನೇತೃತ್ವದಲ್ಲಿ ತಂಡ ರಚಿಸಿ, ಉಪವಿಭಾಗವಾರು ಅತಿ ಹೆಚ್ಚು ಬಾಕಿ ಹೊಂದಿರುವ ವಾಣಿಜ್ಯ ಆಸ್ತಿಗಳನ್ನು ಸೀಲಿಂಗ್ ಮಾಡುವ ಮೂಲಕ ತೆರಿಗೆ ವಸೂಲಾತಿಗೆ ಆದ್ಯತೆ ನೀಡಲಾಗಿದೆ ಎಂದು ಆಯುಕ್ತರು ತಿಳಿಸಿದರು.

ಸೀಲಿಂಗ್ ಮಾಡಲಾದ ಪ್ರಮುಖ ಆಸ್ತಿಗಳು
- ಶಾಮಣ್ಣ – 72/1, ಬೆಳ್ಳಂದೂರು ಗ್ರಾಮ, ಔಟರ್ ರಿಂಗ್ ರೋಡ್
- ಎನ್. ದಸ್ತಗಿರಿ ಸಾಬ್ – 131, ಮಾರ್ಗೋಸಾ ಅವೆನ್ಯೂ, ಜಿ.ಜಿ.ಎಲ್., ಬೆಳ್ಳಂದೂರು ಗ್ರಾಮ
- ವಿ. ನಾರಾಯಣಪ್ಪ – 34, ರಿಂಗ್ ರೋಡ್, ಬೆಳ್ಳಂದೂರು ಗ್ರಾಮ
- ಎನ್. ಲಿಂಗಾರೆಡ್ಡಿ – ನಂ.74/1, ಔಟರ್ ರಿಂಗ್ ರೋಡ್, ಬೆಳ್ಳಂದೂರು ಗ್ರಾಮ
- ಕೆ.ಎಂ. ಅಣ್ಣಯ್ಯಪ್ಪ, ಡಿ. ಯಲ್ಲಪ್ಪ, ಕೆ.ಎಂ. ಮುನಿಯಪ್ಪ – ಸೈಟ್ ನಂ.2, ಕೈಗೊಂಡರಹಳ್ಳಿ ಗ್ರಾಮ
- ಎನ್. ದಸ್ತಗಿರಿ ಸಾಬ್ – 113ಎ, ಜಿ.ಜಿ.ಎಲ್., ಬೆಳ್ಳಂದೂರು ಗ್ರಾಮ
- ಕೆ.ಆರ್. ಅನಂತ್ ಕುಮಾರ್ – ಕೈಕೊಂಡರಹಳ್ಳಿ ಗ್ರಾಮ
- ಶ್ರೀಧರ್ ಪಂಪಾಟಿ – ನಂ. 8/8/2-10, ತೃತೀಯ ಮಹಡಿ, ಅಂಬಲಿಪುರ ಗ್ರಾಮ
- ಮಂಜುಳಾ ಸಿ – ನಂ.79/7, ಬೆಳ್ಳಂದೂರು ಗ್ರಾಮ
ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ ವಾಣಿಜ್ಯ ಕಟ್ಟಡಗಳ ವಿರುದ್ಧ ಇದೇ ರೀತಿಯ ಕಠಿಣ ಕ್ರಮ ಮುಂದುವರಿಯಲಿದೆ ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದು, ಸಾರ್ವಜನಿಕರು ಸಮಯಕ್ಕೆ ಸರಿಯಾಗಿ ಆಸ್ತಿ ತೆರಿಗೆ ಪಾವತಿಸಬೇಕು ಎಂದು ಮನವಿ ಮಾಡಿದ್ದಾರೆ.
ಸುರಕ್ಷಾ–75 ಯೋಜನೆ: ಮೂಲಸೌಕರ್ಯ ಪರಿಶೀಲನಾ ಸಭೆ
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುರಕ್ಷಾ–75 ಯೋಜನೆಯಡಿ ಪ್ರಮುಖ ಜಂಕ್ಷನ್ ಅಭಿವೃದ್ಧಿ ಕುರಿತ ಪರಿಶೀಲನಾ ಸಭೆಯನ್ನು ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆಸಲಾಯಿತು.
- ಮಾರತಹಳ್ಳಿ, ವರ್ತೂರು ಕೋಡಿ, ಬಾಗ್ಮನೆ ಟೆಕ್ ಪಾರ್ಕ್, ಕುಂದಲಹಳ್ಳಿ, ಹೊರ ವರ್ತುಲ ರಸ್ತೆ–ಎಂಬಸಿ ಟೆಕ್ ವಿಲೇಜ್, ಸರ್ಜಾಪುರ ಜಂಕ್ಷನ್ಗಳ ಸಮಗ್ರ ಅಭಿವೃದ್ಧಿಗೆ ವೇಗ ನೀಡಲು ಸೂಚನೆ
- ಹೊರ ವರ್ತುಲ ರಸ್ತೆಯ ಪ್ರವೇಶ–ನಿರ್ಗಮನ ದ್ವಾರಗಳ ಅಭಿವೃದ್ಧಿ ಮೂಲಕ ಸಂಚಾರ ದಟ್ಟಣೆ ನಿವಾರಣೆಗೆ ಕ್ರಮ
- ಫ್ಲೈಓವರ್ ಮತ್ತು ಅಂಡರ್ಪಾಸ್ ಸಮೀಪದ ಪಾದಚಾರಿ ಮಾರ್ಗ ಅತಿಕ್ರಮಣ ತೆರವಿಗೆ ಮೈಕ್ರೋ ಪ್ಲಾನ್ ಸಿದ್ಧಪಡಿಸಲು ಸೂಚನೆ
- ಪರಿತ್ಯಾಜನ ಪತ್ರ (ಆರ್.ಡಿ) ಸ್ವತ್ತುಗಳ ಅತಿಕ್ರಮಣ ತೆರವುಗೊಳಿಸಿ ನಗರ ಪಾಲಿಕೆ ವಶಕ್ಕೆ ಪಡೆಯಲು ನಿರ್ದೇಶನ
ಪಿ.ಜಿ ತಪಾಸಣೆ: ₹50,000 ದಂಡ
ಅಪರ ಆಯುಕ್ತರು (ಕಂದಾಯ) ಪ್ರಜ್ಞಾ ಅಮ್ಮೆಂಬಳ ಅವರು ಕಾಡುಗೋಡಿ ವ್ಯಾಪ್ತಿಯ ವೈಟ್ ರೋಸ್ ಲೇಔಟ್ನ ಎ.ಎಲ್. ಕೋ ಲಿವಿಂಗ್ ಪಿ.ಜಿಯಲ್ಲಿ ತಪಾಸಣೆ ನಡೆಸಿದರು.
ಉದ್ದಿಮೆ ಪರವಾನಗಿ ನವೀಕರಣವಿಲ್ಲದೆ ಪಿ.ಜಿ ನಡೆಸುತ್ತಿರುವುದು ಹಾಗೂ ಉಪಹಾರ ಗೃಹದಲ್ಲಿ ಸ್ವಚ್ಛತೆ ಕಾಪಾಡದಿರುವುದು ಪತ್ತೆಯಾಗಿದ್ದು, ನಿಯಮಾನುಸಾರ ₹50,000 ದಂಡ ವಿಧಿಸಲಾಗಿದೆ. ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಹಾಗೂ ಆರೋಗ್ಯ ಮೇಲ್ವಿಚಾರಕರು ಹಾಜರಿದ್ದರು.
ಇಂದಿನ ಸಭೆಯಲ್ಲಿ ಮುಖ್ಯ ಅಭಿಯಂತರ ಕೃಷ್ಣಮೂರ್ತಿ, ಕಾರ್ಯನಿರ್ವಾಹಕ ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಪಾಲ್ಗೊಂಡಿದ್ದರು.
