Home Uncategorized 21ನೇ ಶತಮಾನದಲ್ಲಿ ವಿಶ್ವದ ಭವಿಷ್ಯ ನಿರ್ಧರಿಸುವಲ್ಲಿ ಇಂಧನ ಕ್ಷೇತ್ರದ ಪಾತ್ರ ಪ್ರಮುಖವಾಗಿದೆ: ಪ್ರಧಾನಿ ಮೋದಿ

21ನೇ ಶತಮಾನದಲ್ಲಿ ವಿಶ್ವದ ಭವಿಷ್ಯ ನಿರ್ಧರಿಸುವಲ್ಲಿ ಇಂಧನ ಕ್ಷೇತ್ರದ ಪಾತ್ರ ಪ್ರಮುಖವಾಗಿದೆ: ಪ್ರಧಾನಿ ಮೋದಿ

14
0
bengaluru

21ನೇ ಶತಮಾನದಲ್ಲಿ ವಿಶ್ವದ ಭವಿಷ್ಯವನ್ನು ನಿರ್ಧರಿಸುವಲ್ಲಿ ಇಂಧನ ಕ್ಷೇತ್ರವು ಪ್ರಮುಖ ಪಾತ್ರ ವಹಿಸಲಿದ್ದು, ಈ ಶಕ್ತಿಯ ಹೊಸ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಪರಿವರ್ತನೆಯಲ್ಲಿ ಭಾರತವು ಇಂದು ಪ್ರಬಲವಾದ ಧ್ವನಿಗಳಲ್ಲಿ ಒಂದಾಗಿ ಮಾರ್ಪಟ್ಟಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ. ಬೆಂಗಳೂರು: 21ನೇ ಶತಮಾನದಲ್ಲಿ ವಿಶ್ವದ ಭವಿಷ್ಯವನ್ನು ನಿರ್ಧರಿಸುವಲ್ಲಿ ಇಂಧನ ಕ್ಷೇತ್ರವು ಪ್ರಮುಖ ಪಾತ್ರ ವಹಿಸಲಿದ್ದು, ಈ ಶಕ್ತಿಯ ಹೊಸ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಪರಿವರ್ತನೆಯಲ್ಲಿ ಭಾರತವು ಇಂದು ಪ್ರಬಲವಾದ ಧ್ವನಿಗಳಲ್ಲಿ ಒಂದಾಗಿ ಮಾರ್ಪಟ್ಟಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ.

ನೆಲಮಂಗಲ ಹತ್ತಿರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ( ಬಿಐಇಸಿ)ದಲ್ಲಿ ಭಾರತ ಇಂಧನ ಸಪ್ತಾಹ–2023ಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಸಿಲಿಕಾನ್ ಸಿಟಿ ಬೆಂಗಳೂರನ್ನು ಕೊಂಡಾಡಿದರು.

ಇದು ಭಾರತದಲ್ಲಿ ಜಿ-20 ಅಧ್ಯಕ್ಷತೆ ದೊರೆತ ನಂತರ ನಡೆಯುತ್ತಿರುವ ಮೊದಲ ಕಾರ್ಯಕ್ರಮ. ತಂತ್ರಜ್ಞಾನದ ರಾಜಧಾನಿ ಎನಿಸಿದ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಇಂಧನ ಕ್ಷೇತ್ರಕ್ಕೆ ಇಂದಿನ ದಿನಮಾನಗಳಲ್ಲಿ ಬಹಳ ಮಹತ್ವವಿದೆ. ಇಂಧನ ಉತ್ಪಾದನೆ ಮತ್ತು ವಿತರಣೆಯಲ್ಲಿ ಭಾರತವು ಇಂದು ವಿಶ್ವದ ಅತ್ಯಂತ ಮುಂದುವರೆದ ಶಕ್ತಿಗಳ ಪೈಕಿ ಒಂದಾಗಿದೆ ಎಂದು ಹೇಳಿದರು.

ಐಎಂಎಫ್​ 2023ರ ಪ್ರಗತಿಯ ಮುನ್ಸೂಚನೆ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಲ್ಲಿ ಸ್ಥಾನ ಪಡೆದಿದೆ. ಮಹಾಮಾರಿ ಹಾಗೂ ಯುದ್ಧದ ಪ್ರಭಾವದ ನಡುವೆಯೂ ಭಾರತವು ಜಾಗತಿಕ ಆಶಾಕಿರಣ (ಬ್ರೈಟ್ ಸ್ಪಾಟ್) ಆಗಿದೆ. ಆಂತರಿಕ ಸತ್ವದಿಂದಾಗಿ ಭಾರತವು ಬಾಹ್ಯ ಒತ್ತಡಗಳನ್ನು ತಡೆದುಕೊಂಡಿದೆ.

ಭಾರತದಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಸ್ಥಿರ ಸರ್ಕಾರವಿದೆ. ಹೀಗಾಗಿಯೇ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಪೂರಕವಾಗುವ ಹಲವು ಕ್ರಮಗಳನ್ನು ಜಾರಿಗೆ ತರಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಮಹತ್ವದ ಬದಲಾವಣೆಗಳು ಕಂಡು ಬಂದಿವೆ. ಅವುಗಳ ಫಲಾನುಭವಿಗಳ ಸಂಖ್ಯೆಯು ಹಲವು ಅಭಿವೃದ್ಧಿ ಹೊಂದಿದ ದೇಶಗಳ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚಾಗಿದೆ ಎಂದು ತಿಳಿಸಿದರು.

ಇಂದು ದೇಶದಲ್ಲಿ ಕೋಟ್ಯಂತರ ಜನರ ಬದುಕಿನ ರೀತಿ ಬದಲಾಗಿದೆ. ಹಳ್ಳಿಹಳ್ಳಿಗಳಲ್ಲಿ ಇಂಟರ್ನೆಟ್​ ತಲುಪಿದೆ. ಇದಕ್ಕಾಗಿ 5 ಲಕ್ಷ ಕಿಮೀಗೂ ಹೆಚ್ಚು ಉದ್ದದಷ್ಟು ಆಪ್ಟಿಕಲ್ ಫೈಬರ್ ಅಳವಡಿಸಲಾಗಿದೆ. ಬ್ರಾಡ್​ಬಾಂಡ್ ಬಳಕೆದಾರರ ಸಂಖ್ಯೆ 13 ಪಟ್ಟು ಹೆಚ್ಚಾಗಿದೆ. ಇಂಟರ್ನೆಟ್ ಬಳಕೆ ಪ್ರಮಾಣ 3 ಪಟ್ಟು ಹೆಚ್ಚಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಇಂಟರ್ನೆಟ್ ಬಳಕೆ ಹೆಚ್ಚಾಗಿದೆ. ಬಡವರ್ಗದಲ್ಲಿದ್ದವರು ಮಧ್ಯಮವರ್ಗಕ್ಕೆ ಬಂದಿದ್ದಾರೆ. ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಭಾರತ ಮುಂಚೂಣಿಗೆ ಬಂದಿದೆ.

ವಿಶ್ವದಲ್ಲಿಯೇ ಅತಿಹೆಚ್ಚು ಆಕಾಂಕ್ಷೆ ಹೊಂದಿರುವವರ ನಾಡಾಗಿ ನಮ್ಮ ಭಾರತ ವಿಕಸಿತಗೊಳ್ಳುತ್ತಿದೆ. ಭಾರತದಲ್ಲಿ ಇಂಧನದ ಬೇಡಿಕೆ ಹೆಚ್ಚಾಗುತ್ತಿದೆ. ಅಭಿವೃದ್ಧಿಯ ವೇಗ ಗಮನಿಸಿದರೆ ಬರುವ ವರ್ಷಗಳಲ್ಲಿ ಭಾರತದಲ್ಲಿ ಹಲವು ಹೊಸ ನಗರಗಳು ರೂಪುಗೊಳ್ಳಲಿವೆ. ಅಂತರರಾಷ್ಟ್ರೀಯ ಇಂಧನ ಸಂಸ್ಥೆಯು ಇದೇ ಮಾತು ಹೇಳಿದೆ. ಇದೇ ದಶಕದಲ್ಲಿ ಭಾರತದಲ್ಲಿ ಇಂಧನದ ಬೇಡಿಕೆಯು ವಿಶ್ವದಲ್ಲಿಯೇ ಅತ್ಯಂತ ಹೆಚ್ಚಾಗಲಿದೆ. ಹೀಗಾಗಿಯೇ ನಿಮ್ಮಂಥ ಹೂಡಿಕೆದಾರರು ಹಾಗೂ ಸಹವರ್ತಿಗಳಿಗೆ ಹೊಸ ಅವಕಾಶಗಳು ಲಭ್ಯವಾಗಲಿವೆ.

ಭಾರತದಲ್ಲಿ ಪ್ರಸ್ತುತ ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ವಿಶ್ವದ ಒಟ್ಟು ಬೇಡಿಕೆಯಲ್ಲಿ ಶೇ 5ರಷ್ಟು ಇದೆ. ಇದು ಮುಂದಿನ ಕೆಲವೇ ವರ್ಷಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ. ಭಾರತದ ಅಭಿವೃದ್ಧಿಗೆ 4 ಮುಖ್ಯ (ದೇಶೀಯ ಉತ್ಪಾದನೆಯ ಹೆಚ್ಚಳ, ಪೂರೈಕೆಯಲ್ಲಿ ವೈವಿಧ್ಯ, ಜೈವಿಕ ಇಂಧನ, ಎಲೆಕ್ಟ್ರಿಕ್ ಮತ್ತು ಹೈಡ್ರೋಜನ್ ವಾಹನಗಳ ಬಳಕೆಗೆ ಒತ್ತು) ಸ್ತಂಭಗಳಿವೆ. ಈ ನಾಲ್ಕೂ ಅಂಶಗಳಲ್ಲಿ ಭಾರತ ವೇಗವಾಗಿ ಕೆಲಸ ಮಾಡುತ್ತಿದೆ ಎಂದರು.

ನಮ್ಮ ಪೆಟ್ರೋಲಿಯಂ ಸಂಸ್ಕರಣಾಗಾರಗಳ ತಂತ್ರಜ್ಞಾನವನ್ನು ಮೇಲ್ದರ್ಜೆಗೆ ಏರಿಸುತ್ತಿದ್ದೇವೆ. ಇಲ್ಲಿ ಸ್ಟಾರ್ಟಪ್​ಗಳಿಗೆ ಹೆಚ್ಚು ಉತ್ತೇಜನವಿದೆ. ನೀವು ಇಲ್ಲಿನ ಇಂಧನ ಕ್ಷೇತ್ರದ ವಿಕಸನದ ಸಹಭಾಗಿಗಳಾಗಬಹುದು. ನೈಸರ್ಗಿಕ ಅನಿಲ ಕ್ಷೇತ್ರದಲ್ಲಿಯೂ ಸುಧಾರಣೆಗೆ ಸತತ ಪ್ರಯತ್ನ ನಡೆಯುತ್ತಿದೆ. ನಮ್ಮ ‘ಒನ್ ನೇಷನ್, ಒನ್ ಗ್ರಿಡ್’ ಆಶಯ ಸಾಕಾರಗೊಳಿಸಲು ಸತತ ಪ್ರಯತ್ನಗಳು ನಡೆಯುತ್ತಿವೆ. ಎನರ್ಜಿ ಟರ್ಮಿನಲ್​ಗಳ ಸಾಮರ್ಥ್ಯ ವೃದ್ಧಿಸಲಾಗುತ್ತಿದೆ.

ಸಿಎನ್​ಜಿ ಸ್ಟೇಷನ್​ಗಳು 2014ಲ್ಲಿ 900 ಮಾತ್ರವೇ ಇತ್ತು. ಆದರೆ, ಈಗ 5000ಕ್ಕೆ ಮುಟ್ಟಿವೆ. ಗ್ಯಾಸ್​ ಪೈಪ್​ಲೈನ್ ಜಾಲ ವಿಸ್ತರಿಸಲು ಶ್ರಮಿಸುತ್ತಿದ್ದೇವೆ. 2014ರಲ್ಲಿ 14 ಸಾವಿರ ಕಿಮೀ ಪೈಪ್​ಲೈನ್ ಇತ್ತು. ಈಗ 20 ಸಾವಿರ ಕಿಮೀ ದಾಟಿದೆ. ಶೀಘ್ರದಲ್ಲಿಯೇ ಇದು 35 ಸಾವಿರ ಕಿಮೀ ದಾಟಲಿದೆ. ಭಾರತವು ನಿಮ್ಮ ಹೂಡಿಕೆಗೆ ಅತ್ಯಂತ ಮಹತ್ವದ ಅವಕಾಶ ನೀಡಲಿದೆ. ಗ್ರೀನ್ ಹೈಡ್ರೋಜನ್ ಕ್ಷೇತ್ರದಲ್ಲಿ ಭಾರತವು ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ. 2030ರ ಹೊತ್ತಿಗೆ 4 ಎಂಎಂಟಿ ಯಷ್ಟು ಗ್ರೀನ್ ಹೈಡ್ರೋಜನ್ ಉತ್ಪಾದಿಸುತ್ತೇವೆ. ಇದಕ್ಕಾಗಿ 8 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ಮಾಡಲಿದ್ದೇವೆ.

ಇವಿ ಬ್ಯಾಟರಿಗಳ ದರ ಕಡಿಮೆ ಮಾಡಲು ಕ್ರಮ ತೆಗೆದುಕೊಂಡಿದ್ದೇವೆ. 50 ಗಿಗಾವ್ಯಾಟ್​ಗಳಷ್ಟು ಸಾಮರ್ಥ್ಯದ ಅತ್ಯಾಧುನಿಕ ಕೆಮಿಸ್ಟ್ರಿ ಸೆಲ್ ತಯಾರಿಕೆಗಾಗಿ ವಿಶೇಷ ಪ್ರೋತ್ಸಾಹ ನೀಡಿದ್ದೇವೆ. ದೇಶದಲ್ಲಿ ಬ್ಯಾಟರಿ ಉತ್ಪಾದನೆಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಲಾಗಿದೆ. ಭಾರತದಲ್ಲಿ ಸೌರಶಕ್ತಿ ಉತ್ಪಾದನೆ ಶೇ 20ರಷ್ಟು ಹೆಚ್ಚಾಗಿದೆ. ಪವನ ವಿದ್ಯುತ್​ ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲಿ 4ನೇ ಸ್ಥಾನದಲ್ಲಿದೆ. ಈ ದಶಕದ ಅಂತ್ಯದಲ್ಲಿ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಅರ್ಧದಷ್ಟನ್ನು ಪರಿಸರಸ್ನೇಹಿ ಮೂಲಗಳಿಂದಲೂ ಉತ್ಪಾದಿಸುವ ಗುರಿ ಇರಿಸಿಕೊಂಡಿದ್ದೇವೆ.

ಇ-20 ಗುರಿಗಳನ್ನು ಇಂದು ಪರಿಚಯಿಸಲಾಗುತ್ತಿದೆ. ಆರಂಭದಲ್ಲಿ ಇದು ಕೆಲವೇ ನಗರಗಳಲ್ಲಿ ಮಾತ್ರವೇ ಇರುತ್ತದೆ. ಮುಂದಿನ ದಿನಗಳಲ್ಲಿ ಇಡೀ ದೇಶಕ್ಕೆ ಇದನ್ನು ವಿಸ್ತರಿಸಲಾಗುತ್ತದೆ. ವಿದ್ಯುತ್ ಉತ್ಪಾದನೆ, ವಿತರಣೆ, ಬಳಕೆಯಲ್ಲಿ ಉಳಿತಾಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ನವೀಕರಿಸಬಹುದಾದ ಇಂಧನ ಮೂಲಗಳಿಗೆ ಆದ್ಯತೆ ಸಿಗಲಿದೆ. ಸೋಲಾರ್ ಶಕ್ತಿಯಿಂದ ಮನೆ, ಗ್ರಾಮ, ಏರ್​ಪೋರ್ಟ್​, ಕೃಷಿ ಮುನ್ನಡೆಯುತ್ತಿರುವ ಹಲವು ಉದಾಹರಣೆಗಳಿವೆ.

ಮುಂದಿನ ಕೆಲವೇ ದಿನಗಳಲ್ಲಿ ಎಲ್ಲ ಕುಟುಂಬಗಳಲ್ಲಿ ಸೋಲಾರ್ ಒಲೆಗಳು ಬಳಕೆಗೆ ಬರಲಿವೆ. ಇದರಿಂದ ಇಂಧನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಪ್ಲಾಸ್ಟಿಕ್ ಬಾಟಲಿಗಳಿಂದ ನಾವು ರೂಪಿಸಿರುವ ಸಮವಸ್ತ್ರಗಳು ಯಾವುದೇ ರೀತಿಯಲ್ಲಿ ಗುಣಮಟ್ಟ ಅಥವಾ ಫ್ಯಾಷನ್ ವಿಚಾರದಲ್ಲಿ ಕಡಿಮೆಯಾಗಿಲ್ಲ. 10 ಕೋಟಿ ಪ್ಲಾಸ್ಟಿಕ್ ಬಾಟಲಿಗಳನ್ನು ಹೀಗೆ ಮರುಬಳಕೆ ಮಾಡಲಾಗುವುದು. ಇದರಿಂದ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ. ಭಾರತದಲ್ಲಿ ಇಂಧನ ಕ್ಷೇತ್ರದಲ್ಲಿರುವ ಅವಕಾಶಗಳನ್ನು ಗಮನಿಸಿ, ಬಳಸಿಕೊಳ್ಳಿ. ನಿಮ್ಮ ಹೂಡಿಕೆಗೆ ಭಾರತವು ಅತ್ಯಂತ ಪ್ರಶಸ್ತ ತಾಣವಾಗಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here