ಕ್ರೆಡೈ ಕರ್ನಾಟಕ ಜ್ಞಾನ ಸರಣಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿ
ಬೆಂಗಳೂರು:
ಕರ್ನಾಟಕ ರಾಜ್ಯದಲ್ಲಿ ಎಂಎಸ್‌ಎಂಇ ಗಳ ಪ್ರೋತ್ಸಾಹಕ್ಕಾಗಿ ಕೆಐಎಡಿಬಿ ವತಿಯಿಂದ ಅಭಿವೃದ್ದಿಪಡಿಸಲಾಗುತ್ತಿರುವ ಕೈಗಾರಿಕಾ ಪ್ರದೇಶಗಳಲ್ಲಿ ಶೇಕಡಾ 30 ರಷ್ಟು ಭೂಮಿಯನ್ನು ಮೀಸಲಿಡಲಾಗುತ್ತಿದ್ದು ಇದರ ಉಪಯೋಗ ಪಡೆದುಕೊಳ್ಳುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್ ಕರೆ ನೀಡಿದರು.
ಇಂದು ಕ್ರೆಡೈ ಕರ್ನಾಟಕದ ವತಿಯಿಂದ ಆಯೋಜಿಸಲಾಗಿದ್ದ ಕ್ರೆಡೈ ಜ್ಞಾನ ಸರಣಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು. ರಾಜ್ಯ ಸರಕಾರ ರಾಜ್ಯದ ಆರ್ಥಿಕ ಅಭಿವೃದ್ದಿಯಲ್ಲಿ ಸಣ್ಣ ಕೈಗಾರಿಕೆಗಳ ಮಹತ್ವನ್ನು ಅರಿತಿದೆ. ಈ ಹಿನ್ನಲೆಯಲ್ಲಿ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಘೋಷಿಸಲಾಗಿದೆ. ನೂತನ ಕೈಗಾರಿಕಾ ನೀತಿಯಲ್ಲಿ ಕರ್ನಾಟಕ ಕ್ಲಸ್ಟರ್ ಡೆವಲಪ್‌ಮೆಂಟ್ ಯೋಜನೆಯನ್ನು ಅಳವಡಿಸಿಕೊಳ್ಳಲಾಗಿದೆ. ಈ ಮೂಲಕ ಎಂಎಸ್‌ಎಂಇ ಗಳು ತಮ್ಮ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ವತಿಯಿಂದ ಅಭಿವೃದ್ದಿಪಡಿಸಲಾಗುವ ಕೈಗಾರಿಕಾ ಪ್ರದೇಶಗಳಲ್ಲಿ ಶೇಕಡಾ 30 ಭೂಮಿಯನ್ನು ಸಣ್ಣ ಕೈಗಾರಿಕೆಗಳಿಗೆ ಮೀಸಲು ಇಡಲಾಗಿದೆ ಎಂದು ಹೇಳಿದರು.
Virtually inaugurated a Knowledge series webinar at Bengaluru, organized by Credai Karnataka & spoke about the role played by MSMEs in economic development, plans & projects included in the #NewIndustrialPolicy using which #MSMEs can improve their infrastructure@BJP4Karnataka pic.twitter.com/4Vq5wHv66d
— Jagadish Shettar (@JagadishShettar) July 3, 2021
ರಿಯಲ್ ಎಸ್ಟೇಲ್ ಕ್ಷೇತ್ರವೂ ಕೂಡಾ ಉತ್ತಮ ಉದ್ಯೋಗಾವಕಾಶ ಒದಗಿಸುವ ಕ್ಷೇತ್ರವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರ ಈ ಕ್ಷೇತ್ರದ ಅಭಿವೃದ್ದಿಗೂ ಸಾಕಷ್ಟು ಒತ್ತು ನೀಡುತ್ತಿದೆ. ಕ್ರೆಡೈ ಸಂಸ್ಥೆಯ ಮೂಲಕ ಬಹಳಷ್ಟು ಒಳ್ಳೆಯ ಕೆಲಸಗಳಾಗುತ್ತಿವೆ ಎಂದು ಹೇಳಿದರು.
ವೆಬಿನಾರ್ ನಲ್ಲಿ ಕ್ರೆಡೈ ನ್ಯಾಷನಲ್ ಉಪಾಧ್ಯಕ್ಷರು ಮತ್ತು ಎಂಎಸ್‌ಎಂಇ ಸಮಿತಿಯ ಉಸ್ತುವಾರಿ ಜಿ ರಾಮ್ ರೆಡ್ಡಿ, ಎಂಎಸ್‌ಎಂಇ ಸಮಿತಿಯ ಅಧ್ಯಕ್ಷರಾದ ಆನಂದ್ ಸಿಂಗಾನಿಯಾ, ಸಹ ಅಧ್ಯಕ್ಷರಾದ ಟಮಲ್ ಘೋಷ್, ಕ್ರೆಡೈ ಕರ್ನಾಟಕದ ಚೈತನ್ಯ ಕುಲಕರ್ಣಿ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ ಪಾಲ್ಗೊಂಡಿದ್ದರು.