ಬೆಂಗಳೂರು:
ರಾಜ್ಯದಲ್ಲಿ ದೇಶಿ ತಳಿಗಳ ವಂಶಾವಳಿಯನ್ನು ಹೆಚ್ಚಿಸುವಲ್ಲಿ ಪಶುಸಂಗೋಪನಾ ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಮೃತ ಸಿರಿ ಯೋಜನೆ ಅಡಿಯಲ್ಲಿ ವೀರಗತಿ ಹೊಂದಿದ ಯೋಧರ ಪತ್ನಿಯರಿಗೆ, ದೇವದಾಸಿಯರಿಗೆ, ಶವಸಂಸ್ಕಾರ ಕಾರ್ಮಿಕರಿಗೆ ಹಾಗೂ ವಿಧವೆಯರಿಗೆ ಉತ್ಕೃಷ್ಟ ತಳಿಯ ಕರುಗಳನ್ನು ನೀಡಲು ಇಲಾಖೆಯಿಂದ ಆದೇಶಿಸಲಾಗಿದೆ ಎಂದು ಪಶುಸಂಗೋಪನ ಸಚಿವ ಪ್ರಭು ಚವ್ಹಾಣ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಶುಸಂಗೋಪನಾ ಇಲಾಖೆಯ ತಳಿ ಸಂವರ್ಧನಾ ಕೇಂದ್ರಗಳಲ್ಲಿ ಹುಟ್ಟುವ ಕರುಗಳಲ್ಲಿ ಶೇ 50ರಷ್ಟು ಹೆಣ್ಣು ಕರುಗಳಿದ್ದು ಸಂವರ್ಧನೆಗೆ ಅಗತ್ಯ ಪ್ರಮಾಣದ ಕರುಗಳನ್ನಿಟ್ಟುಕೊಂಡು ಉಳಿದ ಹೆಣ್ಣು ಕರುಗಳನ್ನು ಮಾರುಕಟ್ಟೆ ದರದ ಶೇ 25 ಪ್ರತಿಶತ ದರದಲ್ಲಿ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಸದ್ಯ ಹಳ್ಳಿಕಾರ್, ಅಮೃತ್ ಮಹಲ್, ಮಲೆನಾಡಗಿಡ್ಡ, ಖಿಲಾರಿ, ಕೃಷ್ಣವ್ಯಾಲಿ ತಳಿಗಳನ್ನು ವೀರಗತಿ ಹೊಂದಿದ ಯೋಧರ ಪತ್ನಿಯರಿಗೆ, ದೇವದಾಸಿಯರಿಗೆ, ಶವಸಂಸ್ಕಾರ ಕಾರ್ಮಿಕರಿಗೆ ಹಾಗೂ ವಿಧವೆಯರಿಗೆ ನೀಡಲು ಕ್ರಮವಹಿಸಲಾಗಿದೆ. ದೇಶಿ ತಳಿಗಳ ವಂಶಾಭಿವೃದ್ಧಿ ಹೆಚ್ಚಿಸುವ ಉದ್ದೇಶ ಇದರಿಂದ ಈಡೇರಿದಂತಾಗುವುದಲ್ಲದೆ ಹಸುಗಳನ್ನು ಸಾಕುವುದರಿಂದ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿ ಸಹ ಬದಲಾಗುವುದರಲ್ಲಿ ಯಾವ ಸಂಶಯವಿಲ್ಲ ಎಂದು ಅವರು ಹೇಳಿದ್ದಾರೆ.
ಆಯ್ಕೆ ವಿಧಾನ
ರಾಜ್ಯದಲ್ಲಿ ಸುಮಾರು 19 ತಳಿ ಸಂವರ್ಧನಾ ಕೇಂದ್ರಗಳಿದ್ದು ಈ ವ್ಯಾಪ್ತಿಯ ಜಿಲ್ಲೆಗಳಲ್ಲಿ 927 ಕ್ಕೂ ಹೆಚ್ಚು ಹೆಣ್ಣು ಕರುಗಳನ್ನು ನೀಡಲಾಗುವುದು. ತಾಲೂಕು ಜಾನುವಾರು ವಿತರಣಾ ಸಮಿತಿಯಿಂದ ಆಯ್ಕೆ ಪ್ರಕ್ರಿಯೆ ನಡೆಯುವುದು ಅದರಲ್ಲಿ ವೀರಗತಿ ಹೊಂದಿದ ಯೋಧರ ಪತ್ನಿಯರಿಗೆ, ದೇವದಾಸಿಯರಿಗೆ, ಶವಸಂಸ್ಕಾರ ಕಾರ್ಮಿಕರಿಗೆ ಹಾಗೂ ವಿಧವೆಯರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವವರಿಗೆ ತಮ್ಮ ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಅಮೃತ ಸಿರಿ ಯೋಜನೆ ಸಹಕಾರಿಯಾಗಲಿದ್ದು ದೇಶಿ ತಳಿಗಳ ಸಂಖ್ಯೆ ಸಹ ರಾಜ್ಯದಲ್ಲಿ ವೃದ್ಧಿಯಾಗಲು ಪಶುಸಂಗೋಪನೆ ಇಲಾಖೆಯ ಪ್ರಸ್ತುತ ಕ್ರಮ ಸಹಕಾರಿಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.