ಬೆಂಗಳೂರು:
ಇತ್ತೀಚೆಗೆ ನಡೆದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳ ನೇಮಕಾತಿಯಲ್ಲಿ 371 ಜೆ ಮತ್ತು ರೋಸ್ಟರ್ ನಿಯಮಗಳನ್ನು ಗಾಳಿಗೆ ತೂರಲಾಗಿದ್ದು, ಇದರಿಂದ ನೂರಾರು ಅರ್ಹ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಭಾಲ್ಕಿ ಶಾಸಕರಾದ ಶ್ರೀ ಈಶ್ವರ ಖಂಡ್ರೆ ಅವರುಇಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಆಗಿರುವ ಲೋಪವನ್ನು ಸರಿಪಡಿಸುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ.
ಈಶ್ವರ ಖಂಡ್ರೆ ಅವರ ನೇತೃತ್ವದಲ್ಲಿ ಶಾಸಕರುಗಳಾದ ರಾಜಶೇಖರ್ ಪಾಟೀಲ್, ಬಸನಗೌಡ ದದ್ದಲ್, ಪರಮೇಶ್ವರ್ ನಾಯಕ್, ಅಮರೇ ಗೌಡ ಬಯ್ಯಾಪುರ, ಎಮ್.ವೈ.ಪಾಟೀಲ್, ಡಿ.ಎಸ್. ಹುಲಿಗೇರಿ, ಎಂ.ಎಲ್.ಸಿ.ಗಳಾದ ಅಲ್ಲಂ ವೀರಭದ್ರಪ್ಪ, ಅರವಿಂದ ಅರಳಿ, ಚಂದ್ರಶೇಖರ ಪಾಟೀಲ್, ಭೀಮರಾವ್ ಪಾಟೀಲ್, ಶರಣಗೌಡ ಬಯ್ಯಾಪುರ ಅವರನ್ನೊಳಗೊಂಡ ನಿಯೋಗ ಇಂದು ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ಕಲ್ಯಾಣ ಕರ್ನಾಟಕ ಭಾಗದ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿತು.
ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತಿ ವರ್ಷ ನೀಡಲಾಗುವ 1500 ಕೋಟಿ ರೂಪಾಯಿ ಜೊತೆಗೆ ಬರುವ ಬಜೆಟ್ ನಲ್ಲಿ 3 ಸಾವಿರ ಕೋಟಿ ರೂಪಾಯಿ ನೀಡಬೇಕು. ಜೊತಗೆ ಕಾಲಮಿತಿಯೊಳಗೆ ಈ ಭಾಗದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳಿಗೆ ನೇಮಕಾತಿ ಮಾಡಬೇಕು, ಬ್ಯಾಕ್ ಲಾಗ್ ಹುದ್ದೆಯನ್ನು ಕೂಡಲೇ ತುಂಬಬೇಕು, ಮುಂಬಡ್ತಿ ನೀಡಬೇಕು ಎಂದೂ ಒತ್ತಾಯಿಸಲಾಯಿತು.
ಇದರ ಜೊತಗೆ ಶಿಕ್ಷಕರ ನೇಮಕಾತಿಯಲ್ಲಿನ ನಿಯಮಗಳಿಂದ ಆಗಿರುವ ತೊಡಕುಗಳ ಬಗ್ಗೆ ಚರ್ಚಿಸಿದಾಗ, ಈ ನಿಯಮಾವಳಿಗಳನ್ನು ಸರಳೀಕರಿಸುವ ಆಶ್ವಾಸನೆಯನ್ನು ಮುಖ್ಯಮಂತ್ರಿಗಳು ಈಶ್ವರ ಖಂಡ್ರೆ ನೇತೃತ್ವದ ಶಾಸಕರ ನಿಯೋಗಕ್ಕೆ ನೀಡದರು.