Home Uncategorized 40% ಕಮಿಷನ್ ಆರೋಪ: ಬಂಧನಕ್ಕೀಡಾಗಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣಗೆ ಜಾಮೀನು

40% ಕಮಿಷನ್ ಆರೋಪ: ಬಂಧನಕ್ಕೀಡಾಗಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣಗೆ ಜಾಮೀನು

11
0

ರಾಜ್ಯ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣಗೆ ಜಾಮೀನು ದೊರೆತಿದೆ. ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣಗೆ ಜಾಮೀನು ದೊರೆತಿದೆ.

ಕ್ರಿಮಿನಲ್‌ ಮಾನನಷ್ಟ ಪ್ರಕರಣದಲ್ಲಿ (Criminal Defamation Case) ಬಂಧನಕ್ಕೆ ಒಳಗಾಗಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣಗೆ(Kempanna) ಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಕೆಂಪಣ್ಣ ಸೇರಿ ಒಟ್ಟು 19 ಗುತ್ತಿಗೆದಾರರು ಸುದ್ದಿಗೋಷ್ಠಿ ಮಾಡಿ ತೋಟಗಾರಿಕಾ ಸಚಿವ ಮುನಿರತ್ನ(Munirathna) ವಿರುದ್ಧ ಕಮೀಷನ್ ಆರೋಪ ಮಾಡಿದ್ದರು. ಈ ಸಂಬಂಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಿ ಕೆಂಪಣ್ಣ ಸೇರಿ 19 ಗುತ್ತಿಗೆದಾರರ ವಿರುದ್ಧ ಮುನಿರತ್ನ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹಾಕಿದ್ದರು.

ಇದನ್ನೂ ಓದಿ: 40 ಪರ್ಸೆಂಟ್ ಭ್ರಷ್ಟಾಚಾರದ ಆರೋಪ: ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಸೇರಿ ನಾಲ್ವರ ಬಂಧನ

8ನೇ ಎಸಿಎಂಎಂ ನ್ಯಾಯಾಲಯ ಕೆಂಪಣ್ಣ ಸೇರಿ 19 ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿತ್ತು. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೋರ್ಟ್‌ ಆರೋಪಿಗಳ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್‌ ಹೊರಡಿಸಿತ್ತು. ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಕೇಂದ್ರ ವಿಭಾಗದ ಪೊಲೀಸರು ಆರೋಪಿಗಳಾದ ಕೆಂಪಣ್ಣ ಮತ್ತು ಇತರರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ರಾತ್ರಿ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಕೆಂಪಣ್ಣ, ಕೃಷ್ಣಾರೆಡ್ಡಿ, ನಟರಾಜು, ಗುರುಸಿದ್ದಪ್ಪ, ಅಂಬಿಕಾಪತಿ ಸೇರಿ ಐವರಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಿದ್ದಾರೆ. 

ಇದನ್ನೂ ಓದಿ: ಪತ್ರಕರ್ತರಿಗೆ ಸಿಎಂ ಕಚೇರಿಯಿಂದ 2.5 ಲಕ್ಷ ರೂ. ನಗದು: ಇದು 40% ಕಮಿಷನ್ ಮುಚ್ಚಿಡಲು ನೀಡಿದ ಲಂಚವೇ?-ಕಾಂಗ್ರೆಸ್ ಪ್ರಶ್ನೆ

ಜಾಮೀನು ಸಿಗುವ ಪ್ರಕರಣ ಆಗಿರುವ ಕಾರಣ ಎಲ್ಲಾ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ಮುನಿರತ್ನ ಪರ ವಕೀಲ ವಿವೇಕ್‌ ಸುಬ್ಬಾರೆಡ್ಡಿ ತಿಳಿಸಿದ್ದಾರೆ.

ಏನಿದು ಪ್ರಕರಣ?
ಸರ್ಕಾರದ ವಿರುದ್ಧ ಶೇ.40 ಭ್ರಷ್ಟಾಚಾರ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮತ್ತು 18 ಮಂದಿ (Kempanna and Contractors Association) ವಿರುದ್ಧ ಸೆಪ್ಟೆಂಬರ್‌ನಲ್ಲಿ ಮುನಿರತ್ನ ಕ್ರಿಮಿನಲ್‌ ಮಾನಷ್ಟ ಕೇಸ್‌(Criminal Defamation Case) ಹೂಡಿದ್ದರು. ಈ ಸಂಬಂಧ ಅಂದು ಸುದ್ದಿಗೋಷ್ಠಿ ನಡೆಸಿದ್ದ ಮುನಿರತ್ನ, ನನ್ನ ವಿರುದ್ಧ ಮಾಡಿದ ಆರೋಪವು ಸೇರಿದಂತೆ 40% ಕಮೀಷನ್(40 Percent Commission) ಆರೋಪಕ್ಕೆ ದಾಖಲೆ ಕೊಡಿ ಎಂದು ದಾವೆ ಹೂಡಿದ್ದೇನೆ. 50 ಕೋಟಿ ಮಾನನಷ್ಟ ಪ್ರಕರಣವನ್ನು 4 ತಿಂಗಳ ಒಳಗಡೆ ಇತ್ಯರ್ಥ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡುತ್ತಿದ್ದೇವೆ ಎಂದು ತಿಳಿಸಿದ್ದರು.

ಇದನ್ನೂ ಓದಿ: 40 ಪರ್ಸೆಂಟ್ ಕಮಿಷನ್ನಿಗಾಗಿ ಲಿಂಗಾಯತನೊಬ್ಬನ ಜೀವ ತೆಗೆದ ಬಿಜೆಪಿ ಸರ್ಕಾರ ಲಿಂಗಾಯತ ವಿರೋಧಿಯಲ್ಲವೇ?

ಆಧಾರ ರಹಿತ ಆರೋಪ ಮಾಡಿದ್ದಕ್ಕೆ ಮುನಿರತ್ನ 7 ದಿನಗಳ ಒಳಗಡೆ ಕ್ಷಮೆ ಕೇಳುವಂತೆ ಕೆಂಪಣ್ಣಗೆ ಸೂಚಿಸಿದ್ದರು. ಆದರೆ ಕೆಂಪಣ್ಣ ಕ್ಷಮೆ ಕೇಳದ ಹಿನ್ನೆಲೆಯಲ್ಲಿ ಮುನಿರತ್ನ ಮಾನನಷ್ಟ ಕೇಸ್‌ ದಾಖಲಿಸಿದ್ದರು. ಅಷ್ಟೇ ಅಲ್ಲದೇ ಚುನಾವಣೆ ನಡೆಯುವ ಮುನ್ನ ಇತ್ಯರ್ಥ ಆಗಬೇಕಾಗಿರುವುದರಿಂದ 4 ತಿಂಗಳ ಒಳಗಡೆ ಪ್ರಕರಣವನ್ನು ಮುಗಿಸುವಂತೆ ಮುನಿರತ್ನ ಮನವಿ ಮಾಡಿದ್ದರು.

LEAVE A REPLY

Please enter your comment!
Please enter your name here