
ಶರತ್ ಶೆಟ್ಟಿ
ಉಡುಪಿ:
ಇಲ್ಲಿನ ಕಾಪು ಪಾಂಗಾಳದಲ್ಲಿ ಭಾನುವಾರ ಸಂಜೆ 42 ವರ್ಷದ ವ್ಯಕ್ತಿಯನ್ನು ಅಪರಿಚಿತ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಪಾಂಗಾಳ ಸಮೀಪದ ಮುಂಡೇಡಿ ನಿವಾಸಿ ಶರತ್ ಶೆಟ್ಟಿ ಎಂದು ಗುರುತಿಸಲಾಗಿದೆ.
ಶರತ್ ಶೆಟ್ಟಿಗೆ ಅಪರಿಚಿತ ವ್ಯಕ್ತಿಗಳು ಚಾಕುವಿನಿಂದ ಇರಿದಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ. ಆದರೆ ಕೊಲೆಯ ಹಿಂದಿನ ಉದ್ದೇಶವು ಪೊಲೀಸರಿಂದ ಇನ್ನೂ ತಿಳಿದುಬಂದಿಲ್ಲ.
ಮೃತರ ದೇಹದ ಎದೆಯ ಭಾಗದಲ್ಲಿ ಗಾಯ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ. ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಪೊಲೀಸ್ ತಂಡ ಪ್ರಯತ್ನಿಸುತ್ತಿದೆ.
ಕಾರ್ಕಳ ಡಿವೈಎಸ್ಪಿ ಅರವಿಂದ್ ಕಲಗುಜ್ಜಿ, ಕಾಪು ವೃತ್ತ ನಿರೀಕ್ಷಕ ಕೆ.ಸಿ. ಪೂವಯ್ಯ, ಕಾಪು ಎಸ್ಸೈ ಸುಮ ಬಿ., ಕ್ರೈಂ ಎಸ್ಸೈ ಭರತೇಶ್ ಕಂಕಣವಾಡಿ ಸಹಿತ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಕಾಪು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.