Home ಕರ್ನಾಟಕ ಆರ್ಥಿಕ ಬಲ ತುಂಬುವುದೇ ನಮ್ಮ ಗುರಿ: ಮುಖ್ಯಮಂತ್ರಿ

ಆರ್ಥಿಕ ಬಲ ತುಂಬುವುದೇ ನಮ್ಮ ಗುರಿ: ಮುಖ್ಯಮಂತ್ರಿ

54
0

– 67ನೇ ಅಖಿಲ ಭಾರತ ಸಹಕಾರ ಸಪ್ತಾಹ 2020ಕ್ಕೆ ಚಾಲನೆ

ಬೆಂಗಳೂರು:

ಸಹಕಾರ ವ್ಯವಸ್ಥೆ ಒಂದು ಆರ್ಥಿಕ ವ್ಯವಸ್ಥೆಯಾಗಿದೆ. ಇದು ಆರ್ಥಿಕವಾಗಿ ಅಬಲರಾದವರ ಏಳ್ಗೆಗೆ ನಿರಂತರವಾಗಿ ಶ್ರಮಿಸುತ್ತಾ ಬಂದಿದೆ. ಈ ಬಾರಿ ಸಪ್ತಾಹದ ಧ್ಯೇಯ “ಕೊರೋನ ಸೋಂಕು – ಆತ್ಮನಿರ್ಭರ ಭಾರತ – ಸಹಕಾರ ಸಂಸ್ಥೆಗಳು” ಎಂಬುದಾಗಿದೆ. ನಾಗರಿಕರಿಗೆ ಸ್ಪಂದಿಸಿ ಆರ್ಥಿಕ ಬಲ ತುಂಬುವುದೇ ನಮ್ಮ ಗುರಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ 2020 ಉದ್ಘಾಟಿಸಿ ಮಾತನಾಡಿ, ಲಾಕ್ ಡೌನ್ ಸಂದರ್ಭದಲ್ಲಿ ಈಗಾಗಲೇ ರಾಜ್ಯದ ಸಹಕಾರ ಇಲಾಖೆ ಮತ್ತು ಸಹಕಾರ ಸಂಸ್ಥೆಗಳು ಬಡಜನರಿಗೆ, ವಲಸೆ ಕಾರ್ಮಿಕರಿಗೆ, ದುರ್ಬಲ ವರ್ಗಗಳ ಜನರಿಗೆ ಆಹಾರ ವಿತರಣೆ, ದವಸಧಾನ್ಯಗಳ ವಿತರಣೆ, ತರಕಾರಿ ವಿತರಣೆಗೆ ಸಹಾಯ ಮಾಡಿವೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳ ಕೋವಿಡ್-19ರಪರಿಹಾರ ನಿಧಿಗೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರ ಮುಂದಾಳತ್ವದಲ್ಲಿ 53 ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು ದೇಣಿಗೆಯಾಗಿ ನೀಡಿರುವುದಕ್ಕೆ ನಾನು ವೈಯಕ್ತಿಕವಾಗಿ ಮತ್ತು ಸರ್ಕಾರದ ಪರವಾಗಿ ಅಭಿನಂದಿಸುತ್ತೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

WhatsApp Image 2020 11 14 at 13.51.59

ಹಾಗೆಯೇ, ಸಹಕಾರ ಸಚಿವರಾದ ಸೋಮಶೇಖರ್ ಅವರ ಮಾರ್ಗದರ್ಶನದಲ್ಲಿ ರಾಜ್ಯದ 42,524 ಆಶಾ ಕಾರ್ಯಕರ್ತೆಯರಿಗೆ ತಲಾ 3,000 ರೂ.ಗಳಂತೆ ಒಟ್ಟು 12.75 ಕೋಟಿ ರೂ. ಗಳ ಪ್ರೋತ್ಸಾಹಧನವನ್ನು ಸಹಕಾರ ಸಂಸ್ಥೆಗಳು ವಿತರಿಸಿರುವುದು ಕೂಡ ಇಡೀ ದೇಶಕ್ಕೆ ಮಾದರಿ ಎನಿಸಿದ್ದು, ಶೇಕಡಾ 100 ರಷ್ಟು ಗುರಿ ಸಾಧನೆ ಮಾಡಿರುವುದು ಕೂಡ ಹೆಮ್ಮೆಯ ವಿಚಾರವಾಗಿದೆ ಎಂದರು.

ಆರ್ಥಿಕ ಸ್ವಾವಲಂಬನೆಗೆ ನೆರವು ಕೋವಿಡ್-19ರ ಸಂಕಷ್ಟದ ಸಂದರ್ಭದಲ್ಲಿರೈತರಿಗೆ ಕೃಷಿ ಸಾಲ ಒದಗಿಸಲು ಕೇಂದ್ರ ಸರ್ಕಾರವು“Special Liquidity Facility” ಅಡಿಯಲ್ಲಿ 1700 ಕೋಟಿ ರೂ.ಗಳನ್ನು ನಬಾರ್ಡ್ ಮೂಲಕ ಡಿಸಿಸಿ ಬ್ಯಾಂಕುಗಳಿಗೆ ನೀಡಲಾಗಿದ್ದು, ರೈತರ ಸಂಕಷ್ಟದ ಸಮಯದಲ್ಲಿ ಕೃಷಿಗೆ ಅವಶ್ಯಕ ಸಾಲವನ್ನು ಒದಗಿಸಲಾಗಿದೆ. ಇದರಿಂದ ಸಹಕಾರ ಸಂಸ್ಥೆಗಳ ಸದಸ್ಯರುಗಳು ಕಿಸಾನ್ ಕ್ರೆಡಿಟ್ಕಾರ್ಡ್ (ರೂಪೇಕಾರ್ಡ್) ಮೂಲಕ ಆರ್ಥಿಕ ನೆರವು ಪಡೆದು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ನೆರವಾಗಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

“ಆರ್ಥಿಕ ಸ್ಪಂದನ” ಮೂಲಕ 39,600 ಕೋಟಿ ರೂ. ಸಾಲ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲಾಕ್ಡೌನ್ ಸಂದರ್ಭದಲ್ಲಿ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಹಾಗೂ ಆರ್ಥಿಕವಾಗಿ ಅಬಲರಾದವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ 20 ಲಕ್ಷ ಕೋಟಿ ರೂ.ಗಳ ಬೃಹತ್ ಮೊತ್ತದ ಪ್ಯಾಕೇಜನ್ನು ಘೋಷಿಸಿದ್ದಾರೆ. ಈಗಾಗಲೇ ಸಹಕಾರ ಇಲಾಖೆಯ ಮೂಲಕ 39,600 ಕೋಟಿ ರೂ.ಗಳನ್ನು “ಆರ್ಥಿಕ ಸ್ಪಂದನ” ಕಾರ್ಯಕ್ರಮದ ಮೂಲಕ ಸಚಿವ ಸೋಮಶೇಖರ್ ಅವರು ರಾಜ್ಯಾದ್ಯಂತ ಸಂಚರಿಸಿ ರೈತರು, ಸಾಮಾನ್ಯಜನರು, ಮೀನುಗಾರರು, ಹೈನುಗಾರರು ಸೇರಿದಂತೆ ವಿವಿಧ ವಲಯಗಳ ಜನರಿಗೆ ಸಾಲ ವಿತರಣೆ ಮಾಡಿರುವುದು ಕೂಡ ಅತ್ಯಂತ ಸಂತೋಷದ ವಿಚಾರವಾಗಿದೆ. ರಾಜ್ಯ ಸರ್ಕಾರ ಸಹಕಾರ ವಲಯಕ್ಕೆ ಪ್ರೋತ್ಸಾಹ ನೀಡುತ್ತಲೇ ಬಂದಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

WhatsApp Image 2020 11 14 at 13.52.02

ಆತ್ಮನಿರ್ಭರ ಪ್ಯಾಕೇಜ್ಅಡಿಯಲ್ಲಿ ಈಗಾಗಲೇ ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಯೋಜನೆಗಳನ್ನು ಘೋಷಣೆ ಮಾಡಿ, ರೈತಉತ್ಪಾದಕ ಸಂಸ್ಥೆ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಲಿಷ್ಠಗೊಳಿಸಲು ರೂ.4525 ಕೋಟಿಗಳ ಮೊತ್ತವನ್ನು ರಾಜ್ಯಕ್ಕೆ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.

ಕೋವಿಡ್-19ರ ಸಂದರ್ಭದಲ್ಲಿ ಹೈನೋದ್ಯಮದಲ್ಲಿ ತೊಡಗಿಸಿಕೊಂಡಿರುವ ಹೈನುಗಾರರಿಗೆ ದುಡಿಯುವ ಬಂಡವಾಳಕ್ಕೆ ಸಾಲವನ್ನು ಒದಗಿಸಲು ಕೆಸಿಸಿ ಡೇರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಕೃಷಿ ಕಾರ್ಮಿಕರಿಗೆ ರೂ. 2 ಲಕ್ಷಗಳವರೆಗಿನ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ವಿತರಿಸಲಾಗುತ್ತಿದ್ದು, ತಹಲ್ವರೆಗೆ 1.15 ಲಕ್ಷ ರೈತರಿಗೆ ರೂ. 171 ಕೋಟಿಗಳನ್ನು ವಿತರಿಸಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಮಾತನಾಡಿ, ಕೋವಿಡ್ 19 ಬಂದ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರ ನೀಡಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ರಾಜ್ಯದಲ್ಲಿ ಆರೋಗ್ಯದ ದೃಷ್ಟಿಯಿಂದ ಬೇಕಾದ ಕ್ರಮಗಳನ್ನು ತೆಗೆದುಕೊಂಡು ಕೊರೋನಾ ನಿಯಂತ್ರಣ ಮಾಡುವಲ್ಲಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ಸಹಕಾರ ಇಲಾಖೆ ಮೂಲಕ ಬಡವರ ಬಂಧು ಮೂಲಕ ಸಾಲ ವಿತರಣೆಯನ್ನು ಸಮರ್ಪಕವಾಗಿ ಜಾರಿ ಮಾಡಲಾಗಿತ್ತಿದೆ. ಮಹಿಳಾ ಸ್ವಸಹಾಯ ಸಂಘಗಳಿಗೆ ಸಹ ಶೂನ್ಯ ಬಡ್ಡಿದರದಲ್ಲಿ ಸಾಲಗಳನ್ನು ವಿತರಣೆ ಮಾಡಿದ್ದೇವೆ ಎಂದು ತಿಳಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಚಟುವಟಿಕೆ ಸಂಪೂರ್ಣ ಕುಂಠಿತಗೊಂಡಿತ್ತು. ಹೀಗಾಗಿ ಆರ್ಥಿಕತೆಯನ್ನು ಮೇಲೆತ್ತುವ ಸಲುವಾಗಿ ಮಾನ್ಯ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಅನ್ನು ಘೋಷಣೆ ಮಾಡಿತು. ಅದರಲ್ಲಿ ರಾಜ್ಯದ ಪಾಲಾದ 4525 ಕೋಟಿ ರೂಪಾಯಿಗಳು ಬಂದಿದ್ದು, ಇದರ ಮೂಲಕ ವಿವಿಧ ಕ್ಷೇತ್ರಗಳಿಗೆ ಸಾಲವನ್ನು ಸಹಕಾರ ಇಲಾಖೆ ಮೂಲಕ ವಿತರಣೆ ಮಾಡಲಾಗುತ್ತಿದೆ. ಅಲ್ಲದೆ, ಮೀನುಗಾರರು ಹಾಗೂ ಹೈನುಗಾರಿಕೆಗೆ ಶೂನ್ಯ ಬಡ್ಡಿದರದಿಂದ ಶೇ. 3ರ ಬಡ್ಡಿದರದಲ್ಲಿ ಮೂರು ಲಕ್ಷ ರೂಪಾಯಿವರೆಗೂ ಸಾಲ ನೀಡಲಾಗುತ್ತಿದೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.

ಕೋವಿಡ್ ಸಂದರ್ಭ ಎದುರಾದ ಹಿನ್ನೆಲೆಯಲ್ಲಿ ರೈತರಿಗೆ ಪ್ರಸಕ್ತ ಸಾಲಿನಲ್ಲಿ ಸಾಲ ನೀಡುವುದು ಬಹಳ ಕಷ್ಟ ಎಂದೇ ಅಂದಾಜಿಸಲಾಗಿತ್ತು. ಕಳೆದ ವರ್ಷ ನೀಡಲಾಗಿದ್ದ 13500 ಕೋಟಿಯಷ್ಟು ಸಾಲವನ್ನೂ ಸಹ ನೀಡಲು ಕಷ್ಟವಾಗಬಹುದು ಎಂಬ ಆತಂಕದ ನಡುವೆಯೂ ನಾವು 24 ಲಕ್ಷ ರೈತರಿಗೆ 14,500 ಕೋಟಿ ರೂಪಾಯಿ ಸಾಲ ವಿತರಣೆ ಗುರಿ ಹಾಕಿಕೊಂಡೆವು. ಅದರನ್ವಯ ಈವರೆಗೆ ಅಂದರೆ ನವೆಂಬರ್ 14ರ ವರೆಗೆ 15,22,076 ರೈತರಿಗೆ 9945.82 ಕೋಟಿ ರೂಪಾಯಿ ಸಾಲವನ್ನು ನೀಡಿದ್ದೇವೆ ಎಂದು ಸೋಮಶೇಖರ್ ತಿಳಿಸಿದರು.

ಸಹಕಾರ ಇಲಾಖೆಯ ಮಹಾಮಂಡಳದ ಕಾರ್ಯಚಟುವಟಿಕೆಗಳ ಕೈಪಿಡಿಯನ್ನು ಕಂದಾಯ ಸಚಿವರಾದ ಆರ್.ಅಶೋಕ್ ಅವರು ಹಾಗೂ ಸಹಕಾರ ಪತ್ರಿಕೆಯ ವಿಶೇಷ ಸಂಚಿಕೆಯನ್ನು ನಗರಾಭಿವೃದ್ಧಿ ಸಚಿವರಾದ ಬಿ.ಎ.ಬಸವರಾಜು ಬಿಡುಗಡೆಗೊಳಿಸಿದರು.

ಕಂದಾಯ ಸಚಿವರಾದ ಆರ್. ಅಶೋಕ್, ನಗರಾಭಿವೃದ್ಧಿ ಸಚಿವರಾದ ಬಿ.ಎ. ಬಸವರಾಜು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಎಸ್.ಆರ್.ವಿಶ್ವನಾಥ್, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಸಹಕಾರ ಸಂಘಗಳ ನಿಂಬಂಧಕರಾದ ಎಸ್. ಜಿಯಾಉಲ್ಲಾ ಸೇರಿದಂತೆ ಹಿರಿಯ ಸಹಕಾರಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here