ಮಡಿಕೇರಿ:
ಕೊಡಗಿನ ಎಸ್ಟೇಟ್‌ಗಳಾದ್ಯಂತ ನಿರಂತರವಾದ ಸಿಹಿಯಾದ ಪರಿಮಳವೊಂದು ಹೊರಬರುತ್ತಿದೆ ಮತ್ತು ಅವು ಅರಳಿದ ಕಾಫಿ ಗಿಡಗಳಿಂದ ಹೊರಹೊಮ್ಮುತ್ತಿದೆ. ಸುವಾಸನೆ ಮತ್ತು ಹೂವುಗಳ ದೃಶ್ಯ ನೋಡುಗರಿಗೆ ಸುಂದರವಾಗಿದ್ದರೂ, ಕಾಫಿ ಬೆಳೆಗಾರರ ಚಿಂತೆಯ ಸಂಕೇತವಾಗಿದೆ ಎಂದರೆ ತಪ್ಪಾಗಲಾರದು.
ಎರಡು ತಿಂಗಳ ಹಿಂದೆಯೇ ಗಿಡಗಳಲ್ಲಿ ಹೂವು ಅರಳಿದ ಕಾರಣ ಜಿಲ್ಲೆಯಾದ್ಯಂತ ಅನೇಕ ಬೆಳೆಗಾರರು ಕಾಫಿ ಕೊಯ್ಯುವ ಕೆಲಸವನ್ನು ನಿಲ್ಲಿಸುವಂತೆ ಮಾಡಿದೆ.
‘ನನ್ನ ಎಸ್ಟೇಟ್‌ನಲ್ಲಿ ಸುಮಾರು ಶೇ 70 ರಷ್ಟು ಮಾಗಿದ ಕಾಫಿ ಬೀಜಗಳನ್ನು ತೆಗೆಯಲಾಗಿದೆ. ಆದರೆ, ಮುಂದಿನ ವರ್ಷದ ಫಸಲಿನೊಂದಿಗೆ ಗಿಡಗಳೆಲ್ಲ ಹೂ ಬಿಡುತ್ತಿರುವ ಕಾರಣ ಈಗ ಕೀಳುವ ಕೆಲಸವನ್ನು ನಿಲ್ಲಿಸಿದ್ದೇವೆ. ಕಾಫಿ ಕೊಯ್ಲು ಪುನರಾರಂಭಿಸುವವರೆಗೆ ನಾವು ಕನಿಷ್ಠ ಒಂದು ತಿಂಗಳು ಕಾಯಬೇಕಾಗಿದೆ. ಏಕೆಂದರೆ, ಗಿಡಗಳಲ್ಲಿ ಹೂವುಗಳು ಅರಳಲು ಸುಮಾರು ಒಂದು ತಿಂಗಳು ಸಮಯ ತೆಗೆದುಕೊಳ್ಳುತ್ತದೆ’ ಎಂದು ದಕ್ಷಿಣ ಕೊಡಗಿನ ಬೆಳೆಗಾರ ಹರೀಶ್ ಮಾದಪ್ಪ ಹೇಳುತ್ತಾರೆ.
ಬೆಳೆಗಾರರಾಗಿದ್ದ ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಂಡ ಅವರು, ಬದಲಾಗುತ್ತಿರುವ ಹವಾಮಾನದಿಂದ ಕಾಫಿಗೆ ತೀವ್ರ ಹಾನಿಯಾಗಿದೆ ಎಂದು ವಿವರಿಸಿದರು.
ಕಾಫಿ-ಪಿಕ್ಕಿಂಗ್ ಸೀಸನ್ ಸಾಮಾನ್ಯವಾಗಿ ಜನವರಿಯಲ್ಲಿ ಪ್ರಾರಂಭವಾಗುತ್ತದೆ ಮತ್ತು ಮಾರ್ಚ್ ಮೊದಲ ವಾರದಲ್ಲಿ ಕೊನೆಗೊಳ್ಳುತ್ತದೆ. ಆದಾಗ್ಯೂ, ನವೆಂಬರ್‌ನಲ್ಲಿ ಚಂಡಮಾರುತದ ಪ್ರಭಾವದಿಂದಾಗಿ ಸುರಿದ ಮಳೆಯು ಕಾಫಿ ಹಣ್ಣಾಗುವ ಪ್ರಕ್ರಿಯೆಯನ್ನು ಮುಂದೂಡಿತು ಮತ್ತು ಡಿಸೆಂಬರ್‌ನಲ್ಲಿ ಕಾಫಿ ತೆಗೆಯುವಿಕೆ ಪ್ರಾರಂಭವಾಯಿತು. ಇದೀಗ ಮತ್ತೆ ಕಳೆದ ವಾರದಿಂದ ಏಕಾಏಕಿ ಸುರಿದ ತುಂತುರು ಮಳೆಯಿಂದಾಗಿ ಕಾಫಿ ಗಿಡಗಳಲ್ಲಿ ಹೂವುಗಳು ಅರಳುವಂತೆ ಮಾಡಿದೆ.
‘ಹಿಂದೆ, ಕೃಷಿ ಭೂಮಿಯಲ್ಲಿ ಸುಗ್ಗಿಯ ಕೆಲಸದ ನಂತರ, ನಾವು ಕಾಫಿ ತೆಗೆಯುವ ಕೆಲಸವನ್ನು ಪ್ರಾರಂಭಿಸುತ್ತಿದ್ದೆವು. ಆದರೆ, ಈಗ ಸತತ ನಷ್ಟದಿಂದಾಗಿ ಯಾವುದೇ ರೈತರು ಜಮೀನಿನಲ್ಲಿ ಭತ್ತದ ಕೃಷಿಯನ್ನು ಮಾಡುತ್ತಿಲ್ಲ. ಇದಲ್ಲದೆ, ಮಾರ್ಚ್ ವೇಳೆಗೆ ಕಾಫಿ ಕೊಯ್ಲು ಮಾಡಿದ ನಂತರ, ಮುಂದಿನ ವರ್ಷದ ಬೆಳೆಗೆ ಹೂಬಿಡುವ ಪ್ರಕ್ರಿಯೆಗೆ ಸಸ್ಯಗಳನ್ನು ತಯಾರಿಸಲು ನಾವು ಎಸ್ಟೇಟ್‌ಗಳಾದ್ಯಂತ ಸಿಂಪಡಿಸುವ ನೀರಾವರಿ ವ್ಯವಸ್ಥೆಯನ್ನು ಮಾಡಿದ್ದೇವೆ. ಆದರೆ, ಹವಾಮಾನ ಬದಲಾವಣೆಯು ಎಸ್ಟೇಟ್‌ಗಳಲ್ಲಿನ ಸಂಪೂರ್ಣ ಕೆಲಸದ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಿದೆ’ ಎಂದು ಅವರು ತಿಳಿಸಿದರು.
ಅವರ ಪ್ರಕಾರ, ಶೇ 95 ರಷ್ಟು ಕಾಫಿ ಬೆಳೆಗಾರರು ಈ ವರ್ಷ ಇಳುವರಿ ಕುಸಿತವನ್ನು ಕಂಡಿದ್ದಾರೆ. ‘ನಾನು ಕಳೆದ ವರ್ಷಕ್ಕಿಂತ ಈ ಬಾರಿ ಶೇ 35 ರಷ್ಟು ಕಡಿಮೆ ಇಳುವರಿಯನ್ನು ಕಂಡಿದ್ದೇನೆ’ ಎಂದರು. ಈ ಋತುವಿನ ಆರಂಭದಲ್ಲಿ ಕಾಫಿ ಗಿಡದಲ್ಲಿ ಹೂವುಗಳು ಅರಳಿರುವುದರಿಂದ ಮುಂದಿನ ವರ್ಷದ ಇಳುವರಿಯು ಸಹ ಹಾನಿಗೊಳಗಾಗುತ್ತದೆ. ಏಕೆಂದರೆ, ಈ ಹೂವುಗಳು ಮುಂಗಾರು ಪೂರ್ವ ಮಳೆ ಮತ್ತು ಮುಂಬರುವ ಮಾನ್ಸೂನ್‌ಗಳ ವೇಳೆ ಬದುಕಲು ಸಾಧ್ಯವಿಲ್ಲ.
‘ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಯೋಜನೆಯಡಿ ಹಲವಾರು ಬೆಳೆಗಾರರು ಗರಿಷ್ಠ 28,000 ರೂಪಾಯಿ ಪರಿಹಾರವನ್ನು ಪಡೆದಿದ್ದರೂ, ಬಿಡುಗಡೆಯಾದ ನಿಧಿಯು ಅವರು ಎದುರಿಸುತ್ತಿರುವ ಹೆಚ್ಚಿದ ನಷ್ಟವನ್ನು ಉಳಿಸಿಕೊಳ್ಳಲು ಸಹಾಯ ಮಾಡುವುದಿಲ್ಲ. ನಿರ್ವಹಣಾ ವೆಚ್ಚವು ಹೆಚ್ಚಾಗಿದೆ ಮತ್ತು ಪ್ರತಿ ಮಳೆಯ ಜೊತೆಗೆ ನಷ್ಟವು ಹೆಚ್ಚಾಗುತ್ತಿದೆ. ಆದರೆ, ಒಂದು ದಶಕದಿಂದ ಪರಿಹಾರದ ಮೊತ್ತ ಒಂದೇ ಆಗಿದೆ’ ಎಂದು ಅವರು ಪರಿಹಾರ ಮೊತ್ತವನ್ನು ಪರಿಷ್ಕರಿಸಲು ಒತ್ತಾಯಿಸುತ್ತಾರೆ.