ಬೆಳಗಾವಿ:
ರಾಜ್ಯದ ರೈತರ ಕೃಷಿ ಪಂಪ್ಸೆಟ್ಗಳಿಗೆ ಆಧಾರ್ ಲಿಂಕ್ ಮಾಡಲು ರೈತರು ಬಿಡುವುದಿಲ್ಲ. ಕೆಇಆರ್‌ಸಿ ಆದೇಶ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರದ್ದುಗೊಳಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಒತ್ತಾಯಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 40 ಲಕ್ಷ ಕೃಷಿ ರೈತರು ಕೃಷಿ ಉತ್ಪನ್ನಗಳನ್ನು ಕಷ್ಟದಲ್ಲಿ ಬೆಳೆದು ನಷ್ಟ ಅನುಭವಿಸುತ್ತಿದ್ದಾರೆ ಎಂದರು. ಇಂತಹ ಸಂದರ್ಭದಲ್ಲಿ ಆಧಾರ್ ಲಿಂಕ್ ಮಾಡಿದರೆ ಸಬ್ಸಿಡಿ ನೀಡುವುದಾಗಿ, ಇಲ್ಲವೇ ಉಚಿತ ವಿದ್ಯುತ್ ನಿಲ್ಲಿಸುತ್ತೇವೆ ಎಂದು ಕೆಇಆರ್‌ಸಿ ಆದೇಶ ಹೊರಡಿಸಿರುವುದು ಸರಿಯಲ್ಲ.
ಇದನ್ನು ನಾವು ಒಪ್ಪಲು ಸಾಧ್ಯವಿಲ್ಲ. ಕೂಡಲೇ ಇದನ್ನು ವಾಪಸ್ ಪಡೆಯಬೇಕು, ಇಲ್ಲವೇ ಮುಖ್ಯಮಂತ್ರಿಗಳೇ ಈ ಆದೇಶವನ್ನು ರದ್ದುಗೊಳಿಸಬೇಕು ಎಂದು ರಾಜ್ಯದ ರೈತ ಮುಖಂಡರು ಬೆಂಗಳೂರಿನ ವಿಧಾನಸೌಧದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಒತ್ತಾಯಿಸಿದ್ದೇವೆ ಎಂದರು.
ಮೇ. 24ರಂದು ನೂತನ ಮುಖ್ಯಮಂತ್ರಿಗಳನ್ನು ಬೆಂಗಳೂರು ವಿಧಾನಸೌಧದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಲಾಗಿದ್ದು, ರಾಜ್ಯದ ರೈತರ ಪ್ರಮುಖ ಸಮಸ್ಯೆಗಳ ಬಗ್ಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದೆ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಡಾ. ಸ್ವಾಮಿನಾಥನ್ ವರದಿಯಂತೆ ನಿಗದಿ ಮಾಡಿ ಶಾಸನಾತ್ಮಕ ಕಾನೂನು ಜಾರಿ ಮಾಡಬೇಕು. ಬೆಲೆ ಕುಸಿತವಾದಾಗ ಕೃಷಿ ಉತ್ಪನ್ನಗಳ ಖರೀದಿ ಖಾತರಿ ನೀಡಬೇಕು ಎಂದು ಕುರುಬೂರು ಶಾಂತಕುಮಾರ ತಿಳಿಸಿದರು.
2022 -23ರಲ್ಲಿ ಸಾಲಿನಲ್ಲಿ ರಾಜ್ಯ ಕಬ್ಬು ಬೆಳೆಗಾರ ಸಂಘದಿಂದ 39 ದಿನಗಳು ಕಬ್ಬು ಬೆಳೆಗಾರ ರೈತರು ಸತತ ಹೋರಾಟ ಮಾಡಿದಾಗ, ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿ ಬೆಳಗಾವಿ ವಿಧಾನಸಭೆಯಲ್ಲಿ ಕಬ್ಬುದರ ಏರಿಕೆ ಮಾಡುವಂತೆ ಆಗ್ರಹಿಸಿದಾಗ ರಾಜ್ಯ ಸರ್ಕಾರ ಕಬ್ಬಿನ ಎಫ್ಆರ್ಪಿ ಹೆಚ್ಚುವರಿ ದರ ಟನ್ಗೆ 150 ರೂ ನಿಗದಿ ಮಾಡಿ ಆದೇಶ ಹೊರಡಿಸಿತ್ತು.
ಸಿಬಿಲ್ ಸ್ಕೋರ್ ಆಧಾರದ ಮೇಲೆ ರೈತರಿಗೆ ಅವರ ಮಕ್ಕಳಿಗೆ ಶಿಕ್ಷಣ ಸಾಲ ಮತ್ತು ಬೆಳೆ ಸಾಲವನ್ನು ನಿರಾಕರಿಸಲಾಗುತ್ತಿದೆ ಎಂದು ಶಾಂತಕುಮಾರ್ ಆರೋಪಿಸಿದರು. ”ರೈತರಿಗೆ ಸಾಲ ನೀಡುವ ನೀತಿಯನ್ನು ಸರಕಾರ ಬದಲಾಯಿಸಬೇಕು. ಮೂರು ಕೃಷಿ ಮಸೂದೆಗಳನ್ನು ಹಿಂಪಡೆಯುವುದಾಗಿ ಪ್ರತಿಪಕ್ಷ ನಾಯಕರಾಗಿ ಸಿಎಂ ಭರವಸೆ ನೀಡಿದ್ದರು. ಈ ಎಲ್ಲ ವಿಚಾರಗಳನ್ನು ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಹೇಳಿದರು.