ನಾಯಕತ್ವ ಗೊಂದಲಕ್ಕೆ ಖರ್ಗೆ ಭರವಸೆ – ‘ಬಹಳ ಸಂತೋಷ’ ಎಂದ ಡಿಸಿಎಂ ಡಿಕೆ ಶಿವಕುಮಾರ್
ಬೆಂಗಳೂರು, ಫೆ.21: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ಕಾಂಗ್ರೆಸ್ನ ನಾಯಕತ್ವ ಗೊಂದಲ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂಬ ಸಚಿವ ಸತೀಶ್ ಜಾರಕಿಹೊಳಿ ಅವರ ಹೇಳಿಕೆಗೆ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ‘ಬಹಳ ಸಂತೋಷ’ ಎಂದು ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಬಳಿ ಶನಿವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಖರ್ಗೆ ಅವರ ಭರವಸೆಯನ್ನು ಸ್ವಾಗತಿಸಿದರು.
ಮುಖ್ಯಮಂತ್ರಿಗಳ ಲೇಖನ ಹಾಗೂ ಸಾಮಾಜಿಕ ಜಾಲತಾಣದ ಪೋಸ್ಟ್ ಬಗ್ಗೆ ಕೇಳಿದ ಪ್ರಶ್ನೆಗೆ, “ಈ ಬಗ್ಗೆ ನನಗೆ ಮಾಹಿತಿ ಇಲ್ಲ” ಎಂದು ಹೇಳಿದರು.
ಬಾಗಲಕೋಟೆ ಗಲಭೆ ಕುರಿತು ಕೇಳಿದಾಗ, “ನಾನು ನಿರಂತರ ಸಭೆಗಳ ಹಿನ್ನೆಲೆಯಲ್ಲಿ ಅಸ್ಸಾಂನಿಂದ ನಿನ್ನೆ ತಡರಾತ್ರಿ ಬೆಂಗಳೂರಿಗೆ ಮರಳಿದ್ದೇನೆ. ಬಹಳ ಆಯಾಸವಾಗಿದೆ. ಈ ವಿಚಾರದ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ವಿವರ ಪಡೆದುಕೊಳ್ಳುತ್ತೇನೆ,” ಎಂದು ತಿಳಿಸಿದರು.
ಕಾಂಗ್ರೆಸ್ ನಿಯೋಗ ಭೇಟಿ ನೀಡಿ ಪರಿಹಾರ ನೀಡುವ ಪ್ರಶ್ನೆಗೆ, “ಅಧಿಕಾರಿಗಳಿಂದ ವರದಿ ಬಂದ ನಂತರ ತೀರ್ಮಾನ ಕೈಗೊಳ್ಳಲಾಗುತ್ತದೆ,” ಎಂದರು.
ಘನತ್ಯಾಜ್ಯ ನಿರ್ವಹಣೆ ಸಂಬಂಧ ಶಾಸಕ ಧೀರಜ್ ಮುನಿರಾಜು ಅವರು ಅನುದಾನ ಕೇಳಿಲ್ಲವೆಂದು ಹೇಳಿರುವ ಬಗ್ಗೆ ಪ್ರಶ್ನಿಸಿದಾಗ, “ಈ ಬಗ್ಗೆ ಮುಂದೆ ಮಾತನಾಡೋಣ,” ಎಂದು ಉತ್ತರಿಸಿದರು.
ಜಾರಕಿಹೊಳಿ ಅವರ ದೆಹಲಿ ಭೇಟಿಯ ಹೇಳಿಕೆಯ ನಂತರ ಡಿಸಿಎಂ ನೀಡಿರುವ ಈ ಪ್ರತಿಕ್ರಿಯೆ ರಾಜ್ಯ ಕಾಂಗ್ರೆಸ್ನ ಒಳಚರ್ಚೆಗಳಿಗೆ ಹೊಸ ಆಯಾಮ ನೀಡಿದೆ.