ಬೆಂಗಳೂರು:
200ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ಶುಕ್ರವಾರ ಬಿಬಿಎಂಪಿಯ ಕೇಂದ್ರ ಕಚೇರಿ ವಿವಿಧ ಇಲಾಖೆಗಳಿಗೆ ದಾಳಿ ನಡೆಸಿದ್ದು ಸುಮಾರು 45 ಕಡತಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಿಬಿಎಂಪಿಯ ಜಾಹೀರಾತು, ಟೌನ್ ಪ್ಲಾನಿಂಗ್, ಟಿಡಿಆರ್, ಇಂಜಿನಿಯರಿಂಗ್ ಮತ್ತು ಕಂದಾಯ ಇಲಾಖೆಗಳಲ್ಲಿ ನಡೆಸಿದ ಹುಡುಕಾಟಗಳ ಮಾಹಿತಿಯನ್ನು ಹೊಂದಿರುವ ಎರಡು ಪುಟಗಳ ಪತ್ರಿಕಾ ಪ್ರಕಟಣೆಯನ್ನು ಎಸಿಬಿ ಅಧಿಕಾರಿಗಳು ಹಂಚಿಕೊಂಡಿದ್ದಾರೆ.
ಬೆಂಗಳೂರು ನಗರ ವಿಭಾಗದ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ವರಿಷ್ಠಾಧಿಕಾರಿಗಳು, ಬೆಂಗಳೂರು ಕೇಂದ್ರ ವಲಯದ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು (ಕೇಂದ್ರ) ನೇತೃತ್ವದಲ್ಲಿ 11 ಸ್ಥಳಗಳಲ್ಲಿ 27 ವಿವಿಧ ಬಿಬಿಎಂಪಿ ಕಚೇರಿಗಳಲ್ಲಿ ದಾಳಿ ನಡೆಸಿ ಶೋಧ ನಡೆಸಿದ್ದಾರೆ. 200ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳ ನೆರವಿನಿಂದ ದಾಳಿ ನಡೆದಿದೆ.

ಜಾಹಿರಾತು ವಿಭಾಗ : ಈ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ಬಿಬಿಎಂಪಿಯ ವ್ಯಾಪ್ತಿಯಲ್ಲಿ ಜಾಹಿರಾತು ಪ್ರದರ್ಶನಗಳು ಹಾಗು ಪಿಪಿಪಿ ಮಾದರಿಯಲ್ಲಿ ಬಸ್ ತಂಗುದಾಣ , ಪಾದಚಾರಿ ಮಾರ್ಗ ( ಸೈವಾಕ್ ) ನಿರ್ಮಾಣ ಮಾಡುವ ಏಜೆನ್ಸಿ ಮತ್ತು ಖಾಸಗಿ ವ್ಯಕ್ತಿಗಳಿಂದ ವಾಸ್ತವವಾಗಿ ಪಾಲಿಕೆಗೆ ಬರಬೇಕಾಗಿರುವ , ವಾರ್ಷಿಕ ಗುತ್ತಿಗೆ , ಬಾಡಿಗೆ , ಜಾಹಿರಾತು ಪ್ರದರ್ಶನ ಮೊತ್ತ ಮತ್ತು ಜಿ.ಎಸ್.ಟಿ ಮೊತ್ತಗಳನ್ನು ನಿಯಮಾನುಸಾರ ಸಂಗ್ರಹಣೆ ಮಾಡದೆ ಅಧಿಕಾರಿಯವರುಗಳು ಏಜೆನ್ಸಿ ಮತ್ತು ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಏಜೆನ್ಸಿರವರೊಂದಿಗೆ ಸೇರಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿ ಅಕ್ರಮ ಲಾಭ ಮಾಡಿಕೊಂಡು ಜಾಹಿರಾತು ವಿಭಾಗದಿಂದ ಬರಬೇಕಾದ ಸುಮಾರು 230 ಕೋಟಿ ರೂ ಬಾಕಿ ಹಣವನ್ನು ವಸೂಲಿ ಮಾಡದೇ ಇರುವುದು ಕಂಡು ಬಂದಿದೆ . ಹಾಗು ಕಳೆದ 1 ವರ್ಷದಿಂದ ಬಸ್ ನಿಲ್ದಾಣಗಳಲ್ಲಿ ಜಾಹಿರಾತಗಳಿಗೆ ಟೆಂಡರ್ ನಿಡದೇ ಸರ್ಕಾರಕ್ಕೆ ಕೋಟ್ಯಾಂತರ ರೂಗಳ ಜಾಹಿರಾತು ಹಣವನ್ನು ನಷ್ಟ ಪಡಿಸಿರುವುದು ಕಂಡು ಬಂದಿರುತ್ತದೆ .
ಟಿ.ಡಿ.ಆರ್. ವಿಭಾಗ : ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು ( ಟಿ.ಡಿ.ಆರ್ ) ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿಯವರುಗಳು ಭ್ರಷ್ಟಾಚಾರದಲ್ಲಿ ತೊಡಗಿ ಅವರುಗಳ ಸಂಬಂಧಿಕರ ಮಾಲಕತ್ವದ ಕಂಪನಿಗಳೊಂದಿಗೆ , ಮಧ್ಯವರ್ತಿಗಳೊಂದಿಗೆ , ಭೂಮಾಲಕರೊಂದಿಗೆ ಸೇರಿಕೊಂಡು ಪರಿಶೀಲನೆ ವೇಳೆಯಲ್ಲಿ ಟಿ.ಡಿ.ಆರ್ . ಸಂಬಂಧಪಟ್ಟಂತೆ ಆದೂರು , ರಾಮ್‌ಪುರ , ಸಿಗೇಹಳ್ಳಿ , ವೈಟ್‌ಫೀಲ್ಡ್ , ವಾರಣಾಸಿ ಇತ್ಯಾದಿ ಕಡೆಗಳಲ್ಲಿ ಐಡಿಆರ್ ಕೊಟ್ಟಿರುವ ಕಡತಗಳಲ್ಲಿ ಅವ್ಯವಹಾರ ಕಂಡು ಬಂದಿದ್ದು ಸದರಿ ಕಡತಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ .


ನಗರ ಯೋಜನೆ ವಿಭಾಗ : ಬಿಬಿಎಂಪಿಯ ನಗರ ಯೋಜನಾ ವಿಭಾಗದ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಅಭಿಯಂತರರುಗಳು ಕೆಲವು ಖಾಸಗಿ ವ್ಯಕ್ತಿಗಳಿಗೆ / ಬಹುಮಹಡಿಗಳ ಕಟ್ಟಡ ನಿರ್ಮಾಣ ಮಾಡುವ ಬಿಲ್ಡರ್‌ರವರೊಂದಿಗೆ ಸೇರಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿರುವುದು ಕಂಡು ಬಂದಿದ್ದು ಈ ಬಗ್ಗೆ ಸುಮಾರು 21 ಕಡತಗಳನ್ನು ಪರಿಶೀಲಿಸಿದ್ದು ಪ್ರಾಥಮಿಕ ಪರಿಶೀಲನೆಯಿಂದ ಸುಮಾರು ಕೋಟಿ ರೂಗಳ ಅಕ್ರಮ ಎಸಗಿರುವುದು ಕಂಡು ಬಂದಿರುತ್ತದೆ .
ಇಂಜಿನಿಯರಿಂಗ್ ವಿಭಾಗ : ಬಿಬಿಎಂಪಿಯ ವ್ಯಾಪ್ತಿಯಲ್ಲಿನ ಅಭಿಯಂತರರುಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಭ್ರಷ್ಟಾಚಾರದಲ್ಲಿ ತೊಡಗಿರುವ ಬಗ್ಗೆ ಸುಮಾರು 200 ಕಡತಗಳನ್ನು ಪರಿಶೀಲನೆ ಮಾಡಿದ್ದು ಪ್ರಾಥಮಿಕ ತನಿಖೆಯಿಂದ ಇದುವರೆಗೂ ಕೆಲವು ಕಡತಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ . ದಾಖಲಾತಿಗಳ ಪರಿಶೀಲನಾ ಕಾಲದಲ್ಲಿ ಒಂದೇ ಕಾಮಗಾರಿಗೆ ಎರಡು ಬಿಲ್ಲುಗಳನ್ನು ಮಂಜೂರು ಮಾಡಿರುವುದು ಪ್ರಾಥಮಿಕ ಪರಿಶೀಲನೆಯಿಂದ ಕಂಡು ಬಂದಿರುತ್ತದೆ .
ಕಂದಾಯ ವಿಭಾಗ : ಬಿಬಿಎಂಪಿ ಅಧಿಕಾರಿ ಮತ್ತು ಸಿಬ್ಬಂದಿಗಳು ಬಿಬಿಎಂಪಿ ವ್ಯಾಪ್ತಿಗೆ ಸೇರಿದ ಕಟ್ಟಡಗಳ ಶುಲ್ಕವನ್ನು ನಿಗದಿ ಪಡಿಸಿದ ಕಂದಾಯವನ್ನು ವಸೂಲು ಮಾಡದೆ ಕಡಿಮೆ ಕಂದಾಯವನ್ನು ವಸೂಲು ಮಾಡಿ ಕಟ್ಟಡ / ಮನೆ ಮಾಲೀಕರಿಗೆ ಅನುಕೂಲ ಮಾಡಿಕೊಟ್ಟು ಅವರಿಂದ ಅಕ್ರಮ ಸಂಭಾವನೆ ಪಡೆಯುವುದಲ್ಲದೆ , ವಾಣಿಜ್ಯ ಕಟ್ಟಡಗಳಿಗೂ ಅಪಾರ್ಟಮೆಂಟ್ ಮತ್ತು ಪೆಂಟ್ ಹೌಸ್‌ಗಳಗೂ ಸರಿಯಾದ ಕಂದಾಯವನ್ನು ನಿಗದಿ ಪಡಿಸದೆ . ಕಟ್ಟಡದ ಮಾಲಕರೊಂದಿಗೆ ಶಾಮೀಲಾಗುವುದು, ಮತ್ತು ಕಟ್ಟಡದ ನಿರ್ಮಾಣದ ವಿಸ್ತೀರ್ಣವನ್ನು ಕಡಿಮೆ ತೋರಿಸಿ ಕಂದಾಯವನ್ನು ನಿಗಧಿ ಪಡಿಸಿ ಅವರುಗಳಿಂದ ಅಕ್ರಮ ಸಂಭಾವನೆ ಪಡೆದು , ಸರ್ಕಾರಕ್ಕೆ ಪಾವತಿಯಾಗಬೇಕಾದ ಕಂದಾಯವನ್ನು ಕಡಿಮೆ ಪಡೆಯುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟುಮಾಡಿರುವುದು ಅಲ್ಲದೆ ಬಿಬಿಎಂಪಿಯ ಕಂದಾಯ ಅಧಿಕಾರಿಗಳು ವ್ಯಕ್ತಿಗಳಿಗೆ ಮಾಲಕತ್ವ ಇಲ್ಲದೆ ಇದ್ದರೂ ಸಹ ಖರಾಬು , ಸರ್ಕಾರ ಜಾಗವನ್ನು ಸೇರಿಸಿ ಖಾತೆಯನ್ನು ಮಾಡಿಕೊಟ್ಟು ಅವರಿಂದ ಅಕ್ರಮ ಲಾಭ ಮಾಡಿಕೊಳ್ಳುತ್ತಿರುವುದು ದಾಖಲಾತಿಗಳ ಪರಿಶೀಲನೆಯಿಂದ ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ . ಪರಿಶೀಲನಾ ಕಾಲದಲ್ಲಿ ಒಂದು ಖಾಸಗಿ ಆಸ್ಪತ್ರೆಯಿಂದ , ಹಾಗೂ ಎರಡು ಮಾಲ್‌ಗಳಿಂದ ಕೋಟ್ಯಾಂತರ ರೂಗಳ ತೆರಿಗೆ ಹಣ ಸಂಗ್ರಹಿಸಿದೇ ಸರ್ಕಾರಕ್ಕೆ / ಬಿಬಿಎಂಪಿ ಕೋಟ್ಯಾಂತರೂಗಳ ನಷ್ಟವುಂಟು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ.
Also Read: 200 anti-corruption sleuths search 27 offices of BBMP
Also Read: ACB sleuths seize 45 BBMP files, including 21 from Town Planning section
ಪ್ರಕರಣದ ತನಿಖಾ ಲದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿವಿಧ ವಿಭಾಗಗಳಿಗೆ ಸಂಬಂಧಪಟ್ಟಂತೆ 45 ಕಡತಗಳನ್ನು ಅಮಾನತ್ತು ಪಡಿಸಿಕೊಂಡಿದ್ದು ಪ್ರಾಥಮಿಕ ತನಿಖೆಯಿಂದ ಸರ್ಕಾರಕ್ಕೆ / ಬಿಬಿಎಂಪಿ ಬೊಕ್ಕಸಕ್ಕೆ ಕೋಟ್ಯಾಂತರ ರೂ ತೆರಿಗೆ ಹಣ ವಂಚನೆ ಸೇರಿದಂತೆ ವಿವಿಧ ಇಲಾಖೆಯಲ್ಲಿ ಸಾರ್ವಜನಿಕರ ಹಣ ದುರುಪಯೋಗ ಆಗಿರುವುದು ಪ್ರಾಥಮಿಕ ತನಿಖೆಯಿಂದ ಕಂಡು ಬಂದಿರುತ್ತದೆ . ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲಾತಿಗಳ ಪರಿಶೀಲನೆ ಕಾರ್ಯ ಮುಂದುವರೆದಿದೆ .