ಬೆಂಗಳೂರು:
ಕೋವಿಡ್ ಮೂರನೇ ಅಲೆ ಹಿನ್ನೆಲೆಯಲ್ಲಿ ಕಳೆದ ತಿಂಗಳು ಅರ್ಧಕ್ಕೆ ನಿಂತಿದ್ದ ಮೇಕೆದಾಟು ಯೋಜನೆ ಆಗ್ರಹಿಸುವ ಪಾದಯಾತ್ರೆ ಹೋರಾಟ ಇದೇ ತಿಂಗಳು 27ರಿಂದ ರಾಮನಗರದಿಂದ ಮತ್ತೆ ಆರಂಭವಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಈ ಪಾದಯಾತ್ರೆ ಆರಂಭವಾಗುತ್ತಿದ್ದು, ಮೊದಲ ದಿನ ಅಂದರೆ ಫೆ.27ರಂದು ಬಿಡದಿ ತಲುಪಿ ಅಲ್ಲಿ ತಂಗಲಾಗುವುದು. ನಂತರ 28ರಂದು ಬಿಡದಿಯಿಂದ ಬೆಂಗಳೂರಿಗೆ ಬರಲಾಗುವುದು.
ಬೆಂಗಳೂರಿನಲ್ಲಿರುವ ಒಂದೂವರೆ ಕೋಟಿ ಜನರ ಪೈಕಿ ಕೇವಲ ಶೇ.30-40ರಷ್ಟು ಜನರಿಗೆ ಮಾತ್ರ ಕಾವೇರಿ ನೀರು ಕುಡಿಯಲು ಸಿಗುತ್ತಿದೆ. ಉಳಿದ ಶೇ.60-70 ರಷ್ಟು ಜನರಿಗೆ ಕುಡಿಯಲು ಕಾವೇರಿ ನೀರು ಸಿಗುತ್ತಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ 110 ಹಳ್ಳಿಗಳಿಗೆ ಕಾವೇರಿ ನೀರಿನ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿತ್ತು. ಅದು ಈಗ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದರು.
ಬೆಂಗಳೂರಿಗೆ ಕನಕಪುರ ರಸ್ತೆ, ಮೈಸೂರು ರಸ್ತೆ, ಹೊಸೂರು, ಸರ್ಜಾಪುರ, ಹೊಸಕೋಟೆ, ಹೆಣ್ಣೂರು, ಬಳ್ಳಾರಿ, ಮಾಗಡಿ, ಹೆಸರಘಟ್ಟ ರಸ್ತೆ ಸೇರಿದಂತೆ ಸುಮಾರು 13 ರಸ್ತೆಗಳು ಬೆಂಗಳೂರನ್ನು ಸೇರಲಿದ್ದು, ಈ ಎಲ್ಲ ರಸ್ತೆಗಳಲ್ಲಿ ಸುಮಾರು 15 ಕಿ.ಮೀ ದೂರದಷ್ಟು ಪ್ರದೇಶ ಅಭಿವೃದ್ಧಿಯಾಗಿದ್ದು ಇವರು ಕೊಳವೆಬಾವಿ ಹಾಗೂ ಟ್ಯಾಂಕರ್ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಈ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸಬೇಕಾಗಿದೆ. ಮುಂದಿನ 50 ವರ್ಷಗಳ ಕಾಲ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದರು.
ಇದರ ಜತೆಗೆ ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳ ಕುಡಿಯುವ ನೀರು ಪೂರೈಕೆಗೆ ಮೇಕೆದಾಟು ಯೋಜನೆ ಅಗತ್ಯ. ಈ ಯೋಜನೆಯಿಂದ 2.5 ಕೋಟಿ ಜನರಿಗೆ ಕುಡಿಯುವ ನೀರು ಸಿಗುತ್ತದೆ. ಇದರ ಜತೆಗೆ ಈ ಯೋಜನೆಯಿಂದ 400 ಮೇ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು ಎಂದು ಹೇಳಿದರು.
ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಯೋಜನೆಯ ಡಿಪಿಆರ್ ಸಲ್ಲಿಕೆ ಮಾಡಲಾಗಿದ್ದು ಅನುಮತಿ ಪಡೆಯಲಾಗಿತ್ತು. ನಂತರ ಬಂದ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಕೇಂದ್ರ ಪರಿಸರ ಇಲಾಖೆ ಅನುಮತಿ ಪಡೆಯಲು ಆಸಕ್ತಿ ತೋರುತ್ತಿಲ್ಲ.
ನಾವು ರಾಜ್ಯದ ನೆಲ, ಜಲ, ಭಾಷೆ ವಿಚಾರ ಬಂದಾಗ ಎಲ್ಲ ಪಕ್ಷದ ನಾಯಕರನ್ನು ಕರೆದು ಸರ್ವಪಕ್ಷ ನಿಯೋಗವನ್ನು ಕರೆದುಕೊಂಡು ಹೋಗುತ್ತಿದ್ದೆವು. ಆದರೆ ಇವರು ಬೇರೆ ಪಕ್ಷದವರನ್ನು ಪರಿಗಣಿಸುತ್ತಿಲ್ಲ. ಇನ್ನು ಇವರುಗಳು ಸಂಸತ್ತಿನಲ್ಲೂ ರಾಜ್ಯದ ವಿಚಾರ ಪ್ರಸ್ತಾಪ ಮಾಡುತ್ತಿಲ್ಲ. ಮೋದಿ ಅವರಿಗೆ ನಮಸ್ಕಾರ ಹಾಕಿ ಬರುತ್ತಿದ್ದಾರೆಯೇ ಹೊರತು, ರಾಜ್ಯದ ವಿಚಾರ ಚರ್ಚಿಸುವ ಶಕ್ತಿ ಹೊಂದಿಲ್ಲ. ಹೀಗಾಗಿ ಈ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಈ ಪಾದಯಾತ್ರೆ ಮಾಡಲಾಗುತ್ತಿದೆ ಎಂದರು.
ಫೆ. 27-28ರಂದು ರಾಮನಗರ ಜಿಲ್ಲೆಯಿಂದ ಆ ಭಾಗದಲ್ಲಿ ಪಾದಯಾತ್ರೆ ನಡೆಯಲಿದೆ. ಈ ಮೊದಲು ಬೆಂಗಳೂರಿನಲ್ಲಿ 5 ದಿನ ಪಾದಯಾತ್ರೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ಕೇವಲ 3 ದಿನಕ್ಕೆ ಇಳಿಸಲಾಗಿದೆ. ಕೆಂಗೇರಿಯಿಂದ ನಾಯಂಡನಹಳ್ಳಿ, ಬನಶಂಕರಿ ದೇವಸ್ಥಾನ, ಜಯದೇವ ಆಸ್ಪತ್ರೆ, ಬಿಟಿಎಂ, ಕೋರಮಂಗಲ, ವಿವೇಕನಗರ, ಹಲಸೂರು, ಜೆಸಿ ಪಾಳ್ಯ, ಟಿವಿ ಟವರ್ ಮೂಲಕ ಅರಮನೆ ಮೈದಾನದವರೆಗೆ. ನಂತರ ಸ್ಯಾಕಿ ಟ್ಯಾಂಕ್, ಮಲ್ಲೇಶ್ವರಂ, ಶೇಷಾದ್ರಿಪುರಂ, ರೈಲ್ವೆ ನಿಲ್ದಾಣ, ಚಾಮರಾಜಪೇಟೆ, ಅಲ್ಲಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನಕ್ಕೆ ತಲುಪಲಿದೆ ಎಂದು ವಿವರಿಸಿದರು.
ಈ ಪಾದಯಾತ್ರೆಯಲ್ಲಿ ಹೆಚ್ಚಿನ ಜನ ಭಾಗವಹಿಸಬೇಕು. ಈ ಮೂರು ದಿನಗಳಲ್ಲಿ ವಾಹನ ಸಂಚಾರ ದಟ್ಟಣೆ ತೊಂದರೆ ಆಗಬಹುದು. ನಾವು ಈ ಹೋರಾಟವನ್ನು ಜನರ ಹಿತಕ್ಕಾಗಿ ಮಾಡುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದರು.
ನಾವು ಹೋರಾಟ ಮಾಡದಿದ್ದರೆ ಈ ಬಂಡ ಬಿಜೆಪಿ ಸರ್ಕಾರ ಎಚ್ಛೆತ್ತುಕೊಳ್ಳುವುದಿಲ್ಲ. ಡಿಪಿಆರ್ ಒಪ್ಪಿಗೆ ಪಡೆದು 3 ವರ್ಷಗಳಾದರೂ ಪರಿಸರ ಇಲಾಖೆ ಅನುಮತಿ ಪಡೆಯಲು ಇವರಿಂದ ಸಾಧ್ಯವಾಗಿಲ್ಲ. ಈ ಅನುಮತಿ ಸಿಕ್ಕರೆ ಯೋಜನೆಯನ್ನು ಸುಸೂತ್ರವಾಗಿ ಆರಂಭಿಸಬಹುದು. ಈ ಬಗ್ಗೆ ಬಿಜೆಪಿ ಸರ್ಕಾರ ಕಾಲಹರಣ ಮಾಡುತ್ತಿದ್ದು, ಕೇವಲ ಕಾಂಗ್ರೆಸ್ ಮೇಲೆ ಅಪಪ್ರಚಾರ ಮಾಡುತ್ತಿದೆ. ಇವರು ಈ ಕೆಲಸ ಮಾಡಿದ್ದರೆ, ನಾವು ಹೋರಾಟ ಮಾಡುವ ಪ್ರಮೇಯವೇ ಇರುವುದಿಲ್ಲ ಎಂದು ಹೇಳಿದರು.
ಅವರು ಮಾಡುವುದಿಲ್ಲ, ಮಾಡುವವರಿಗೂ ಬಿಡುವುದಿಲ್ಲ. ಇದು ಬಿಜೆಪಿಯ ಕೆಟ್ಟ ಪದ್ಧತಿ. ಕಾವೇರಿ ನೀರನ್ನು ಮಹಾರಾಜರ ನಂತರ ಕಾಂಗ್ರೆಸ್ ಮುಖ್ಯಮಂತ್ರಿಗಳೇ ವಿವಿಧ ಹಂತಗಳಲ್ಲಿ ನೀರು ತಂದಿದ್ದೇವೆ.
ಬಿಜೆಪಿಯವರು ಬೆಂಗಳೂರಿಗೆ ಯಾವುದೇ ಕೊಡುಗೆ ನೀಡಿಲ್ಲ. ಬಿಜೆಪಿ ಅಪಪ್ರಚಾರ ಮಾಡುವುದನ್ನು ಇನ್ನಾದರೂ ಬಿಟ್ಟು, ಮುಖ್ಯಮಂತ್ರಿಗಳು ಕೇಂದ್ರದಿಂದ ಅನುಮತಿ ಪಡೆದು ಯೋಜನೆ ಆರಂಭಿಸಲಿ ಸರ್ಕಾರಕ್ಕೆ ಬೇಕಾಗಿರುವ ಎಲ್ಲ ಸಹಕಾರವನ್ನು ನಾವು ನೀಡುತ್ತೇವೆ.
ಕಾಂಗ್ರೆಸ್ ಪಕ್ಷ ಒಂದು ರೂಪಾಯಿ ಕೆಲಸ ಮಾಡಿದರೆ 10 ಪೈಸೆ ಪ್ರಚಾರ ಪಡೆಯುತ್ತೇವೆ, ಆದರೆ ಬಿಜೆಪಿ ಅವರು 10 ಪೈಸೆ ಕೆಲಸ ಮಾಡಿ ಒಂದು ರೂಪಾಯಿಯಷ್ಟು ಪ್ರಚಾರ ಪಡೆಯುತ್ತಾರೆ. ಮೋದಿ ಅವರಿಂದ ಹಿಡಿದು ಎಲ್ಲ ಬಿಜೆಪಿ ನಾಯಕರೂ ಹೀಗೆ ಮಾಡುತ್ತಾರೆ.
ಅವರು ಕೆಲಸ ಮಾಡದಿದ್ದರೆ ಜನ ಒಂದಲ್ಲಾ ಒಂದು ದಿನ ಅವರನ್ನು ಕಿತ್ತೊಗೆಯುತ್ತಾರೆ.
ಪಾದಯಾತ್ರೆ ಮಾರ್ಗ ಬದಲಾಗಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಹಿಂದೆ ನಾವು ಬೆಂಗಳೂರಿನಲ್ಲಿ 5 ದಿನ ಪಾದಯಾತ್ರೆ ಮಾಡುತ್ತಿರುವ ಹಿನ್ನೆಲೆಯಲ್ಲಿ 5 ದಿನ ಹೊರ ವರ್ತುಲ ರಸ್ತೆ ಮಾರ್ಗವನ್ನು ಗುರುತಿಸಿದ್ದೆವು. ಆದರೆ ಈಗ 3 ದಿನ ಮಾಡುತ್ತಿರುವುದರಿಂದ ಮಾರ್ಗ ಬದಲಾವಣೆ ಮಾಡಲಾಗಿದೆ’ ಎಂದು ಉತ್ತರಿಸಿದರು.
ಪಾದಯಾತ್ರೆ ಮಲ್ಲೇಶ್ವರಂ ಮಾರ್ಗದಲ್ಲಿ ಬರಬೇಕು ಎಂದು ಕೆಪಿಸಿಸಿ ಅಧ್ಯಕ್ಷರು ಸೂಚನೆ ನೀಡಿದ್ದರೆ ಎಂಬ ಪ್ರಶ್ನೆಗೆ, ‘ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಬಿ.ಕೆ. ಹರಿಪ್ರಸಾದ್ ಅವರು ನಮ್ಮ ಕ್ಷೇತ್ರವನ್ನು ಪಾದಯಾತ್ರೆಯಿಂದ ಹೋರಾಗಿಡಬೇಡಿ ಎಂದು ಸಲಹೆ ನೀಡಿದ್ದರು. ಅಲ್ಲದೆ ಅರಮನೆ ಮೈದಾನದಿಂದ ನೇರವಾಗಿ ಬಂದರೆ ಸಿಎಂ ನಿವಾಸದ ಬಳಿ ಸಂಚಾರ ದಟ್ಟಣೆ ಉದ್ಭವಿಸುವ ಸಾಧ್ಯತೆ ಇದೆ. ಇದನ್ನು ತಡೆಯಲು ಈ ಮಾರ್ಗ ಆಯ್ಕೆ ಮಾಡಿದ್ದೇವೆ. ಇದರ ಹೊರತಾಗಿ ಬೇರೆ ಕಾರಣವಿಲ್ಲ’ ಎಂದು ಉತ್ತರಿಸಿದರು.
ಸಾರ್ವಜನಿಕರಿಗೆ ತೊಂದರೆ ಆಗುವುದಿಲ್ಲವೇ ಎಂಬ ಪ್ರಶ್ನೆಗೆ, ‘ಮೂರು ದಿನ ಸಂಚಾರ ದಟ್ಟಣೆ ಕಿರಿಕಿರಿ ಉಂಟಾಗುತ್ತದೆ. ನಾವು ಮುಂದಿನ 25ರಿಂದ 50 ವರ್ಷಗಳ ಕಾಲ ಕುಡಿಯುವ ನೀರಿನ ನೀಗುಸುವ ಯೋಜನೆ ಜಾರಿಗೆ ಆಹ್ರಹಿಸಿ ಸದುದ್ದೇಶದ ಹೋರಾಟ ಮಾಡುತ್ತಿದ್ದು, ಸಾರ್ವಜನಿಕರು ಮೂರು ದಿನಗಳ ಕಾಲ ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತೇನೆ’ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ವಕ್ತಾರರಾದ ಸಿ.ಆರ್ ನಾರಾಯಣಪ್ಪ, ಮಾಜಿ ಮಹಾಪೌರರಾದ ಜೆ.ಹುಚ್ಚಪ್ಪ ಹಾಗೂ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಎಂ.ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.
ಪ್ರಚಾರ ಸಮಿತಿಯಿಂದ ಪಾದಯಾತ್ರೆ ಅರಿವು ಮೂಡಿಸುವ ಕಾರ್ಯಕ್ರಮ:
ನಂತರ ಬೆಂಗಳೂರಿನಲ್ಲಿ 3 ದಿನ ಪಾದಯಾತ್ರೆ ಮಾಡಲಾಗುವುದು. ಈ ಪಾದಯಾತ್ರೆ ಕೆಂಗೇರಿ ತಲುಪುವ ಮೂಲಕ ಬೆಂಗಳೂರು ಪ್ರವೇಶಿಸಲಿದೆ.
ಅದಕ್ಕೆ ಪೂರಕವಾಗಿ ಈ ಪಾದಯಾತ್ರೆ ಬಗ್ಗೆ ಬೆಂಗಳೂರಿನ ಎಲ್ಲ ಜನರಿಗೂ ಈ ಬಗ್ಗೆ ಅರಿವು ಮೂಡಿಸಲು ಮೇಕೆದಾಟು ಯೋಜನೆ ಕುರಿತ ವಾಹನಗಳು ಸಂಚಾರ ಮಾಡಲಿವೆ. ಈ ವಾಹನಗಳು ಪಾದಯಾತ್ರೆಯ ಮಾರ್ಗದ ಪ್ರದೇಶಗಳಲ್ಲಿ ಸಂಚಾರ ಮಾಡಲಿವೆ.
ಪ್ರಚಾರ ಸಮಿತಿ ಅಧ್ಯಕ್ಷರಾದ ಮನೋಹರ್ ಹಾಗೂ ಸಮಿತಿಯ ಬೆಂಗಳೂರಿನ ಮೂವರು ಅಧ್ಯಕ್ಷರಾದ ಜಯಸಿಂಹ,ಎ.ಅನಂದ್ ಜನಾರ್ದನ ಅವರು ಕಾರ್ಯಕ್ರಮ ರೂಪಿಸಿದ್ದಾರೆ.