Home ಬೆಂಗಳೂರು ನಗರ ಬಿಬಿಎಂಪಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ-ಬಿಎಸ್‍ವೈ

ಬಿಬಿಎಂಪಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ-ಬಿಎಸ್‍ವೈ

15
0
Accept BBMP election as a challenge - BS Yediyurappa
Accept BBMP election as a challenge - BS Yediyurappa

ಬೆಂಗಳೂರು:

ಬಿಬಿಎಂಪಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ. ಬಿಜೆಪಿ ಅಧಿಕಾರ ಪಡೆಯುವಂತೆ ಮಾಡಿ. ನರೇಂದ್ರ ಮೋದಿಯವರು ಬೆಂಗಳೂರಿಗೆ ನೀಡುವ ಕೊಡುಗೆಗಳ ಸದ್ಬಳಕೆ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.

ನಗರದಲ್ಲಿ ಇಂದು ಬೆಂಗಳೂರು ಕೇಂದ್ರ ಜಿಲ್ಲಾ ವತಿಯಿಂದ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಕೊಟ್ಟ ಗ್ಯಾರಂಟಿಗಳನ್ನು ಜನರು ನಂಬಿದ್ದರು. ಇದರ ಪರಿಣಾಮವಾಗಿ ನಮಗೆ ಹಿನ್ನಡೆ ಆಗಿದೆ. ಕಾಂಗ್ರೆಸ್ಸಿಗರು ನೀಡಿದ 5 ಭರವಸೆಗಳನ್ನು ನೂರಕ್ಕೆ ನೂರು ಚಾಚೂತಪ್ಪದೆ ಕಾರ್ಯರೂಪಕ್ಕೆ ತರಬೇಕು; ಇಲ್ಲವೇ ಅಧಿಕಾರ ಬಿಟ್ಟು ತೊಲಗಲಿ ಎಂದು ಎಚ್ಚರಿಸಿದರು.

ವಿಧಾನಸಭೆ ಒಳಗೆ ನಮ್ಮ ಶಾಸಕರು ಹೋರಾಡುತ್ತಾರೆ. ಸದನದ ಹೊರಗೆ ನಾವು ಸಾವಿರಾರು ಜನರು ಗಾಂಧಿ ಪ್ರತಿಮೆ ಕೆಳಗೆ ಕುಳಿತು ಅಧಿವೇಶನ ಮುಗಿಯುವವರೆಗೂ ಹೋರಾಟ ಮಾಡಬೇಕು. ಪ್ರಧಾನಿ ಮೋದಿಜಿ ಕೊಡುವ 5 ಕೆಜಿಗೆ ಕಾಂಗ್ರೆಸ್ಸಿನ 10 ಕೆಜಿ ಅಕ್ಕಿ ಸೇರಿಸಿ ಪ್ರತಿಯೊಬ್ಬರಿಗೆ 15 ಕೆಜಿ ನೀಡಲು ಒತ್ತಾಯಿಸಬೇಕು. ಈ ಹೋರಾಟದಲ್ಲಿ ನಾನು ಭಾಗವಹಿಸುತ್ತೇನೆ ಎಂದು ತಿಳಿಸಿದರು.

ಸಿದ್ದರಾಮಯ್ಯನವರು ಭರವಸೆ ನೀಡಿ ಅಧಿಕಾರ ಮದದಿಂದ ಈಗ ಮೋದಿಜಿ ಅವರ ಕಡೆ ತೋರಿಸುತ್ತಿದ್ದಾರೆ. ಮೋದಿಯವರು ಉಚಿತವಾಗಿ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದರೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ಸಿಗರು ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸುವಂತೆ ಹೋರಾಟ ಮಾಡಿ ಈ ಸರಕಾರಕ್ಕೆ ಪಾಠ ಕಲಿಸಬೇಕಿದೆ ಎಂದು ಕರೆನೀಡಿದರು.

ಭರವಸೆಗಳ ಈಡೇರಿಸುವಿಕೆಗೆ ಆಗ್ರಹಿಸಿ ನಮ್ಮ ಶಾಸಕರು ಸದನದ ಒಳಗೆ ಹೋರಾಡಬೇಕು. ಗ್ಯಾರಂಟಿ ಈಡೇರದಿದ್ದರೆ ಸದನ ನಡೆಯದಂತೆ ನೋಡಿಕೊಳ್ಳಬೇಕು. ಸದನದ ಹೊರಗೆ ನಾವು ಹೋರಾಟ ಮಾಡಿ ಬೆಂಬಲ ನೀಡುತ್ತೇವೆ. ಈ ರಾಜಕೀಯ ದೊಂಬರಾಟ ನಡೆಯಲು ಬಿಡುವುದಿಲ್ಲ ಎಂದು ನುಡಿದರು.

ಇಡೀ ವಿಶ್ವವೇ ಕೊಂಡಾಡುವ ಬಿಹಾರದ ಪಾಟ್ನಾದಲ್ಲಿ 18 ಪಕ್ಷಗಳು ಸಭೆ ಸೇರಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೆ ಅಧಿಕಾರಕ್ಕೆ ಬರಲು ಬಿಡಬಾರದೆಂಬ ಸಂಕಲ್ಪ ಮಾಡಿದ್ದಾರೆ. 18 ಪಕ್ಷಗಳ ಮುಖಂಡರು ಪ್ರಾಮಾಣಿಕರೇ ಆಗಿದ್ದರೆ ಇಂಥ ಸಂಕಲ್ಪ ಮಾಡುತ್ತಿರಲಿಲ್ಲ. ಅದರ ಬದಲಾಗಿ ಅವರನ್ನು ಬೆಂಬಲಿಸಬೇಕಿತ್ತು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೋದಿಜಿ ಅವರ ನೇತೃತ್ವದಲ್ಲಿ 300ರಷ್ಟು ಲೋಕಸಭಾ ಸೀಟುಗಳನ್ನು ಗೆದ್ದು ಮತ್ತೊಮ್ಮೆ ಅಧಿಕಾರ ಪಡೆಯಲಿದೆ ಎಂದು ತಿಳಿಸಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ 28 ಲೋಕಸಭಾ ಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಅಸಾಧ್ಯವಾದುದು ಯಾವುದೂ ಇಲ್ಲ. ನಮ್ಮ ಕಾರ್ಯಕರ್ತರು ಮನಸ್ಸು ಮಾಡಿದರೆ ಈ ಗುರಿ ಈಡೇರಿಸಲು ಸಾಧ್ಯವಿದೆ ಎಂದು ನುಡಿದರು.

ಸಾಧನೆ ಮಾತನಾಡಲಿ. ಮಾತೇ ಸಾಧನೆ ಆಗದಿರಲಿ ಎಂದು ಕಿವಿಮಾತು ಹೇಳಿದರು. ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸುವ ನಿರ್ಧಾರ ನಿಮ್ಮದಾಗಲಿ ಎಂದು ಸಲಹೆ ನೀಡಿದರು.

ತಂಡದ ಸಂಚಾಲಕ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಸಂಸದ ಪಿ.ಸಿ.ಮೋಹನ್, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಡಾ.ಅಶ್ವತ್ಥನಾರಾಯಣ, ಶಾಸಕರಾದ ಸುರೇಶ್‍ಕುಮಾರ್, ಮುನಿರತ್ನ, ಕೋಶಾಧ್ಯಕ್ಷ ಸುಬ್ಬನರಸಿಂಹ, ಜಿಲ್ಲಾಧ್ಯಕ್ಷ ಮಂಜುನಾಥ್ ಅವರು ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here