ಮಂಗಳೂರು, ಆ.8: ಬಾಲಕಿಯನ್ನು ಅತ್ಯಾಚಾರ ಎಸಗಿದ ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ಮಂಗಳೂರಿನ ಪೋಕ್ಸೊ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ತೆಂಕ ಎಡಪದವು ನಿವಾಸಿ ಪ್ರಕಾಶ್ (32) ಶಿಕ್ಷೆಗೊಳಗಾದ ಆರೋಪಿ.
2023ರ ಜನವರಿ 17ರಂದು ಬೆಳಗ್ಗೆ 10ಕ್ಕೆ ತನ್ನ ಮನೆಗೆ ಬಂದಿದ್ದ 14ರ ಹರೆಯದ ಬಾಲಕಿಯನ್ನು ಅತ್ಯಾಚಾರ ಎಸಗಿದ್ದ ಮತ್ತು ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಕೆಯೊಡ್ಡಿದ್ದ ಎಂದು ಆರೋಪಿಸಲಾಗಿತ್ತು.
ಈ ಘಟನೆಯಿಂದ ನೊಂದ ಬಾಲಕಿ ತನ್ನ ಕೈಗಳನ್ನು ಬ್ಲೇಡ್‌ನಿಂದ ಕುಯ್ದುಕೊಂಡಿದ್ದಳು. ಅದನ್ನು ತಿಳಿದ ಬಾಲಕಿಯ ಸಹೋದರಿ ವಿಚಾರಿಸಿದಾಗ ಅತ್ಯಾಚಾರ ಬಯಲಿಗೆ ಬಂದಿತ್ತು. ಬಳಿಕ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಚಾರಣೆ ನಡೆಸಿದ ಪೋಕ್ಸೊ ವಿಶೇಷ ನ್ಯಾಯಾಲಯವು ಆರೋಪಿ ಪ್ರಕಾಶ್‌ಗೆ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿ, ದಂಡದ 50 ಸಾವಿರ ರೂ. ಹಣವನ್ನು ನೊಂದ ಬಾಲಕಿಗೆ ನೀಡುವಂತೆ ಆದೇಶಿಸಿದೆ. ಹೆಚ್ಚುವರಿಯಾಗಿ 2.50 ಲಕ್ಷ ರೂ. ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಬಾಲಕಿಗೆ ನೀಡುವಂತೆ ತೀರ್ಪಿನಲ್ಲಿ ಸೂಚಿಸಲಾಗಿದೆ. ಸರಕಾರದ ಪರವಾಗಿ ಕೆ. ಬದರಿನಾಥ್ ನಾಯರಿ ವಾದ ಮಂಡಿಸಿದ್ದರು.