Home ರಾಜಕೀಯ ‘ಶಾಸಕರು ಎಂದಾಕ್ಷಣ ಏನುಬೇಕಾದರೂ ಮಾತನಾಡಬಹುದೇ’ : ಶಾಸಕ ಸುನಿಲ್ ಕುಮಾರ್‌ ವಿರುದ್ಧ ಹೈಕೋರ್ಟ್ ಕಿಡಿ

‘ಶಾಸಕರು ಎಂದಾಕ್ಷಣ ಏನುಬೇಕಾದರೂ ಮಾತನಾಡಬಹುದೇ’ : ಶಾಸಕ ಸುನಿಲ್ ಕುಮಾರ್‌ ವಿರುದ್ಧ ಹೈಕೋರ್ಟ್ ಕಿಡಿ

17
0

ಬೆಂಗಳೂರು : ‘ಶಾಸಕರು ಎಂದಾಕ್ಷಣ ಏನುಬೇಕಾದರೂ ಮಾತನಾಡಬಹುದೇ’ ಎಂದು ಕಾರ್ಕಳ ಕ್ಷೇತ್ರದ ಶಾಸಕ ವಿ.ಸುನಿಲ್ ಕುಮಾರ್ ವಿರುದ್ಧ ಹೈಕೋರ್ಟ್ ಕಿಡಿ ಕಾರಿದೆ. ‘ಶಾಸಕರಾದವರು ಸಾರ್ವಜನಿಕ ಸಭೆಗಳಲ್ಲಿ ಮಾತನಾಡುವಾಗ ಅತ್ಯಂತ ಎಚ್ಚರಿಕೆ ವಹಿಸಬೇಕುʼ ಎಂದು ತಾಕೀತು ಮಾಡಿದೆ.

ತಮ್ಮ ವಿರುದ್ಧ ಜನಪ್ರತಿನಿಧಿಗಳ ವಿಶೇಷ (42ನೇ ಎಸಿಎಂಎಂ) ನ್ಯಾಯಾಲಯ ಹೊರಡಿಸಿದ್ದ ವಾರಂಟ್ ಪ್ರಶ್ನಿಸಿ ಶಾಸಕ ವಿ.ಸುನಿಲ್ ಕುಮಾರ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು, ‘ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಗುರುವಾರ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ಸುನಿಲ್ ಕುಮಾರ್ ಪರ ಹಾಜರಿದ್ದ ಹೈಕೋರ್ಟ್ ವಕೀಲ ಎಂ.ವಿನೋದ್ ಕುಮಾರ್, ‘ವಿಚಾರಣಾ ನ್ಯಾಯಾಲಯದಲ್ಲಿ ನಿಗಧಿತ ದಿನದಂದು ವಿಚಾರಣೆಗೆ ಹಾಜರಾಗಿಲ್ಲ ಎಂದು ಅರ್ಜಿದಾರರ ವಿರುದ್ಧ ವಾರಂಟ್ ಜಾರಿ ಮಾಡಲಾಗಿದೆ. ಆದರೆ, ವಿಚಾರಣಾ ದಿನಾಂಕದಂದು ಪಕ್ಷದ ಕಾರ್ಯಕ್ರಮ ನಿಗದಿಯಾಗಿತ್ತು. ಪಕ್ಷವು ವಿಪ್ ಜಾರಿ ಮಾಡಿತ್ತು. ಹಾಗಾಗಿ, ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ’ ಎಂದು ತಿಳಿಸಿದರು.

ಏತನ್ಮಧ್ಯೆ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ‘ಶಾಸಕರಾದವರು ತಮ್ಮ ಹೇಳಿಕೆ ನೀಡುವುದಕ್ಕೆ ಒಂದು ಮಿತಿ ಹೊಂದಿರಬೇಕು. ಈ ಪ್ರಕರಣದಲ್ಲಿ ಸುನಿಲ್ ಕುಮಾರ್, ಪ್ರಮೋದ್ ಮುತಾಲಿಕ್ ವಿರುದ್ಧ ಟೈಗರ್ ಗ್ಯಾಂಗ್, ಗೋಕಾಕ್… ಎಂದೆಲ್ಲಾ ಬಳಸಿದ್ದಾರೆ. ಹೀಗಂದರೆ ಏನು? ಮುತಾಲಿಕ್ ನಿಮ್ಮ ಅರ್ಜಿದಾರರು ಹೇಳಿರುವ ಟೈಗರ್ ಗ್ಯಾಂಗ್‌ನ ಭಾಗವೇ? ಸುನಿಲ್ ಕುಮಾರ್ ಏಕೆ ಅಂತಹ ಹೇಳಿಕೆ ನೀಡಿದರು? ಚುನಾವಣೆ ಸಮಯ ಎಂದು ಮನಬಂದಂತೆ ಮಾತನಾಡಲು ಆಗುತ್ತದೆಯೇ’ ಎಂದು ತೀವ್ರ ತರಾಟೆಗೆ ತೆಗೆದುಕೊಂಡಿತು.

ಅಂತೆಯೇ, ‘ಶ್ರೀರಾಮ ಸೇನೆ’ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪ್ರಕರಣದ ಆರೋಪಿಯಾದ ವಿ.ಸುನಿಲ್ ಕುಮಾರ್‌ಗೆ ಜಾರಿಗೊಳಿಸಿದ್ದ ವಾರಂಟ್‌ಗೆ ತಡೆ ನೀಡಿ ಆದೇಶಿಸಿತು.

ಪ್ರಕರಣವೇನು?: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾರ್ಕಳ ಕೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸುನಿಲ್ ಕುಮಾರ್ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಪ್ರಮೋದ್ ಮುತಾಲಿಕ್ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಸುನಿಲ್ ಕುಮಾರ್ ಗೆಲುವು ಸಾಧಿಸಿದ್ದರು.

ಫಲಿತಾಂಶದ ನಂತರ 2023ರ ಮೇ 14ರಂದು ಕಾರ್ಕಳ ಬಂಡಿಮಠ ಬಸ್ ನಿಲ್ದಾಣದ ಬಳಿ ನಡೆದಿದ್ದ ಸಾರ್ವಜನಿಕ ಸಭೆಯಲ್ಲಿ ಸುನಿಲ್ ಕುಮಾರ್ ಮಾತನಾಡಿದ್ದರು. ಈ ವೇಳೆ ಅವರು, ‘ಪ್ರಮೋದ್ ಮುತಾಲಿಕರೇ ಹಣಕ್ಕೋಸ್ಕರ ಉತ್ತರ ಕರ್ನಾಟಕದಲ್ಲಿ ಹಿಂದೂಗಳ ಹತ್ಯೆಯನ್ನು ಟೈಗರ್ ಗ್ಯಾಂಗ್‌ನ ನೆಪದಲ್ಲಿ ನೀವು ಎಷ್ಟು ಬಾರಿ ಮಾಡಿಸಿದ್ದೀರ? ಆ ಹತ್ಯೆಯನ್ನು ಮಾಡಿದಂತಹವರು ಇವತ್ತಿಗೂ ಕಲಬುರಗಿ ಜೈಲಿನಲ್ಲಿ ಇದ್ದಾರೆ ಎಂದು ಹೇಳಿಕೆ ನೀಡಿದ್ದಾರೆ’ ಎಂದು ಆರೋಪಿಸಲಾಗಿದೆ.

‘ನನ್ನ ವಿರುದ್ಧ ಸುನಿಲ್ ಕುಮಾರ್ ಮಾನಹಾನಿ ಹೇಳಿಕೆ ನೀಡಿದ್ದಾರೆ’ ಎಂದು ಆರೋಪಿಸಿ ಪ್ರಮೋದ್ ಮುತಾಲಿಕ್ 2023ರ ಸೆಪ್ಟೆಂಬರ್ 7ರಂದು ನಗರದ ಎಸಿಎಂಎಂ ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಿಸಿದ್ದರು.

LEAVE A REPLY

Please enter your comment!
Please enter your name here