ಬೆಂಗಳೂರು:
108 ಆರೋಗ್ಯ ವಾಹಿನಿ ಸಿಬ್ಬಂದಿಗಳ ಬಾಕಿ ವೇತನ ಪಾವತಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಮುಷ್ಕರ ನಡೆಸದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಗ್ಯ ವಾಹಿನಿ ಸಿಬ್ಬಂದಿಗಳಿಗೆ ಕರೆ ನೀಡಿದ್ದಾರೆ.
ಸಚಿವರ ಸೂಚನೆಯ ಮೇರೆಗೆ 108 ಸಿಬ್ಬಂದಿಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ಬಾಕಿ ವೇತನದ ಮೊದಲ ಕಂತಿನ 14 ಕೋಟಿ ಬಿಡುಗಡೆಗೊಳಿಸಿದ್ದಾರೆ. ಉಳಿದ ಕಂತುಗಳನ್ನು ಶೀಘ್ರದಲ್ಲಿ ಪಾವತಿಸುವ ಭರವಸೆ ನೀಡಿದರು.
ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಸೇರಿದಂತೆ 108 ಸಿಬ್ಬಂದಿಗಳ ಜೊತೆ ಸೋಮವಾರ ಸಭೆ ನಡೆಸಲಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವೇತನ ಬಾಕಿ ಇರುವ ಸಮಸ್ಯೆಯನ್ನ ಪರಿಹರಿಸುವುದಾಗಿ ಹೇಳಿದ್ದಾರೆ. 108 ಸಿಬ್ಬಂದಿಗಳ ಸಮಸ್ಯೆಗಳನ್ನ ಆಲೀಸಲಿರುವ ಸಚಿವರು, ಅವರ ಬೇಡಿಕೆಗಳ ಬಗ್ಗೆಯೂ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.
ಹಿಂದಿನ ಸರ್ಕಾರದ ಅವಧಿಯಲ್ಲಿ 108 ಗುತ್ತಿಗೆಯಲ್ಲಿ ಆದ ಎಡವಟ್ಟುಗಳಿಂದ ವೇತನ ಪಾವತಿಯಲ್ಲಿ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಈಗಾಗಲೇ ಸಿಎಂ ಜೊತೆ ಚರ್ಚಿಸಿದ್ದು, ಸಿಬ್ಬಂದಿಗಳಿಗೆ ವೇತನದ ಸಮಸ್ಯೆಯಾಗದಂತೆ ಕ್ರಮ ವಹಿಸುವ ಬಗ್ಗೆ ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಆರೋಗ್ಯ ಸಚಿವ ಗುಂಡೂರಾವ್, ಬಾಕಿ ವೇತನ ಪಾವತಿಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದರು.
40 ಕೋಟಿ ವೇತನ ಪಾವತಿ ಬಾಕಿಯಿದ್ದು, ಇಂದು ಮೊದಲ ಕಂತು 14 ಕೋಟಿ ಬಿಡುಗಡೆಗೊಳಿಸಲಾಗಿದೆ. ಸೋಮವಾರ ಸಂಜೆಯೊಳಗೆ ಉಳಿದ ಬಾಕಿ ವೇತನ ಪಾವತಿಗೆ ಕ್ರಮ ವಹಿಸುವುದಾಗಿ ಆಯುಕ್ತ ರಂದೀಪ್ ಸಿಬ್ಬಂದಿಗಳಿಗೆ ಭರವಸೆ ನೀಡಿದ್ದಾರೆ. ಆರೋಗ್ಯ ಸಚಿವರು ಸಿಬ್ಬಂದಿಗಳ ಜೊತೆ ಸಭೆ ನಡೆಸುವ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಮುಷ್ಕರ ನಡೆಸದಿರಲು 108 ಸಿಬ್ಬಂದಿಗಳು ನಿರ್ಧರಿಸಿದ್ದಾರೆ. ಶೇ 15 ರಷ್ಟು ವೇತನ ಹೆಚ್ಚಳಕ್ಕೆ ಸಿಬ್ಬಂದಿಗಳು ಬೇಡಿಕೆಯಿಟ್ಟಿದ್ದು, ಈ ಬಗ್ಗೆಯೂ ಆರೋಗ್ಯ ಸಚಿವರು ಚರ್ಚಿಸಲಿದ್ದಾರೆ ಎಂದು ಆರೋಗ್ಯ ಆಯುಕ್ತ ರಂದೀಪ್ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ.