ಬೆಂಗಳೂರು:
ಬರುವ ಡಿಸೆಂಬರ್ ಅಂತ್ಯದೊಳಗೆ ಬೆಂಗಳೂರು ನಗರದಲ್ಲಿ ಮೊದಲ ಹಂತದಲ್ಲಿ ಮೂರು ಲಕ್ಷ ಎಲ್ ಇಡಿ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸಭೆಯಲ್ಲಿಂದು ಆರ್.ಮಂಜುನಾಥ್ ಪ್ರಶ್ನೆಗೆ ಉತ್ತರಿಸಿದ ಸಿಎಂ, ಜಾಗತಿಕ ಟೆಂಡರ್ ಪಡೆದುಕೊಂಡ ಕಂಪನಿ ಇದನ್ನು ಜಾರಿ ಮಾಡುವಲ್ಲಿ ವಿಳಂಬ ಮಾಡಿದೆ. ನಾನು ಮುಖ್ಯಮಂತ್ರಿಯಾದ ಮೇಲೆ ಬೆಂಗಳೂರಿನ ಅಭಿವೃದ್ಧಿಗೆ ವೇಗದ ಚಾಲನೆ ನೀಡಲು ಪ್ರಯತ್ನ ಮಾಡಿದ್ದು, ಈ ವಿಚಾರ ನನ್ನ ಗಮನಕ್ಕೆ ಬಂದ ನಂತರ ಡಿಸೆಂಬರ್ ಒಳಗಡೆ ಮೂರು ಲಕ್ಷ ಎಲ್ ಇಡಿ ದೀಪಗಳನ್ನು ಅಳವಡಿಸುವಂತೆ ಗುತ್ತಿಗೆ ಪಡೆದ ಕಂಪನಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದರು.
ಈಗ ಕೆಲಸ ಆರಂಭವಾಗಿದೆ. ಮಂಜುನಾಥ್ ಅವರ ದಾಸರಹಳ್ಳಿ ಕ್ಷೇತ್ರಕ್ಕೆ ಆದ್ಯತೆ ಮೇರೆಗೆ ಎಲ್ ಇಡಿ ದೀಪ ಹಾಕಲಾಗುವುದು. ಈ ವಿಚಾರದಲ್ಲಿ ಬೆಂಗಳೂರು ನಗರ ಶಾಸಕರು ಪ್ರಸ್ತಾಪ ಮಾಡಿ ಎಲ್ಲಾ 28 ಕ್ಷೇತ್ರಗಳಲ್ಲಿ ಸಮಸ್ಯೆ ಇದೆ. ಇದನ್ನು ಆದ್ಯತೆ ಮೇರೆಗೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.