ಬೆಂಗಳೂರು:
ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಅನೇಕ ಎಫ್‌ಐಆರ್‌ಗಳನ್ನು ದಾಖಲಿಸಿರುವುದನ್ನು ಪ್ರಶ್ನಿಸಿ ನಟ-ನಿರ್ದೇಶಕ ಉಪೇಂದ್ರ ಎರಡನೇ ರಿಟ್ ಅರ್ಜಿಯೊಂದಿಗೆ ಮತ್ತೆ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ.
ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ನಟ ಕಮ್ ರಾಜಕಾರಣಿ ಸೋಮವಾರ ನ್ಯಾಯಾಲಯದ ಮೊರೆ ಹೋಗಿದ್ದರು, ನಂತರ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗೆ ನ್ಯಾಯಾಲಯ ತಡೆ ನೀಡಿತ್ತು. ಕರ್ನಾಟಕ ರಣಧೀರ ಪಡೆ ಎಂಬ ಸಂಘಟನೆಯ ಅಧ್ಯಕ್ಷ ಭರತ್ ಹರೀಶ್‌ಕುಮಾರ್ ನೀಡಿದ ದೂರಿನ ಮೇರೆಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಇದೇ 13ರಂದು ಎರಡನೇ ಎಫ್‌ಐಆರ್ ದಾಖಲಾಗಿದೆ.
‘ಉತ್ತಮ ಪ್ರಜಾಕೀಯ’ ಪಕ್ಷದ 6ನೇ ವಾರ್ಷಿಕೋತ್ಸವದ ಅಂಗವಾಗಿ ಆಗಸ್ಟ್ 12 ರಂದು ಫೇಸ್‌ಬುಕ್‌ನಲ್ಲಿ ಅಭಿಮಾನಿಗಳು ಮತ್ತು ಅನುಯಾಯಿಗಳೊಂದಿಗೆ ಸಂವಾದ ನಡೆಸುತ್ತಿದ್ದಾಗ ಉಪೇಂದ್ರ ”ಊರೆಂದರೆ ಹೊಲಗೇರಿ ಇದೆ (ಪ್ರತಿ ಹಳ್ಳಿಯಲ್ಲೂ ದಲಿತರ ಕುಗ್ರಾಮವಿದೆ) ಎಂಬ ಹೇಳಿಕೆ ನೀಡಿ ಇದೀಗ ಟೀಕೆಗಳನ್ನು ಎದುರಿಸುತ್ತಿದ್ದಾರೆ. ತಮ್ಮ ಹೇಳಿಕೆ ವಿರುದ್ಧ ಯಾವುದೇ ಎಫ್‌ಐಆರ್‌ಗಳನ್ನು ದಾಖಲಿಸದಂತೆ ರಾಜ್ಯಾದ್ಯಂತ ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡುವಂತೆ ಪೊಲೀಸ್ ಡಿಜಿ ಮತ್ತು ಐಜಿಗೆ ನಿರ್ದೇಶನ ಕೋರಬೇಕೆಂದು ಉಪೇಂದ್ರ ಕೋರಿದ್ದಾರೆ.
ಒಂದೇ ಘಟನೆಗೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗುತ್ತಿರುವ ಎಫ್‌ಐಆರ್‌ಗಳು ಸಂಪೂರ್ಣವಾಗಿ ನ್ಯಾಯಾಲಯ ಪ್ರಕ್ರಿಯೆಯ ದುರುಪಯೋಗವಾಗಿದೆ. ಅದೇ ಘಟನೆಗೆ ಎರಡನೇ ಎಫ್‌ಐಆರ್ ದಾಖಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಪದೇ ಪದೇ ಅಭಿಪ್ರಾಯಪಟ್ಟಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಪೀಠದ ಮುಂದೆ ಅರ್ಜಿ ಇನ್ನೂ ವಿಚಾರಣೆಗೆ ಬರಬೇಕಿದೆ.