ಬೆಂಗಳೂರು:
ಲೈಂಗಿಕ ಅಲ್ಪಸಂಖ್ಯಾತ(ಎಲ್‌ಜಿಬಿಟಿ) ವ್ಯಕ್ತಿಯೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್, ಎಲ್‌ಜಿಬಿಟಿ ಸಮುದಾಯದ ಸದಸ್ಯರನ್ನು ಎಲ್ಲರಂತೆ ಪ್ರೀತಿ ಮತ್ತು ವಾತ್ಸಲ್ಯದಿಂದ ನಡೆಸಿಕೊಳ್ಳಬೇಕು ಎಂದು ಹೇಳಿದೆ.
“ಪ್ರಕರಣದಲ್ಲಿ ಮೃತಪಟ್ಟವರು ಎಲ್‌ಜಿಬಿಟಿ ಸಮುದಾಯಕ್ಕೆ ಸೇರಿದವರು. ಅವರನ್ನು ಬಹಿಷ್ಕರಿಸುವ ಸೂಕ್ಷ್ಮತೆಯು ಅವರ ಮನಸ್ಸನ್ನು ವ್ಯಾಪಿಸುತ್ತದೆ. ಆದ್ದರಿಂದ, ಅಂತಹ ಜನರನ್ನು ಸಹ ಎಲ್ಲರಂತೆ ಪ್ರೀತಿ ಮತ್ತು ವಾತ್ಸಲ್ಯದಿಂದ ನಡೆಸಿಕೊಳ್ಳಬೇಕು. ನಿಯಂತ್ರಣವಿಲ್ಲದ ಈ ದೌರ್ಬಲ್ಯವನ್ನು ಆಡಿಕೊಳ್ಳಬಾರದು. ಪ್ರತಿಯೊಬ್ಬ ನಾಗರಿಕನು ಅಂತಹ ನಾಗರಿಕರನ್ನು ಗೌರವದಿಂದ ನಡೆಸಿಕೊಂಡರೆ, ಸಾಮಾನ್ಯ ಮನುಷ್ಯರಂತೆ ಕಂಡರೆ ಅಮೂಲ್ಯವಾದ ಜೀವ ಕಳೆದುಕೊಳ್ಳುವುದಿಲ್ಲ’ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
ಸಹೋದ್ಯೋಗಿಗಳ ಕುಚೇಷ್ಟೆಯ ಮಾತುಗಳಿಂದ ಮನನೊಂದು ಲೈಂಗಿಕ ಅಲ್ಪಸಂಖ್ಯಾತ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ವೈಟ್‌ಫೀಲ್ಡ್ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಲೈಫ್‌ಸ್ಟೈಲ್ ಇಂಟರ್‌ನ್ಯಾಶನಲ್ ಪ್ರೈವೇಟ್ ಲಿಮಿಟೆಡ್‌ನ ಮೂವರು ಉದ್ಯೋಗಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು.
ತಮ್ಮ ವಿರುದ್ಧದ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ರದ್ದುಗೊಳಿಸುವಂತೆ ಕೋರಿ ಮೃತ ವ್ಯಕ್ತಿಯ ಮೂವರು ಸಹೋದ್ಯೋಗಿಗಳು ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಆದರೆ ಅವರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
ಉತ್ತರ ಪ್ರದೇಶ ಮೂಲದ ಮೃತ ವ್ಯಕ್ತಿಯ ತಂದೆ, ತನ್ನ ಮಗನ ಲೈಂಗಿಕತೆಯ ಬಗ್ಗೆ ಈ ಮೂವರು ಸಹೋದ್ಯೋಗಿಗಳು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಇದು ಆತ್ಮಹತ್ಯೆಗೆ ಕಾರಣವಾಯಿತು ಎಂದು ದೂರಿದ್ದಾರೆ.