Home ಬೆಂಗಳೂರು ನಗರ ಏರೋ ಇಂಡಿಯಾದಲ್ಲಿ ರಫೇಲ್ ರುದ್ರನರ್ತನ, ಎಚ್‍ಯುಎಲ್‍ ಬಳುಕು ಬಿನ್ನಾಣ

ಏರೋ ಇಂಡಿಯಾದಲ್ಲಿ ರಫೇಲ್ ರುದ್ರನರ್ತನ, ಎಚ್‍ಯುಎಲ್‍ ಬಳುಕು ಬಿನ್ನಾಣ

52
0

ಬೆಂಗಳೂರು:

ಯಲಹಂಕ ವಾಯುನೆಲೆಯಲ್ಲಿ ಬುಧವಾರ ಆರಂಭಗೊಂಡಿರುವ ಏರೋ ಇಂಡಿಯಾ -2021 ವೈಮಾನಿಕ ಪ್ರದರ್ಶನದಲ್ಲಿ ಇದೇ ಮೊದಲ ಬಾರಿ ಭಾರತೀಯ ವಾಯುಪಡೆಗೆ ಸೇರಿರುವ ಶಕ್ತಿವಂತ ರಫೇಲ್ ತನ್ನ ರುದ್ರನರ್ತನ ತೋರಿದರೆ, ವಾಯುಪಡೆ ಇತ್ತೀಚೆಗಷ್ಟೇ ಸ್ವಾಗತಿಸಿರುವ ಹಗುರ ಉಪಯುಕ್ತ ಹೆಲಿಕಾಪ್ಟರ್ (ಎಲ್‍ಯುಎಚ್) ಕೂಡ ತಾನೇನು ಕಡಿಮೆಯಿಲ್ಲ ಎಂಬಂತೆ ತನ್ನ ಬಳಕು ಬಿನ್ನಾಣಗಳನ್ನು ಪ್ರದರ್ಶಿಸಿತು.

ಏರೋ ಇಂಡಿಯಾ-2021ಕ್ಕೆ ಚಾಲನೆ ನೀಡಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆಗಮಿಸುತ್ತಿದ್ದಂತೆ, ಎಚ್‍ಎಎಲ್‍ನ ಮೂರು ಎಂ-17 ಯುದ್ಧ ಹೆಲಿಕಾಪ್ಟರ್‍ಗಳು ಭಾರತದ ತ್ರಿವರ್ಣ ಧ್ವಜ, ಏರೋ ಇಂಡಿಯಾ ಹಾಗೂ ವಾಯುಪಡೆಯ ಧ್ವಜಗಳನ್ನು ಹೊತ್ತು ಮೈದಾನದ ಮೇಲೆ ಹಾರಾಡಿ ಗೌರವ ತೋರಿದರೆ, ಇದರ ಬೆನ್ನಲ್ಲೇ ರಫೇಲ್ ಯುದ್ಧ ವಿಮಾನಗಳು ತಮ್ಮ ಇರುವಿಕೆಯನ್ನು ದಾಖಲಿಸಿದವು.

Glimpse of Aero India 2021

ಈ ಬಾರಿಯ ಧ್ಯೇಯವಾಗಿರುವ ‘ಆತ್ಮನಿರ್ಭರ ಭಾರತದ’ ಸಂಯೋಜಿತ ಹಾರಾಟ ಎಲ್ಲರ ಗಮನ ಸೆಳೆಯಿತು. ಇದರಲ್ಲಿ ಎಚ್‍ಎಎಲ್‍ನ ದೇಶೀಯ ನಿರ್ಮಿತ ಐದು ವಿಮಾನಗಳು ಪಾಲ್ಗೊಂಡಿದ್ದವು. ಈ ವಿಮಾನಗಳು ಗಗನಕ್ಕೇರಿದಾಗ ನೆರೆದವರಿಂದ ಹೆಮ್ಮೆಯ ಚಪ್ಪಾಳೆ ಕೇಳಿಬಂದಿತು.

ಇದಾದ ಮೇಲೆ ಆಗಸದ ಮೇಲೆ ಸದಾ ಒಂದು ಕಣ್ಣಿಡುವ ವಾಯು ಅವಘಡಗಳ ಮುನ್ಸೂಚಕ ವಿಮಾನದ ‘ನೇತ್ರ ಸಂಯೋಜನೆ’ ಶತ್ರುಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿತು. ಇದರಲ್ಲಿ ಅಳವಡಿಸಿರುವ ರಾಡರ್ ಮತ್ತಿತರರ ಕಣ್ಗಾವಲು ಉಪಕರಣಗಳು ಸದಾ ಆಗಸದ ಮೇಲೆ ಹದ್ದಿನ ಕಣ್ಣಿಡಲಿದೆ.

Glimpse3 of Aero India 2021

ನಂತರ, ಸಿ-17 ಗ್ಲೋಬ್ ಮಾಸ್ಟರ್ ಹಾಗೂ ಅದರ ಇಕ್ಕೆಲಗಳಲ್ಲಿ ಎರಡೂ ಸುಖೋಯ್ ಯುದ್ಧ ವಿಮಾನಗಳು ಸಾಗುವ ‘ವಿಜಯ ಸಂಯೋಜನೆ’ ಕೂಡ ಆಗಸದ ಮೇಲೆ ವಿಜಯ ಸಾಧಿಸಿದಂತೆ ಬೀಗಿ ಹಾರಾಡಿದವು.

ಈ ಎಲ್ಲಾ ಕಿವಿಗಡಚ್ಚಿಕ್ಕುವ, ಕಣ್ಣು ಕೋರೈಸುವ ರುದ್ರರಮಣೀಯ ಪ್ರದರ್ಶನಗಳ ನಡುವೆಯೇ, ಮತ್ತೊಮ್ಮೆ ಬೋರ್ಗರೆದು ಬಂತು ರಫೇಲ್ ಯುದ್ಧ ವಿಮಾನ. ತನ್ನ ‘ಬ್ರಹ್ಮಾಸ್ತ್ರ ಸಂಯೋಜನೆ’ ಮೂಲಕ ಬಾನಾಡಿಯಲ್ಲಿ ರಾರಾಜಿಸಿತು.

Glimpse6 of Aero India 2021

ಇದರ ಬೆನ್ನಲ್ಲೇ ಸುಖೋಯಿ, ಜಾಗ್ವಾರ್‌ನ ಗರುಡ, 3 ಸುಕೋಯಿಗಳ ತ್ರಿಶೂಲ ಸಂಯೋಜನೆ ಮೂರು ಸೇನಾ ಪಡೆಗಳ ನಡುವೆ ಸಾಮರಸ್ಯವನ್ನು ಪ್ರತಿಬಿಂಬಿಸಿತು.

ಇದೇ ಮೊದಲ ಬಾರಿಗೆ ಸೂರ್ಯಕಿರಣ್ ಹಾಗೂ ಸಾರಂಗ್ ಒಟ್ಟಿಗೆ ಪ್ರದರ್ಶನ ನೀಡಿದ್ದು, ವಿಶೇಷವಾಗಿದ್ದು, ಆಗಸದ ತುಂಬೆಲ್ಲಾ ವೈಯ್ಯಾರವಾಗಿ ಹಾರಾಡಿ, ಕ್ಷಣಾರ್ಧದಲ್ಲಿ ಪರಸ್ಪರ ಡಿಕ್ಕಿ ಹೊಡೆದಂತೆ ನಾಟಕವಾಡಿ, ಜನರಿಗೆ ಗಾಬರಿ ಮೂಡಿಸಿ, ನಂತರ ಏನೂ ನಡೆದೇ ಇಲ್ಲವೆಂಬಂತೆ ಬಣ್ಣಬಣ್ಣವಾಗಿ ಸುತ್ತಾಡಿ ಈ ವಿಮಾನ, ಹೆಲಿಕಾಪ್ಟರ್‌ಗಳು ಮುಧನೀಡಿದವು.

ಒಟ್ಟಾರೆ, ಜನರು ಕಣ್ಣು ಆಗಸದ ಒಂದೆಡೆಗೆ ಸೀಮಿತವಾಗದೆ, ಬಾನಾಡಿ ತುಂಬೆಲ್ಲಾ ಹರಿದಾಡುವಂತೆ ಮಾಡಿದ್ದು, ಇದರ ವಿಶೇಷವಾಗಿತ್ತು.

LEAVE A REPLY

Please enter your comment!
Please enter your name here