ಅಲ್-ಶಿಫಾ ಪಾಲಿಕ್ಲಿನಿಕ್ನಲ್ಲಿ ತ್ಯಾಜ್ಯ ನಿರ್ವಹಣೆ ನಿಯಮ ಜಾರಿ ಕಾರ್ಯಾಚರಣೆ.
ಬೆಂಗಳೂರು: ರಸ್ತೆಬದಿಯ ಸಾರ್ವಜನಿಕ ಸ್ಥಳದಲ್ಲಿ ಸುರಿದಿದ್ದ ವೈದ್ಯಕೀಯ ತ್ಯಾಜ್ಯವು ಮಂಗಮ್ಮನಪಾಳ್ಯ ಮುಖ್ಯರಸ್ತೆಯ ಅಲ್-ಶಿಫಾ ಪಾಲಿಕ್ಲಿನಿಕ್ಗೆ ಸೇರಿದ್ದು ಎಂದು ಪತ್ತೆಹಚ್ಚಿದ ಬಳಿಕ ₹15,000 ದಂಡ ವಿಧಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ.
ಅನಧಿಕೃತವಾಗಿ ತ್ಯಾಜ್ಯ ವಿಲೇವಾರಿ ಮಾಡಿದ್ದಕ್ಕಾಗಿ ಮತ್ತು ಘನತ್ಯಾಜ್ಯ ನಿರ್ವಹಣೆ ಹಾಗೂ ಬೃಹತ್ ತ್ಯಾಜ್ಯ ಉತ್ಪಾದಕರ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಸ್ಥಳದಲ್ಲೇ ದಂಡ ವಿಧಿಸಿ ವಸೂಲಿ ಮಾಡಲಾಗಿದೆ ಎಂದು ಪಾಲಿಕೆ ತಿಳಿಸಿದೆ.
ಪ್ರಿಸ್ಕ್ರಿಪ್ಷನ್ ಚೀಟಿಗಳಿಂದ ತ್ಯಾಜ್ಯದ ಮೂಲ ಪತ್ತೆ
ಬಿಟಿಎಂ ಲೇಔಟ್ ವಿಭಾಗದ ಈಜಿಪುರ ವ್ಯಾಪ್ತಿಯ ಶ್ರೀನಿವಾಗಿಲು ಹಾಗೂ ಮಂಗಮ್ಮನಪಾಳ್ಯ ಮುಖ್ಯರಸ್ತೆಯಲ್ಲಿ ಕಿರಿಯ ಆರೋಗ್ಯ ಪರಿವೀಕ್ಷಕರ ತಂಡ ಬೆಳಗ್ಗೆ ಕಸ ವಿಲೇವಾರಿ ಕುರಿತು ಪರಿಶೀಲನೆ ನಡೆಸಿತು.
ರಸ್ತೆಬದಿಯಲ್ಲಿ ಔಷಧಿಗಳ ಪೊಟ್ಟಣಗಳು, ವೈದ್ಯಕೀಯ ತ್ಯಾಜ್ಯ ಮತ್ತು ಮಿಶ್ರ ಕಸ ಎಸೆದಿರುವುದು ಕಂಡುಬಂದಿತು. ಅಲ್ಲಿದ್ದ ಪ್ರಿಸ್ಕ್ರಿಪ್ಷನ್ ಚೀಟಿಗಳು ಹಾಗೂ ಇತರ ದಾಖಲೆಗಳನ್ನು ಪರಿಶೀಲಿಸಿ, ತ್ಯಾಜ್ಯವು ಅಲ್-ಶಿಫಾ ಪಾಲಿಕ್ಲಿನಿಕ್ಗೆ ಸೇರಿದ್ದು ಎಂಬುದನ್ನು ದೃಢಪಡಿಸಲಾಯಿತು ಎಂದು ಪಾಲಿಕೆ ಹೇಳಿದೆ.
ಅಧಿಕೃತ ಏಜೆನ್ಸಿಗಳ ಮೂಲಕ ವಿಲೇವಾರಿಗೆ ಸೂಚನೆ
ಕ್ಲಿನಿಕ್ನ ವೈದ್ಯರು ಮತ್ತು ಸಿಬ್ಬಂದಿ ನಿಯಮಾನುಸಾರ ಅಧಿಕೃತ ಏಜೆನ್ಸಿಗಳ ಮೂಲಕವೇ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳು ಸೂಚಿಸಿದರು. ಸಾರ್ವಜನಿಕರ ಆರೋಗ್ಯಕ್ಕೆ ಹಾನಿಯಾಗುವಂತೆ ರಸ್ತೆಬದಿಯಲ್ಲಿ ವೈದ್ಯಕೀಯ ಅಥವಾ ಘನತ್ಯಾಜ್ಯ ಎಸೆಯಬಾರದು ಎಂದು ಎಚ್ಚರಿಸಿದರು.
ಆಸ್ಪತ್ರೆಗಳು, ಕ್ಲಿನಿಕ್ಗಳು, ಲ್ಯಾಬ್ಗಳು ಮತ್ತು ವಾಣಿಜ್ಯ ಸಂಸ್ಥೆಗಳು ಘನತ್ಯಾಜ್ಯ ಹಾಗೂ ಜೈವಿಕ ವೈದ್ಯಕೀಯ ತ್ಯಾಜ್ಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ರಮೇಶ್ ಹೇಳಿದರು. ನಿರಂತರ ತಪಾಸಣೆ ನಡೆಸಲಾಗುವುದು; ಅಕ್ರಮವಾಗಿ ತ್ಯಾಜ್ಯ ಸುರಿಯುವವರ ವಿರುದ್ಧ ಭಾರೀ ದಂಡ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
