
HD Revanna
ಬೆಂಗಳೂರು:
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರ ಪುತ್ರ ಶಾಸಕ ಎಚ್ ಡಿ ರೇವಣ್ಣ ಅವರು ಚುನಾವಣಾ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ರೇವಣ್ಣಗೆ ಸಮನ್ಸ್ ಜಾರಿ ಮಾಡಿದೆ.
ಹೊಳೆನರಸೀಪುರ ಪರಾಜಿತ ಅಭ್ಯರ್ಥಿ ದೇವರಾಜೇಗೌಡ ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ನೇತೃತ್ವದ ಪೀಠ ಸಮನ್ಸ್ ಜಾರಿ ಮಾಡಿದೆ. ರೇವಣ್ಣ ಅಕ್ರಮದ ಮೂಲಕ ಚುನಾವಣೆಯಲ್ಲಿ ಗೆದ್ದು ಶಾಸಕರಾಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ದೇವರಾಜೇಗೌಡರು ವಾಗ್ದಾಳಿ ನಡೆಸಿದರು.
ರೇವಣ್ಣ ಮತದಾರರಿಗೆ ನಗದು, ಕೋಳಿ ಮಾಂಸ ವಿತರಿಸಿ ಮತ ನೀಡುವಂತೆ ಆಮಿಷ ಒಡ್ಡಿದ್ದಾರೆ ಎಂದು ಮನವಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ. ಅವರನ್ನು ಪರಾಜಿತ ಎಂದು ಘೋಷಿಸಬೇಕು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಸಲ್ಲಿಸಿದರು. ಚುನಾವಣೆಯ ಹಿಂದಿನ ದಿನ ರೇವಣ್ಣ ಅವರ ಸಹಚರರು ಮತ್ತು ಬೆಂಬಲಿಗರು ಅನ್ನೇನಹಳ್ಳಿ, ದಂಡಿಗನಹಳ್ಳಿಯಲ್ಲಿ ಪ್ರತಿ ಮನೆಗೆ ಎರಡು ಜೀವಂತ ಕೋಳಿ ಮತ್ತು 3 ಸಾವಿರ ರೂ.ನಗದನ್ನು ವಿತರಿಸಿದ್ದರು ಎಂದು ದೇವರಾಜೇಗೌಡ ಆರೋಪಿಸಿದ್ದಾರೆ.
ಇದನ್ನು ನಾನು ಪ್ರಶ್ನಿಸಿದಾಗ, ರೇವಣ್ಣ ಬೆಂಬಲಿಗರು ನಮ್ಮ ಕಾರನ್ನು ಅಡ್ಡಗಟ್ಟಿ, ಕಿಟಕಿ ಗಾಜುಗಳನ್ನು ಪುಡಿ ಮಾಡಿದ್ದಾರೆ. ದೊಣ್ಣೆ ಹಾಗೂ ಕಲ್ಲುಗಳಿಂದ ವಾಹನದ ಮೇಲೆ ದಾಳಿ ನಡೆಸಿದ್ದರು. ರೇವಣ್ಣ ಬೆಂಬಲಿಗರು ನನ್ನ ಗನ್‌ಮ್ಯಾನ್ ಮತ್ತು ವೈಯಕ್ತಿಕ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಈ ಕುರಿತು ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.
ರೇವಣ್ಣ ಅವರ ಕೃತ್ಯಗಳು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 123ಕ್ಕೆ ವಿರುದ್ಧವಾಗಿದ್ದು, ಅಕ್ರಮ ನಡೆದಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು. ರೇವಣ್ಣ ಅವರು ಬ್ಯಾಂಕ್ ಠೇವಣಿಗಳ ವಿವರವನ್ನೂ ಬಹಿರಂಗಪಡಿಸಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಇದು ಕಾನೂನಿಗೆ ವಿರುದ್ಧವಾಗಿದೆ. ಹೀಗಾಗಿ ಅವರ ಉಮೇದುವಾರಿಕೆಯನ್ನು ಅನೂರ್ಜಿತಗೊಳಿಸಬೇಕು ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.