ಬೆಂಗಳೂರು:
ಎರಡು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ 37 ವರ್ಷದ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ಒಬ್ಬನನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಈತನಿಂದ ಸುಮಾರು 29 ಲಕ್ಷ ಮೌಲ್ಯದ ಕದ್ದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
2019 ರಲ್ಲಿ ತನ್ನ ಕೆಲಸದ ಸ್ಥಳದಲ್ಲಿನ ಅಕ್ರಮಗಳ ಕಾರಣದಿಂದ ಕೆಲಸ ಕಳೆದುಕೊಂಡ ಆರೋಪಿ, ಪೂರ್ಣ ಸಮಯದ ಕಳ್ಳನಾದನು. ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಡಕಾಯಿತಿ ಮತ್ತು ದರೋಡೆ ಪ್ರಕರಣಗಳಲ್ಲಿ ಆತ ಭಾಗಿಯಾಗಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ 2020ರಲ್ಲಿ ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಬಂಧಿಸಿದ್ದು, ಅಂದಿನಿಂದ ಜೈಲಿನಲ್ಲಿದ್ದ.
ತಮಿಳುನಾಡಿನ ಚೆನ್ನೈ ಮೂಲದ ಆರೋಪಿ ಮಹಾಮಣಿ ಅಲಿಯಾಸ್ ದೀನಾ ಬೆಂಗಳೂರಿನ ದೂರಸಂಪರ್ಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಅವನು ತನ್ನ ಕೆಲಸವನ್ನು ಕಳೆದುಕೊಂಡ ನಂತರ, ಕೆಲವು ಅಪರಾಧಿಗಳೊಂದಿಗೆ ಸಂಪರ್ಕಕ್ಕೆ ಬೆಳೆಸಿದ. ಕಳ್ಳತನ, ದರೋಡೆ ಮತ್ತು ಡಕಾಯಿತಿ ಮಾಡಲು ಪ್ರಾರಂಭಿಸಿದ.
ಹಗಲಿನಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಬೀಗ ಒಡೆದು ಕಳ್ಳತನ ಮಾಡುತ್ತಿದ್ದ. 2020ರಲ್ಲಿ ಈತನನ್ನು ಬಂಧಿಸಿದಾಗ ಜೈಲಿನಲ್ಲಿದ್ದ ಮತ್ತೊಬ್ಬ ಕ್ರಿಮಿನಲ್ ಜೊತೆ ಸದಾನಂದನಗರದಲ್ಲಿ ತಾನು ಮಾಡಿದ್ದ ಕಳ್ಳತನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ. ನಂತರ ಬೈಯಪ್ಪನಹಳ್ಳಿ ಪೊಲೀಸರು ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಕರೆದೊಯ್ದರು, ಆಗ ಮಹಾಮಣಿ ಮಾಡಿದ ಎರಡು ಕಳ್ಳತನ ಬಹಿರಂಗವಾಗಿದೆ. ಈ ಮಾಹಿತಿಯ ಆಧಾರದ ಮೇಲೆ ಪೊಲೀಸರು ಮಹಾಮಣಿಯ ಬಾಡಿ ವಾರೆಂಟ್‌ಗೆ ಅರ್ಜಿ ಸಲ್ಲಿಸಿ ಆತನನ್ನು ವಶಕ್ಕೆ ತೆಗೆದುಕೊಂಡರು.
ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು 512 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರು ಕೆಲವು ಆಭರಣಗಳನ್ನು ಮಾರಾಟ ಮಾಡಿದ್ದ ಮತ್ತು ಕೆಲವನ್ನು ತಮ್ಮ ಸ್ನೇಹಿತರಿಗೆ ನೀಡಿದ್ದ, ಅವುಗಳನ್ನು ವಶಪಡಿಸಿಕೊಂಡಿರುವುದಾಗಿ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.