Home Uncategorized Amazon Layoffs: ಉದ್ಯೋಗಿಗಳ ವಜಾಗೊಳಿಸಿಲ್ಲ; ಕೇಂದ್ರ ಸರ್ಕಾರಕ್ಕೆ ಅಮೆಜಾನ್ ಪ್ರತಿಕ್ರಿಯೆ

Amazon Layoffs: ಉದ್ಯೋಗಿಗಳ ವಜಾಗೊಳಿಸಿಲ್ಲ; ಕೇಂದ್ರ ಸರ್ಕಾರಕ್ಕೆ ಅಮೆಜಾನ್ ಪ್ರತಿಕ್ರಿಯೆ

8
0

ಬೆಂಗಳೂರು: ದೇಶದಲ್ಲಿ ಬಲವಂತವಾಗಿ ಉದ್ಯೋಗಿಗಳಿಂದ ರಾಜೀನಾಮೆ ಪಡೆದಿಲ್ಲ ಎಂದು ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ (Union Labour Ministry) ಅಮೆಜಾನ್ (Amazon) ತಿಳಿಸಿದೆ. ಸ್ವಯಂಪ್ರೇರಿತ ಬೆರ್ಪಡುವಿಕೆ ಕಾರ್ಯಕ್ರಮದ (Voluntary Separation Program) ಅನ್ವಯ ಉದ್ಯೋಗಿಗಳ ರಾಜೀನಾಮೆಯು ಅವರ ಇಚ್ಛೆಗೆ ಬಿಟ್ಟ ವಿಚಾರ. ರಾಜೀನಾಮೆಗೆ ಬಲವಂತ ಮಾಡಿಲ್ಲ ಎಂದು ಸಚಿವಾಲಯಕ್ಕೆ ಅಮೆಜಾನ್ ತಿಳಿಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ‘ಬ್ಯುಸಿನೆಸ್ ಟುಡೇ’ ವರದಿ ಮಾಡಿದೆ. ಕಾರ್ಮಿಕ ನಿಯಮ ಉಲ್ಲಂಘನೆ ಬಗ್ಗೆ ದೂರಗಳು ದಾಖಲಾದ ಕಾರಣ ಅಮೆಜಾನ್​ಗೆ ಕೇಂದ್ರ ಕಾರ್ಮಿಕ ಸಚಿವಾಲಯ ಬುಧವಾರ ಸಮನ್ಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.

ಅಮೆಜಾನ್ ಪರವಾಗಿ ಕಂಪನಿಯ ಪ್ರತಿನಿಧಿಗಳು ವಿಚಾರಣೆಗೆ ಹಾಜರಾದರು. ಆದರೆ, ಅಮೆಜಾನ್ ವಿರುದ್ಧ ದೂರು ನೀಡಿದ್ದ ಉದ್ಯೋಗಿಗಳ ಒಕ್ಕೂಟ ಎನ್​ಐಟಿಇಎಸ್​ ಪರವಾಗಿ ಯಾರೂ ವಿಚಾರಣೆಗೆ ಹಾಜರಾಗಿಲ್ಲ. ಬದಲಾಗಿ ವಿಚಾರಣೆ ಮುಂದೂಡುವಂತೆ ಮನವಿ ಮಾಡಿತ್ತು. ಹಿಗಾಗಿ ಸಚಿವಾಲಯ ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿದೆ ಎಂದು ವರದಿ ಉಲ್ಲೇಖಿಸಿದೆ. ಈ ವಿಚಾರವಾಗಿ ಮಾಧ್ಯಮಗಳಿಗೆ ಅಮೆಜಾನ್ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಸಿಬ್ಬಂದಿಯನ್ನು ಬಲವಂತವಾಗಿ ಅಮೆಜಾನ್ ವಜಾಗೊಳಿಸುತ್ತಿದೆ ಎಂದು ಎನ್​ಐಟಿಇಎಸ್ ಆರೋಪಿಸಿದ್ದಲ್ಲದೆ, ಸಚಿವಾಲಯಕ್ಕೆ ದೂರು ನೀಡಿತ್ತು.

ಇದನ್ನೂ ಓದಿ: Amazon Academy: ಬೈಜೂಸ್ ಬೆನ್ನಲ್ಲೇ ಅಮೆಜಾನ್ ಅಕಾಡೆಮಿಗೂ ಸಂಕಷ್ಟ; ಆನ್​ಲೈನ್ ಕಲಿಕಾ ತಾಣ ಮುಚ್ಚುವುದಾಗಿ ಘೋಷಣೆ

ಜಾಗತಿಕ ಮಟ್ಟದಲ್ಲಿ 10 ಸಾವಿರ ನೌಕರರನ್ನು ಕೆಲಸದಿಂದ ವಜಾಗೊಳಿಸಲು ಮುಂದಾಗಿರುವುದಾಗಿ ಅಮೆಜಾನ್ ಇತ್ತೀಚೆಗೆ ಹೇಳಿತ್ತು. ಇದಾದ ಕೆಲವೇ ದಿನಗಳಲ್ಲಿ ಭಾರತದಲ್ಲಿ ಹಲವು ಉದ್ಯೋಗಿಗಳ ರಾಜೀನಾಮೆಗೆ ಸೂಚಿಸಿದೆ. ಸ್ವಯಂಪ್ರೇರಿತ ಬೇರ್ಪಡುವಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕೆಲವು ಪರಿಹಾರಗಳನ್ನು ನೀಡುವ ಭರವಸೆ ನೀಡಿದೆ. ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಿ ಹಣಕಾಸು ಪರಿಹಾರ ಪಡೆಯಿರಿ ಎಂದು ಕಂಪನಿ ಉದ್ಯೋಗಿಗಳ ಮೇಲೆ ಒತ್ತಡ ಹೇರುತ್ತಿದೆ. ಸ್ವಯಂಪ್ರೇರಿತ ಬೇರ್ಪಡುವಿಕೆಗೆ ಅರ್ಹರೆಂದು ಕೆಲವು ಉದ್ಯೋಗಿಗಳಿಗೆ ನೋಟಿಸ್ ನೀಡಲಾಗಿದೆ. ನವೆಂಬರ್ 30ರ ಒಳಗೆ ರಾಜೀನಾಮೆ ನೀಡಿದರೆ ಅಂಥ ಉದ್ಯೋಗಿಗಳಿಗೆ ಕೆಲವೊಂದು ಪರಿಹಾರಗಳನ್ನು ನೀಡುವುದಾಗಿ ಕಂಪನಿ ತಿಳಿಸಿದೆ ಎಂದು ವರದಿಯಾಗಿತ್ತು.

ಇದರ ಬೆನ್ನಲ್ಲೇ ಕಂಪನಿಗೆ ಸಚಿವಾಲಯ ಸಮನ್ಸ್ ನೀಡಿತ್ತು. ಕಾರ್ಮಿಕ ಸಚಿವಾಲಯದ ಡೆಪ್ಯುಟಿ ಚೀಫ್ ಕಮಿಷನರ್ ಎ. ಅಂಜನಪ್ಪ ಅವರು ಅಮೆಜಾನ್​ನ ಹಿರಿಯ ಸಾರ್ವಜನಿಕ ನೀತಿ ನಿರ್ವಾಹಕಿ ಸ್ಮಿತಾ ಶರ್ಮಾ ಅವರಿಗೆ ಸಮನ್ಸ್ ನೀಡಿ, ಕಂಪನಿಯ ಇತರ ಪ್ರತಿನಿಧಿಗಳ ಜತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here