ಕೊಡಗು ಹೋಂಸ್ಟೇಯಲ್ಲಿ ಅಮೆರಿಕನ್ ಪ್ರವಾಸಿಗೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಬ್ಬಂದಿ, ಮಾಲೀಕ ಬಂಧನ
ಕೊಡಗು: ಕೊಡಗು ಜಿಲ್ಲೆಯ ಕುಟ್ಟ ಗ್ರಾಮದ ಹೋಂಸ್ಟೇಯಲ್ಲಿ ವಿದೇಶಿ ಮಹಿಳಾ ಪ್ರವಾಸಿಗೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಪ್ರವಾಸಿಗರ ಸುರಕ್ಷತೆ ಬಗ್ಗೆ ಆತಂಕ ಹೆಚ್ಚಿಸಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ವಾಷಿಂಗ್ಟನ್ ಮೂಲದ ಮಹಿಳೆ ಏಪ್ರಿಲ್ 19ರಂದು ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದಲ್ಲಿರುವ “ದೇವಿ ವಿಲ್ಲಾ” ಹೋಂಸ್ಟೇಯಲ್ಲಿ ತಂಗಿದ್ದ ವೇಳೆ ಈ ಕೃತ್ಯ ನಡೆದಿದೆ ಎನ್ನಲಾಗಿದೆ.
ಈ ಪ್ರಕರಣದಲ್ಲಿ ಹೋಂಸ್ಟೇಯಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ಬ್ರಿಜೇಶ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ ಆರೋಪದಡಿ ಹೋಂಸ್ಟೇ ಮಾಲೀಕ ವಿಶಾಲ್ನನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆ ನಂತರ ಪ್ರಕರಣವನ್ನು ತಡವಾಗಿ ಬಹಿರಂಗಪಡಿಸಲು ಪ್ರಯತ್ನ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ವಿದೇಶಿ ಮಹಿಳೆ ಹೇಗೋ ಅಲ್ಲಿಂದ ಹೊರಬಂದು ಮೈಸೂರಿಗೆ ತೆರಳಿ ಅಲ್ಲಿ ಅಮೆರಿಕದ ರಾಯಭಾರ ಕಚೇರಿ ಅಧಿಕಾರಿಗಳನ್ನು ಸಂಪರ್ಕಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಮೈಸೂರಿನ ಖಾಸಗಿ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ, ಕೊಡಗು ಜಿಲ್ಲೆಯ ಕುಟ್ಟ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಕೊಡಗು ಜಿಲ್ಲೆಯ ಹೋಂಸ್ಟೇಗಳಲ್ಲಿ ಸುರಕ್ಷತೆ ಕ್ರಮಗಳ ಬಗ್ಗೆ ಈ ಘಟನೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ಪೊಲೀಸರು ಪ್ರಕರಣದ ಸಂಪೂರ್ಣ ವಿವರ ತಿಳಿಯಲು ತನಿಖೆ ಮುಂದುವರಿಸಿದ್ದಾರೆ.
