ಬೆಂಗಳೂರು:
ಎಸ್ಐಟಿ ತನಿಖೆ ಆರಂಭದಲ್ಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸಿ ಎನ್ನುವುದು ತಪ್ಪು ಎಂದು ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ.
ಕೋರಮಂಗಲದ ಕೆಎಸ್ ಆರ್ ಪಿ ಪರೇಡ್ ಮೈದಾನದಲ್ಲಿ ಶುಕ್ರವಾರ ಬೆಳಿಗ್ಗೆ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಗೌರವರಕ್ಷೆ ಸ್ವೀಕರಿಸಿದ ಅವರು, ನಂತರ ಕರ್ತವ್ಯ ನಿರ್ವಹಣೆಯಲ್ಲಿ ಉತ್ತಮ ಸಾಧನೆ ಮಾಡಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಮುಖ್ಯಮಂತ್ರಿಗಳು ಪದಕ ಪ್ರದಾನ ಮಾಡಿದರು.
ಈ ವೇಳೆ ಮಾತನಾಡಿದ ಪ್ರವೀಣ್ ಸೂಧ್ ಅವರು, ‘ಬಿಜೆಪಿ ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳು ಅವರ ಕೆಲಸವನ್ನು ಮಾಡುತ್ತಿದ್ದಾರೆ. ಯಾರೂ ಕೂಡ ಎಸ್‌ಐಟಿ ಮೇಲೆ ಒತ್ತಡವನ್ನು ಹಾಕುತ್ತಿಲ್ಲ. ಎಸ್‌ಐಟಿ ತನಿಖೆ ಆರಂಭದಲ್ಲಿಯೇ ಬಂಧನ ಮಾಡಬೇಕು ಎಂಬುದು ತಪ್ಪು. ಪ್ರಕರಣದ ತನಿಖೆ ಅಂತ್ಯವಾಗಿದ್ದರೂ ಬಂಧಿಸದಿದ್ದರೆ ಪ್ರಶ್ನಿಸಬಹುದು. ಎಸ್‌ಐಟಿ ಹಂತ ಹಂತವಾಗಿ ತನಿಖೆ ಮಾಡುತ್ತಿದೆ. ಎಸ್‌ಐಟಿಯಲ್ಲಿ ಇರುವವರೆಲ್ಲಾ ಹಿರಿಯ ಅಧಿಕಾರಿಗಳೇ. ಎಸ್‌ಐಟಿ ತನಿಖೆ ಮೇಲೆ ಭರವಸೆ ಇದೆ ಎಂದು ಪ್ರವೀಣ್ ಸೂದ್ ಹೇಳಿದ್ದಾರೆ.
ಅಂತೆಯೇ, ‘ಪ್ರತಿದಿನ ಎಸ್‌ಐಟಿ ತನಿಖೆಯ ಬಗ್ಗೆ ಕೇಳುವುದು ತಪ್ಪಾಗುತ್ತದೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಯುತ್ತೆಂಬ ಭರವಸೆ ಇದೆ. ಹಂತ ಹಂತವಾಗಿ ತನಿಖೆ ನಡೆಯುತ್ತಿದೆ. ಪ್ರತಿ ದಿನ ಕರೆ ಮಾಡಿ ತನಿಖೆ ಯಾವ ಹಂತದಲ್ಲಿ ಇದೆ ಎಂದು ಕೇಳುವುದು ಸರಿಯಲ್ಲ. ನಿಷ್ಪಕ್ಷಪಾತವಾಗಿ ತನಿಖೆ ನಡೆಯುತ್ತದೆ ಎಂಬ ಭರವಸೆ ಇದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಇದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಧುನಿಕ ತಂತ್ರಜ್ಞಾನ ಬಳಕೆಯಲ್ಲಿ ರಾಜ್ಯದ ಪೊಲೀಸರು ಮುಂಚೂಣಿಯಲ್ಲಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಇನ್ನು ಮಾರ್ಚ್ 29ರಿಂದ ಅಜ್ಞಾತ ಸ್ಥಳದಲ್ಲಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರು. ಆದರೆ ಮೂಲಗಳ ಪ್ರಕಾರ ಅವರು ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಕಡಿಮೆ ಇದೆ ಎಂದು ತಿಳಿದುಬಂದಿದೆ. ರಮೇಶ್ ಜಾರಕಿಹೊಳಿ ವಿಚಾರಣೆಗೆ ಮತ್ತೊಂದು ದಿನ ಬರುವುದಾಗಿ ಮನವಿ ನೀಡುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.