ಬೆಂಗಳೂರು:
ಅನ್ಲಾಕ್ ಪ್ರಕ್ರಿಯೆ ಬೆಂಗಳೂರಿನಲ್ಲಿ ಆರಂಭವಾಗಿದ್ದು ಕೋವಿಡ್-19 ನಿಯಂತ್ರಿಸಬೇಕಾದರೆ ಮುಂದಿನ ದಿನಗಳಲ್ಲಿ ಎಲ್ಲರೂ ಜಾಗರೂಕರಾಗಿರಬೇಕು ಎಂದು ಮುಖ್ಯ ಆಯುಕ್ತರಾದ ಶ್ರೀ ಗೌರವ್ ಗುಪ್ತಾ ಅವರು ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಟೆಸ್ಟಿಂಗ್ ಮಾಡುವ ಸಂಬಂಧ ಇಂದು ವರ್ಚುವಲ್ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಆಯುಕ್ತರು, ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಪಾಲಿಸುವುದರೆ, ಶಿಸ್ತುಬದ್ಧವಾಗಿದ್ದರೆ ಕೋವಿಡ್-19 ವಿರುದ್ಧದ ಈ ಹೋರಾಟದ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದರು. ನಗರದಲ್ಲಿ ಕೋವಿಡ್19 ಪರೀಕ್ಷೆ, ಕಂಟೈನ್ಮೆಂಟ್ ಮತ್ತು ಪ್ರತ್ಯೇಕತೆಯನ್ನು ಬಿಬಿಎಂಪಿ ತೀವ್ರಗೊಳಿಸುತ್ತಿದೆ. ನಗರದ ಪ್ರತಿಯೊಬ್ಬ ವಯಸ್ಕರಿಗೆ ಲಸಿಕೆ ಮತ್ತು ಕೋವಿಡ್ ಸೊಂಕಿನಿಂದ ರಕ್ಷಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು 360-ಡಿಗ್ರಿ ಲಸಿಕಾಕರಣ ಕಾರ್ಯಕ್ರಮವನ್ನು ಬಿಬಿಎಂಪಿ ನಡೆಸುತ್ತಿದೆ. ಆದರೆ ಪ್ರಕರಣಗಳು ಮತ್ತೆ ಏರಿಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹಾಗೂ ಜಾಗೃತಿ ನಾಗರಿಕರ ಮೇಲೆಯೂ ಇದೆ ಎಂದು ಹೇಳಿದರು.
ನಗರದಲ್ಲಿ ಪಾಸಿಟಿವಿಟಿ ರೇಟ್ ಬಹುತೇಕ ಕಡಿಮೆಯಾಗಿದ್ದು, ಕೋವಿಡ್ ಸೋಂಕಿತರ ಸಂಖ್ಯೆ ಕೂಡಾ ಕಡಿಮೆಯಾಗಿದೆ. ಈ ಸಂಬಂಧ ನಗರದಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಏರಿಕೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು. ಎಲ್ಲರೂ ತಪ್ಪದೆ ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಕೋವಿಡ್ ಸೋಂಕು ಹರಡುವುದನ್ನು ತಡೆಯಬೇಕು. ಹೊರಗಿನಿಂದ ಬರುವವರಿಗೆ ಕಡ್ಡಾಯವಾಗಿ ಟೆಸ್ಟಿಂಗ್ ಮಾಡಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಕೋವಿಡ್ ಪರೀಕ್ಷೆ
ನಗರದಲ್ಲಿ ಹಾಸ್ಟೆಲ್, ಪೇಯಿಂಗ್ ಗೆಸ್ಟ್, ಕಟ್ಟಡ ನಿರ್ಮಾಣ ಸ್ಥಳದ ಬಳಿ, ಕಾರ್ಖಾನೆಗಳ ಬಳಿ ತೆರಳಿ ಎಲ್ಲರಿಗೂ ಪರೀಕ್ಷೆ ಮಾಡಬೇಕು. ಜೊತೆಗೆ ಅಪಾರ್ಟ್ಮೆಂಟ್ಸ್ ಗಳಿಗೆ ಹೊರಗಿನಿಂದ ಬರುವವರಿಗೆ ಟೆಸ್ಟಿಂಗ್ ಮಾಡಿಸಿಕೊಳ್ಳಲು ಆರ್.ಡಬ್ಲ್ಯೂ.ಎಗಳಿಗೆ ಸೂಚನೆ ನೀಡಬೇಕು. ಎಲ್ಲಾ ಆರೋಗ್ಯಾಧಿಕಾರಿಗಳು ಕೋವಿಡ್ ನಿಯಂತ್ರಿಸುವ ಸಂಬಂಧ ಪರಿಣಾಮಕಾರಿಯಾಗಿ ಕೆಲೆಸ ಮಾಡಬೇಕು. ಕೋವಿಡ್ ಲಕ್ಷಣಗಳಿರುವವರಿಗೆ ಪರೀಕ್ಷೆ ಮಾಡಬೇಕು. ಕಂಟೈನ್ಮೆಂಟ್ ಸರಿಯಾಗಿ ಮಾಡಬೇಕು, ಕೋವಿಡ್ ಸೋಂಕು ದೃಢಪಟ್ಟವರು ತಪ್ಪದೆ ಐಸೋಲೇಟ್ ಆಗಬೇಕು ಎಂದು ತಿಳಿಸಿದರು.
ಲಸಿಕಾಕರಣ ಕಾರ್ಯಕ್ರಮ:
ನಗರದಲ್ಲಿ 44 ವರ್ಷ ಮೇಲ್ಪಟ್ಟವರು ಹಾಗೂ 18 ರಿಂದ 44 ವರ್ಷದವರಿಗೆ ಇದುವರೆಗೆ 40,39,744 ಮಂದಿಗೆ ಲಸಿಕೆ ನೀಡಲಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಲಸಿಕಾಕರಣ ಕಾರ್ಯ ಸರಿಯಾಗಿ ಆಗಬೇಕು. ಈ ಸಂಬಂಧ 45 ವರ್ಷ ಮೇಲ್ಪಟ್ಟವರು, 18 ರಿಂದ 44 ವಯೋಮಾನದವರೆಲ್ಲರಿಗೂ ಲಸಿಕೆ ನೀಡಬೇಕು. 44 ವರ್ಷ ಮೇಲ್ಪಟ್ಟವರು ಮೊದಲನೇ ಡೋಸ್ ಪಡೆದು ಎರಡನೇ ಡೋಸ್ ಪಡೆಯದವರಿಗೆ 1912 ಮೂಲಕ ಕರೆ ಮಾಡಿ ಲಸಿಕೆ ಹಾಕಿಸಿಕೊಳ್ಳಲು ತಿಳಿಸಬೇಕು. ಜೊತೆಗೆ ಮನೆ-ಮನೆ ಸಮೀಕ್ಷೆ ಮಾಡಿ ಲಸಿಕೆ ಪಡೆಯದವರಿಗೆ ಲಸಿಕೆ ಪಡೆಯಲು ತಿಳಿಸಬೇಕು. ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವವರಿಗೆ ಎಸಿಟಿ ಮೂಲಕ ಲಸಿಕೆ ನೀಡಲಾಗುತ್ತಿದ್ದು, ಲಸಿಕೆ ಪಡೆಯುಲು ಅರ್ಹರಿರುವ ಎಲ್ಲರಿಗೂ ತ್ವರಿತವಾಗಿ ಲಸಿಕೆ ನೀಡಬೇಕು ಎಂದು ತಿಳಿಸಿದರು.
3ನೇ ಅಲೆಗೆ ಸಿದ್ಧತೆ:
ಬಿಬಿಎಂಪಿ ವ್ಯಾಪ್ತಿಯಲ್ಲಿ 3ನೇ ಅಲೆ ಸಲುವಾಗಿ ಎಲ್ಲಾ ರೀತಿಯ ಸಿದ್ಧ್ದತೆಗಳನ್ನು ಮಾಡಿಕೊಳ್ಳಬೇಕು. ಈ ಸಂಬಂಧ ಪ್ರಾಥಮಿಕ ಆರೋಗ್ಯ ಕೇಂದ್ರ, ಹೆರಿಗೆ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಸಲುವಾಗಿ ಏನೆಲ್ಲಾ ಅವಶ್ಯಕತೆಯಿದೆ ಅವುಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಮುಖ್ಯ ಆಯುಕ್ತರು ಮುಖ್ಯ ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.
ಕೋವಿಡ್-19 ವಿರುದ್ಧದ ಹೋರಾಟವು ದೀರ್ಘವಾದದ್ದು ಮತ್ತು ಎಲ್ಲರೂ ಸುರಕ್ಷಿತ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಮತ್ತು ವ್ಯಾಕ್ಸಿನೇಷನ್ ಪಡೆಯಬೇಕು. ಇದರಿಂದ ಕೋವಿಡ್ ಸೋಂಕು ಹರಡುವುದನ್ನು ನಿಯಂತ್ರಿಸಲು ಸಾಧ್ಯ ಎಂದು ಮುಖ್ಯ ಆಯುಕ್ತರು ಹೇಳಿದರು.
ಸಭೆಯಲ್ಲಿ ವಿಶೇಷ ಆಯುಕ್ತರು (ಆರೋಗ್ಯ) ಶ್ರೀ ರಾಜೇಂದ್ರ ಚೋಳನ್, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ, ವಲಯ ಆರೋಗ್ಯಾಧಿಕಾರಿಗಳು, ಆರೋಗ್ಯ ವೈದ್ಯಾಧಿಕಾರಿಗಳು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಕೋವಿಡ್ ನಿಯಂತ್ರಿಸಲು ತೆಗೆದುಕೊಳ್ಳಬೇಕಿರುವ ಕ್ರಮಗಳು:
- ಕೋವಿಡ್ 19 ಪರೀಕ್ಷೆಯನ್ನು ತೀವ್ರಗೊಳಿಸಲಾಗುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಶಿಬಿರಗಳನ್ನು ಆಯೋಜಿಸಲಾಗುವುದು.
- ನಾಗರಿಕರು ತಾವು ಕೋವಿಡ್-ಸಂಬಂಧಿತ ಯಾವುದೇ ರೋಗಲಕ್ಷಣಗಳನ್ನು ಕಂಡುಬಂದರೆ ಅವರು ಸುರಕ್ಷಿತವಾಗಿರಲು ಕೂಡಲೆ ಪರೀಕ್ಷಿಸಿಕೊಳ್ಳುವುದು.
- ಯಾವುದೇ ರೀತಿಯ ಸಾರ್ವಜನಿಕ ಸ್ಥಳಗಳಲ್ಲಿ ಭಾಗವಹಿಸುವುದನ್ನು ತಪ್ಪಿಸಲು ಮತ್ತು ತಡೆಯಲು ನಾಗರಿಕರನ್ನು ಕೋರಲಾಗುವುದು.
- ಕೋವಿಡ್ ನಡವಳಿಕೆಯನ್ನು ಕಡ್ಡಾಯವಾಗಿ ಅನುಸರಿಸಲು ಹಾಗೂ ಲಸಿಕೆ ತೆಗೆದುಕೊಳ್ಳಲು ನಾಗರಿಕರನ್ನು ಕೋರಿದೆ.