ಬೆಂಗಳೂರು:
ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನೀರು ಹಂಚಿಕೆ ಸಂಬಂಧವಾಗಿ ಬರಗಾಲದ ವರ್ಷಗಳಿಗೆ ಅನ್ವಯವಾಗುವಂತೆ ಸಂಕಷ್ಟ ಸೂತ್ರವನ್ನು ವಸ್ತುನಿಷ್ಠ ನೆಲೆಯಲ್ಲಿ ಮಾಡಬೇಕು. ಇದೊಂದೇ ನಿಜವಾದ ಪರಿಹಾರ ಎಂದು ಸಚಿವ ಎಂ ಬಿ ಪಾಟೀಲ ಅಭಿಪ್ರಾಯ ಪಟ್ಟಿದ್ದಾರೆ.
ಮಂಗಳವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಇದು ನನ್ನ ವೈಯಕ್ತಿಕ ಅಭಿಪ್ರಾಯ. ಹಿಂದೆ ನಾನೂ ನೀರಾವರಿ ಸಚಿವನಾಗಿದ್ದ ಅನುಭವದ ಮೇಲೆ ಈ ಸಲಹೆ ನೀಡುತ್ತಿದ್ದೇನೆ ಎಂದು ಹೇಳಿದರು.
ತಮಿಳುನಾಡಿನ ಕೋರಿಕೆ ಪ್ರಕಾರ ಈಗ ನೀರು ಬಿಡುವುದು ಅಸಾಧ್ಯ. ಇದನ್ನು ಮನವರಿಕೆ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಯಾವ ರೀತಿಯ ತೀರ್ಮಾನ ಮಾಡಬೇಕು ಎನ್ನುವುದಕ್ಕೆ ಯಾವುದೇ ಆಧಾರ ಇಲ್ಲ. ಹೀಗಾಗಿಯೇ ಎರಡೂ ರಾಜ್ಯಗಳ ತಜ್ಞರು ಸೇರಿಕೊಂಡು ಪರಿಹಾರ ಕಂಡುಕೊಳ್ಳುವ ಅಗತ್ಯ ಇದೆ ಎಂದು ಅವರು ಸಲಹೆ ನೀಡಿದರು.
ಹಿಂದೆ ರಾಜ್ಯವು ಪ್ರತೀವರ್ಷ ತಮಿಳುನಾಡಿಗೆ 192 ಟಿಎಂಸಿ ನೀರು ಬಿಡುಗಡೆ ಮಾಡಬೇಕಿತ್ತು. ಆದರೆ, ಆಗ ತುಂಬಾ ಕಾನೂನು ಹೋರಾಟ ಮಾಡಿದ್ದರಿಂದ ಇದರಲ್ಲಿ 14 ಟಿಎಂಸಿಯಷ್ಟು ಹೊರೆ ನಮಗೆ ಕಡಿಮೆಯಾಗಿ, ಹೆಚ್ಚುವರಿಯಾಗಿ ಬೆಂಗಳೂರಿಗೆ 4.5 ಟಿಎಂಸಿ ಸಿಕ್ಕಿತು. ಇದರಿಂದಾಗಿ ನಾವು ಈಗ ಹೇಳುತ್ತಿರುವ ಮೇಕೆದಾಟು ಯೋಜನೆಯ ವಿಚಾರಕ್ಕೆ ಬಲ ಬಂದಿತು ಎಂದು ಅವರು ವಿವರಿಸಿದರು.
ರಾಜ್ಯದ ಪರವಾಗಿ ಹಿಂದೆ ನಾರಿಮನ್ ಅವರಂತಹ ಪರಿಣತರು ವಾದ ಮಂಡಿಸುತ್ತಿದ್ದರು. ಈಗ ಅವರಿಗೆ ವೃದ್ಧಾಪ್ಯದ ಸಮಸ್ಯೆಗಳಿವೆ. ಆದ್ದರಿಂದ ಬೇರೆ ವಕೀಲರು ರಾಜ್ಯವನ್ನು ಪ್ರತಿನಿಧಿಸುತ್ತಿದ್ದು, ಇವರು ಸಹ ಸಮರ್ಥರಾಗಿದ್ದಾರೆ ಎಂದು ಅವರು ನುಡಿದರು.