Home ಅಪರಾಧ ಬೆಂಗಳೂರಿನಲ್ಲಿ ಕದ್ದ ಕಾರಿಗೆ ವಿಧಾನ ಪರಿಷತ್ ಸದಸ್ಯ ಬೋಜೇಗೌಡ ಕಾರಿನ ನಂಬರ್ ಹಾಕಿ ಮಾರಾಟಕ್ಕೆ ಯತ್ನ,...

ಬೆಂಗಳೂರಿನಲ್ಲಿ ಕದ್ದ ಕಾರಿಗೆ ವಿಧಾನ ಪರಿಷತ್ ಸದಸ್ಯ ಬೋಜೇಗೌಡ ಕಾರಿನ ನಂಬರ್ ಹಾಕಿ ಮಾರಾಟಕ್ಕೆ ಯತ್ನ, ಆರೋಪಿ ಬಂಧನ

23
0
bengaluru-city-police-logo
bengaluru

ಬೆಂಗಳೂರು:

ಕದ್ದ ಕಾರಿಗೆ ವಿಧಾನ ಪರಿಷತ್ ಸದಸ್ಯ ಬೋಜೇಗೌಡ ಅವರ ಕಾರಿನ ನಂಬರ್ ಹಾಕಿ ಮಾರಾಟ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಬೆಂಗಳೂರಿನಲ್ಲಿ ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ.

ಬೋಜೆಗೌಡ ಅವರ ದುಬಾರಿ ಕಾರಿಗೆ ನಂಬರ್ ಪ್ಲೇಟ್ ಅಳವಡಿಸಿ ನಕಲಿ ದಾಖಲೆ ಸೃಷ್ಟಿಸಿ ಮಾರಾಟಕ್ಕೆ ಇರಿಸಿದ್ದ ಘಟನೆ ನಗರದ ಕ್ವೀನ್ಸ್ ರಸ್ತೆಯಲ್ಲಿ ನಡೆದಿದೆ. ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಪಕ್ಕದಲ್ಲೇ ಇರುವ ಐ ಕಾರ್ಸ್ ಸ್ಟುಡಿಯೋದಲ್ಲಿ ಬೋಜೇಗೌಡ ಅವರ ಕಾರಿನ ನಂಬರ್ ಪ್ಲೇಟ್ ಅಳವಡಿಸಲಾಗಿದ್ದ ಕಾರು ನಿಂತಿರುವುದನ್ನು ಅವರ ಆಪ್ತ ಸಹಾಯಕ ಮಾದೇಶ್ ಗಮನಿಸಿದ್ದಾರೆ. ತಕ್ಷಣ ಶೋರೂಂ ಒಳಗೆ ತೆರಳಿ ಕಾರಿನ ಬಗ್ಗೆ ವಿಚಾರಿಸಿದಾಗ, ’ಕಾರು ಮಾರಾಟಕ್ಕಿದೆ, ನಿಮಗೆ ಬೇಕಿತ್ತಾ ಟೆಸ್ಟ್ ರೈಡ್ ಮಾಡಿ ನೋಡುವಿರಾ ಎಂದು ಶೋರೂಂ ಸಿಬ್ಬಂದಿ ಕೇಳಿದ್ದಾರೆ.

ಮತ್ತಷ್ಟು ಅನುಮಾನಗೊಂಡು ಕಾರಿನ ದಾಖಲಾತಿಗಳನ್ನು ಪರಿಶೀಲಿಸಿದಾಗ ಅಚ್ಚರಿ ಎಂಬಂತೆ ಆರ್.ಸಿ ಕೂಡ ಬೋಜೇಗೌಡರ ಹೆಸರಿನಲ್ಲಿರುವುದು ಪತ್ತೆಯಾಗಿದೆ. ತಕ್ಷಣ ಬೋಜೇಗೌಡರಿಗೆ ಕರೆ ಮಾಡಿದ್ದ ಅವರ ಆಪ್ತ ಸಹಾಯಕ ಸರ್ ನಿಮ್ಮ ಕಾರ್ ಮಾರಾಟ ಮಾಡಿರುವಿರಾ ಎಂದು ಕೇಳಿದ್ದಾರೆ. ಅದಕ್ಕೆ ಬೋಜೇಗೌಡರು ಇಲ್ಲ, ಕಾರು ತಮ್ಮ ಬಳಿಯೇ ಇದೆ ಎಂದಾಗ, ಶೋರೂಂನಲ್ಲಿ ನಿಮ್ಮ ಕಾರಿನ ನಂಬರ್ ಮತ್ತೊಂದು ಕಾರು ಇದೆ ಎಂದು ವಿಷಯ ಮುಟ್ಟಿಸಿದ್ದಾರೆ. ಬಳಿಕ ಹೈಗ್ರೌಂಡ್ಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ.

bengaluru

ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಹೈಗ್ರೌಂಡ್ಸ್ ಪೊಲೀಸರು ಕಾರಿನ ಸಮೇತ ಐ ಕಾರ್ಸ್ ಸ್ಟುಡಿಯೋ ಮಾಲೀಕ ಇಮ್ರಾನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತನಗೆ ಬೇರೆಯವರು ಕಾರು ಕೊಟ್ಟಿದ್ದಾರೆ ಎಂದು ಇಮ್ರಾನ್ ಹೇಳುತ್ತಿದ್ದು, ವಿಚಾರಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದುಬಾರಿ ಬೆಲೆಯ ಕಾರುಗಳನ್ನು ಕ್ಷಣಾರ್ಧದಲ್ಲಿ ಕದ್ದು ನಂಬರ್ ಪ್ಲೇಟ್ ಬದಲಾಯಿಸಿ ಸಾರ್ವಜನಿಕರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಕಳ್ಳನನ್ನು ಪುಲಕೇಶಿ ನಗರ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಮುಳಬಾಗಿಲು ಮೂಲದ ಮೊಹಮ್ಮದ್ ಫೈರೋಜ್ ಪಾಷಾ ಬಂಧಿತ ಆರೋಪಿ. ಈತನಿಂದ 20 ಲಕ್ಷ ರೂ. ಮೌಲ್ಯದ ಮಾರುತಿ ಬಲೆನೊ ಕಾರು, ಮಾರುತಿ ಈಕೋ ಹಾಗೂ ಮಿನಿ ಟೆಂಪೋವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ಸಾರ್ವಜನಿಕ ಪ್ರದೇಶಗಳಲ್ಲಿ ನಿಲ್ಲಿಸಿದ್ದ ಐಷಾರಾಮಿ ಕಾರುಗಳನ್ನು ಸುಲಭವಾಗಿ ಕಳ್ಳತನ ಮಾಡುತ್ತಿದ್ದ ಆರೋಪಿ ಓಎಲ್‌ಎಕ್ಸ್‌ಗೆ ಹೋಗಿ ಮಾರಾಟವಾಗುವ ಕಾರಿನ ನೋಂದಣಿ ಸಂಖ್ಯೆಯನ್ನು ತೆಗೆದುಕೊಂಡು ಕದ್ದ ಕಾರಿಗೆ ಬದಲಾಯಿಸುತ್ತಿದ್ದ. ಬಳಿಕ ಗ್ರಾಹಕರನ್ನು ಸಂಪರ್ಕಿಸಿ ಅವರನ್ನು ವಿಶ್ವಾಸಕ್ಕೆ ಪಡೆದುಕೊಂಡು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಅಸಲಿ ದಾಖಲಾತಿಯಂತೆ ನಕಲಿ ದಾಖಲೆ ಸೃಷ್ಟಿಸಿ ಮಾಲೀಕನ ಹೆಸರಿನಲ್ಲಿ ಸಹಿ ಹಾಕುತ್ತಿದ್ದ. ತ್ವರಿತವಾಗಿ ಹಣ ನೀಡುವಂತೆ ಒತ್ತಡ ಹಾಕುತ್ತಿರಲಿಲ್ಲ. ಇದರಿಂದ ಆರೋಪಿ ಮೇಲೆ ಸಾರ್ವಜನಿಕರಿಗೆ ನಂಬಿಕೆ ಹುಟ್ಟುವಂತೆ ಮಾಡಿದ್ದ ಎಂದು ಪೊಲೀಸರು ತಿಳಿಸಿದರು.

bengaluru

LEAVE A REPLY

Please enter your comment!
Please enter your name here