ಬೆಂಗಳೂರು:
ರಾಜ್ಯದಲ್ಲಿ ಈಚೆಗೆ ನಡೆದ ಕಾಡುಗೊಂಡನಹಳ್ಳಿ (ಕೆಜಿ ಹಳ್ಳಿ) ಮತ್ತು ದೇವರಗೊಂಡನಹಳ್ಳಿ (ಡಿಜಿ ಹಳ್ಳಿ) ಗಲಭೆ ಮತ್ತು ಸಂಘರ್ಷಕ್ಕೆ ಕಾರಣಕರ್ತ ಸಂಘಟನೆಗಳಾದ ಸೋಷಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಮತ್ತು ಪಿಎಫ್‍ಐ ಸಂಘಟನೆಗಳನ್ನು ನಿಷೇಧಿಸಬೇಕೆಂದು ರಾಜ್ಯ ಅರಣ್ಯ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರಾದ ಶ್ರೀ ಅರವಿಂದ ಲಿಂಬಾವಳಿ ಅವರು ಪತ್ರಿಕಾಗೋಷ್ಠಿಯಲ್ಲಿ ಇಂದು ಒತ್ತಾಯಿಸಿದರು.
ನಗರದ ಮಲ್ಲೇಶ್ವರದ ಪಕ್ಷದ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಆಗಸ್ಟ್ 11 ರಂದು ಕೆ.ಜೆ ಹಳ್ಳಿ ಹಾಗೂ ಡಿ.ಜೆ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟೀಯ ತನಿಖಾ ಸಂಸ್ಥೆ (ಎನ್.ಐ.ಎ) 2021ರ ಫೆಬ್ರವರಿ 10 ರಂದು ನ್ಯಾಯಲಯಕ್ಕೆ 7 ಸಾವಿರ ಪುಟಗಳ ಚಾರ್ಜ್‍ಶೀಟ್ ಸಲ್ಲಿಸಿದೆ. ಗಲಭೆಯಲ್ಲಿ ಇದುವರೆಗೆ 247 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು ಈ ಪೈಕಿ ಎಸ್‍ಡಿಪಿಐಗೆ ಸೇರಿದ 40ಕ್ಕೂ ಅಧಿಕ ಗಲಭೆಕೋರರು ಇರುವುದಾಗಿ ತಿಳಿಸಿದೆ. ಈ ಎರಡು ಸಂಘಟನೆಗಳು ನಿರಂತರ ದೇಶವಿದ್ರೋಹಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಅವುಗಳನ್ನು ರಾಜ್ಯ ಸರಕಾರ ಕೂಡಲೇ ನಿಷೇಧಿಸುವಂತೆ ಪಕ್ಷದ ಪರವಾಗಿ ಒತ್ತಾಯಿಸುವುದಾಗಿ ಹೇಳಿದರು.
ಗಲಭೆ ಕೃತ್ಯಕ್ಕೆ ಇವೆರಡು ಸಂಘಟನೆಗಳು ಸಂಚು ರೂಪಿಸಿದ್ದವು. ದೇಶದಲ್ಲಿ ತ್ರಿವಳಿ ತಲಾಖ್ ರದ್ದು ಮಾಡಿದ ಕ್ರಮಕ್ಕೆ ವಿರೋಧ, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‍ಸಿ) ಜಾರಿ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸದ ಸಂದರ್ಭದಲ್ಲಿ ಗಲಭೆ ನಡೆಸಲು ಈ ಸಂಘಟನೆಗಳು ಸಂಚು ಮಾಡಿದ್ದವು. ಈ ವಿಚಾರವನ್ನು ತಮ್ಮ ನೇತೃತ್ವದ ಪಕ್ಷದ ಸತ್ಯಶೋಧನಾ ಸಮಿತಿಯು ಬಯಲಿಗೆ ತಂದಿತ್ತು. ಈ ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸಲು ಆಗ್ರಹಿಸಲಾಗಿತ್ತು ಎಂದು ವಿವರಿಸಿದರು.
ಶಾಸಕರ ಮನೆ ಮೇಲೆ ಬೆಂಕಿ, ನೂರಾರು ವಾಹನಗಳಿಗೆ ಬೆಂಕಿ ಹಾಕಿದ ತಂಡವು ಇದಕ್ಕಾಗಿ ಪೂರ್ವತಯಾರಿ ನಡೆಸಿತ್ತು. ಗಲಭೆ ಮಾಡುವ ಉದ್ದೇಶದಿಂದಲೇ 2020ರ ಆಗಸ್ಟ್ 11ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಇದ್ದು, ಅದೇ ದಿನವನ್ನು ಆರೋಪಿಗಳು ಆಯ್ಕೆ ಮಾಡಿಕೊಂಡಿದ್ದರು, ಆ ದಿನ ಮಧ್ಯಾಹ್ನ ವಿವಾದಾತ್ಮಕ ವಿಡಿಯೋವನ್ನು ಫೈರೋಜ್ ಪಾಷಾ ಅಪ್‍ಲೋಡ್ ಮಾಡಿದ್ದು, ಅವಾಚ್ಯ ಶಬ್ದಗಳಿಂದ ಕಾಮೆಂಟ್ ಬರೆದಿದ್ದ. ಅಲ್ಲದೆ ಅದನ್ನು ಪುಲಕೇಶಿನಗರದ ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ ಅವರ ಸೋದರ ಸಂಬಂಧಿ ನವೀನ್‍ಗೆ ಟ್ಯಾಗ್ ಮಾಡಿದ್ದ. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ನವೀನ್, ವಿವಾದಾತ್ಮಕ ಕಾರ್ಟೂನನ್ನು ಪೋಸ್ಟ್ ಮಾಡಿದ್ದು, ಇದನ್ನು ನೆಪವನ್ನಾಗಿ ಮಾಡಿ ಗಲಭೆ ನಡೆಸಲಾಗಿದೆ. ಗಲಭೆ ಸೃಷ್ಟಿಸುವ ಏಕೈಕ ಉದ್ದೇಶದಿಂದ ನವೀನ್ ಪ್ರಕಟಿಸಿದ ಪೋಸ್ಟ್ ಅನ್ನು ಸ್ಕ್ರೀನ್ ಶಾಟ್ ತೆಗೆದು ವಾಟ್ಸ್ ಆಪ್ ಗುಂಪುಗಳಿಗೆ ಕಳುಹಿಸಿ ಪ್ರಚೋದನೆ ನೀಡಲಾಗಿದೆ ಎಂಬ ವಿಚಾರಗಳು ಎನ್‍ಐಎ ವರದಿಯಲ್ಲಿ ಸ್ಪಷ್ಟಗೊಂಡಿದೆ ಎಂದು ತಿಳಿಸಿದರು.
ಡಿಜೆ ಹಳ್ಳಿ & ಕೆಜಿ ಹಳ್ಳಿ ಗಲಭೆಯು ಪೂರ್ವ ನಿರ್ಧರಿತವಾಗಿತ್ತು – ಎನ್‍ಐಎ
— BJP Karnataka (@BJP4Karnataka) February 25, 2021
ಸಿಎಎ, ಆರ್ಟಿಕಲ್ 370 ರದ್ಧತಿ, ತ್ರಿವಳಿ ತಲಾಕ್ ರದ್ದು, ರಾಮಮಂದಿರ ತೀರ್ಪು ಕುರಿತು ಮೋದಿ ಸರ್ಕಾರದ ವಿರುದ್ಧ ಎಸ್‍ಡಿಪಿಐ & ಪಿಎಫ್ಐನ ನಡೆಸಿದ್ದ ಸಂಚಿನಿಂದಾಗಿಯೇ ಗಲಭೆಯಾಗಿತ್ತು.
ಈ ಸಂಘಟನೆಗಳು @INCKarnataka ಪಕ್ಷದ ಬಿ ಟೀಂ ಆಗಿ ಕಾರ್ಯಾಚರಿಸುತ್ತಿವೆ. pic.twitter.com/0cgWQwz1cI
ತಮ್ಮದೇ ಪಕ್ಷದ ಶಾಸಕರ ಮನೆಗೆ ಬೆಂಕಿ ಹಚ್ಚಿದ ಕುರಿತು ಸದನದಲ್ಲಿ ಚರ್ಚೆ ಮಾಡಲು ಕಾಂಗ್ರೆಸ್ ಶಾಸಕರು ಸಿದ್ಧರಿರಲಿಲ್ಲ. ಅಲ್ಲದೆ, ಈ ಕುರಿತು ಪರಿಶೀಲಿಸಲು ಸಮಿತಿ ರಚಿಸಲು ವಿಳಂಬ ಮಾಡಿದ್ದಾರೆ. ಇದು ಅವರು ಈ ಎರಡೂ ಸಂಘಟನೆಗಳಿಗೆ ಹತ್ತಿರ ಇರುವುದನ್ನು ಸ್ಪಷ್ಟಪಡಿಸುವಂತಿದೆ. ಇಷ್ಟಾಗಿಯೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಪಿಎಫ್‍ಐ, ಎಸ್‍ಡಿಪಿಐಗಳು ಬಿಜೆಪಿಯ ಬಿ ಟೀಂ ಎಂದಿರುವುದು ಹೇಗೆ ಸರಿ ಎಂದು ಪ್ರಶ್ನಿಸಿದರು.
ಇವೆರಡೂ ಸಂಸ್ಥೆಗಳಿಗೆ ಕಾಂಗ್ರೆಸ್ ನಾಯಕರ ಕುಮ್ಮಕ್ಕೂ ಇದೆ. ಸಿದ್ದರಾಮಯ್ಯ ಅವರು 2015ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಪಿಎಫ್‍ಐ ಮತ್ತು ಕರ್ನಾಟಕ ಫೋರಂ ಫಾರ್ ಡಿಗ್ನಿಟಿ (ಕೆಎಫ್‍ಡಿ) ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಇದ್ದ 1,600ಕ್ಕೂ ಹೆಚ್ಚು ಪ್ರಕರಣಗಳನ್ನು ರದ್ದು ಮಾಡಿರುವುದು ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದರು.
ಈ ಸಂಘಟನೆಗಳ ಕಾರ್ಯಕರ್ತರು ನಿನ್ನೆ ಕೇರಳದ ಆಲಪ್ಪುಜ ಜಿಲ್ಲೆಯಲ್ಲಿ ರಾಷ್ಟ್ರೀಯ ಸ್ವಯಂದೇವಕ ಸಂಘದ ಕಾರ್ಯಕರ್ತರಾದ ನಂದಕೃಷ್ಣ ಅವರನ್ನು ಕೊಲೆ ಮಾಡಿದ್ದನ್ನೂ ಅವರು ಉಲ್ಲೇಖಿಸಿದರು.
2019ರ ಡಿಸೆಂಬರ್‍ನಲ್ಲಿ ನಡೆದ ಸಿಎಎ ಮತ್ತು ಎನ್‍ಆರ್‍ಸಿ ವಿರುದ್ಧ ನಡೆದ ಮಂಗಳೂರು ಗಲಭೆಯ ಹಿಂದೆಯೂ ಈ ಸಂಘಟನೆಗಳು ಇದ್ದ ಬಗ್ಗೆ ಸಂಶಯ ಇದೆ. ಈಚೆಗೆ ನಡೆದ ಪಂಚಾಯತ್ ಚುನಾವಣೆ ಮತ ಎಣಿಕೆ ವೇಳೆ ಕೆಲವು ಎಸ್‍ಡಿಪಿಐ ಕಾರ್ಯಕರ್ತರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದು, ಇಂಥ ಸಂಘಟನೆಗಳನ್ನು ನಿಷೇಧಿಸುವುದು ಅನಿವಾರ್ಯ ಎಂದು ಅವರು ತಿಳಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎನ್.ರವಿಕುಮಾರ್, ಶ್ರೀ ಸಿದ್ದರಾಜು, ರಾಜ್ಯ ಎಸ್. ಸಿ. ಮೋರ್ಚಾ ಅಧ್ಯಕ್ಷರಾದ ಶ್ರೀ ಛಲವಾದಿ ನಾರಾಯಣಸ್ವಾಮಿ, ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಶ್ರೀ ಶಂಕರಪ್ಪ, ರಾಜ್ಯ ಮಾಧ್ಯಮ ಸಂಚಾಲಕರಾದ ಶ್ರೀ ಕರುಣಾಕರ ಖಾಸಲೆ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.