Home ಬೆಂಗಳೂರು ನಗರ ಕಾಂಪ (CAMPA) ಹಣ ಬಳಕೆ ಅನುಮತಿಗೆ ಶೀಘ್ರದಲ್ಲೇ ಕೇಂದ್ರಕ್ಕೆ ನಿಯೋಗ – ಸಚಿವ ಅರವಿಂದ ಲಿಂಬಾವಳಿ

ಕಾಂಪ (CAMPA) ಹಣ ಬಳಕೆ ಅನುಮತಿಗೆ ಶೀಘ್ರದಲ್ಲೇ ಕೇಂದ್ರಕ್ಕೆ ನಿಯೋಗ – ಸಚಿವ ಅರವಿಂದ ಲಿಂಬಾವಳಿ

55
0

ಬೆಂಗಳೂರು:

ಕಾಂಪ (CAMPA) ಯೋಜನೆಯಡಿ ಕರ್ನಾಟಕದಲ್ಲಿ ಪ್ರಾಣಿ ಅತಿಕ್ರಮಣ ಮಾಡುವ ಮಾರ್ಗದ ಉದ್ದಕ್ಕೂ ಬ್ಯಾರಿಕೇಡ್ ನಿರ್ಮಾಣ ಮಾಡುವ ಯೋಜನೆಯ ಅನುಷ್ಠಾನಕ್ಕೆ ಕೇಂದ್ರದ ಅನುಮತಿ ಅಗತ್ಯವಿದ್ದು, ಶೀಘ್ರದಲ್ಲೇ ಅರಣ್ಯ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರದ ಶಾಸಕರ ನಿಯೋಗವನ್ನು ಕೇಂದ್ರಕ್ಕೆ ಕೊಂಡೊಯ್ಯಲಾಗುವುದು ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅರಣ್ಯ ಪ್ರದೇಶವಿರುವ ವಿಧಾನಸಭಾ ಕ್ಷೇತ್ರದ ಶಾಸಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕರ್ನಾಟಕದ 624 ಕಿ.ಲೋ.ಮೀ. ಮಾರ್ಗಕ್ಕೆ ಬ್ಯಾರಿಕೇಡ್ ನಿರ್ಮಾಣ ಮಾಡುವ ಯೋಜನೆ ಅನುಷ್ಠಾನಗೊಳಿಸುತ್ತಿದ್ದು, ಇದುವರೆಗೆ 165 ಕಿ.ಲೋ.ಮೀ. ಬೇಲಿ ಹಾಕುವ ಕೆಲಸ ಮುಗಿದಿದೆ. ಇನ್ನೂ 450 ಕಿ.ಲೋ.ಮೀ. ಮಾರ್ಗಕ್ಕೆ ಬ್ಯಾರಿಕೇಡ್ ನಿರ್ಮಿಸುವ ಕೆಲಸ ಬಾಕಿ ಇದ್ದು, ಇದಕ್ಕೆ 550ಕೋಟಿ ರೂಪಾಯಿ ಅಗತ್ಯವಿದೆ. ಈ ಯೋಜನೆಗೆ ಕೇಂದ್ರದ ಅನುಮತಿ ಅಗತ್ಯವಿದ್ದು, ಶೀಘ್ರದಲ್ಲೇ ಅರಣ್ಯ ಪ್ರದೇಶಗಳಿರುವ ವಿಧಾನಸಭಾ ಕ್ಷೇತ್ರದ ಶಾಸಕರ ನಿಯೋಗದೊಂದಿಗೆ ದೆಹಲಿಗೆ ಹೋಗಿ ಸಂಬಂಧಿಸಿದ ಇಲಾಖಾ ಸಚಿವರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

Barricading Project on Animal Route in Karnataka Arvind Limbavali1

ಜನಪರ ಇಲಾಖೆ ಮಾಡಲು ಕ್ರಮ

ಅರಣ್ಯ ಇಲಾಖೆ ಅಧಿಕಾರಿಗಳಿಂದ ನಾನಾ ಕಾರಣಗಳಿಗಾಗಿ ಜನರಿಗೆ ತೊಂದರೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಮುಖ್ಯವಾಗಿ ಅರಣ್ಯವಾಸಿಗಳಿಗೆ ಮೂಲಸೌಕರ್ಯ ಕಲ್ಪಿಸುವ ಮತ್ತು ಅವರಿಗೆ ಹಕ್ಕುಪತ್ರ ಕೊಡುವ ಕೆಲಸಗಳು ನೆನೆಗುದಿಗೆ ಬಿದ್ದವೆ. ಇಂತಹ ಸಂಗತಿಗಳ ಬಗ್ಗೆ ಇಲಾಖೆ ಶೀಘ್ರ ಕ್ರಮಕೈಗೊಂಡು ಅವರಿಗೆ ನೆರವಾಗುವಂತೆ ನಾನು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅರಣ್ಯ ಇಲಾಖೆ ಜನಪರ ಇಲಾಖೆಯಾಗಿ, ಜನಸ್ನೇಹಿಯಾಗಿ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದು ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಶಾಸಕರು ಪ್ರಾಣಿಗಳ ಹಾವಳಿಯಿಂದ ಸಾವಿಗೀಡಾದವರಿಗೆ ನೀಡಬೇಕಾದ ಪರಿಹಾರ ಶೀಘ್ರ ದೊರೆಯುವಂತಾಗಬೇಕು. ಬೆಳೆಹಾನಿ ಪರಿಹಾರ ಮೊತ್ತ ಹೆಚ್ಚಿಸಬೇಕು, ಪಶು ಮರಣಕ್ಕೆ ಮತ್ತು ಇತರ ಸಣ್ಣ ಪ್ರಾಣಿಗಳ ಮರಣಕ್ಕೆ ಕೊಡಲಾಗುತ್ತಿರುವ ಪರಿಹಾರ ತುಂಬ ಕಡಿಮೆ ಇದೆ. ಅದು ಈಗಿನ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ನಿಗದಿಯಾಗಬೇಕು ಎಂದು ಮನವಿ ಮಾಡಿದರು. ಹಾಡಿ ಮತ್ತು ಅರಣ್ಯ ದೊಳಗಿನ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು ಎಂಬ ಬೇಡಿಕೆಗಳ ಬಗ್ಗೆ ಗಮನ ಸೆಳೆದರು. ಈ ಎಲ್ಲದರ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಸಚಿವ ಅರವಿಂದ ಲಿಂಬಾಳಿ ಈ ಎಲ್ಲದರ ಬಗ್ಗೆ ನಾನು ಇಲಾಖೆಯ ಉನ್ನಾಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುತ್ತೇನೆ. ಇಲಾಖೆಯ ಕೆಳಹಂತದ ಅಧಿಕಾರಿಗಳಿಂದ ಆಗುತ್ತಿರುವ ತೊಂದರೆಗಳ ನಿವಾರಣೆಗೆ ಜಿಲ್ಲಾವಾರು ಅರಣ್ಯ ಅಧಿಕಾರಿಗಳಿಗೆ ಅಹವಾಲು ವಿಲೇವಾರಿ ಮಾಡುವ ಬಗ್ಗೆ ಕಾರ್ಯಾಗಾರ ನಡೆಸಿ ಸೂಚನೆ ನೀಡಲಾಗುತ್ತದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಶಾಸಕರಾದ ಕೆ. ಜಿ. ಬೋಪಯ್ಯ, ಅಪ್ಪಚು ರಂಜನ್, ಹೆಚ್.ಕೆ.ಕುಮಾರಸ್ವಾಮಿ, ಅರಗ ಜ್ಞಾನೇಂದ್ರ, ವಿ.ಸುನಿಲ್ ಕುಮಾರ್, ಟೀ. ಡಿ. ರಾಜೇ ಗೌಡ, ಆರ್. ವಿ. ದೇಶಪಾಂಡೆ. ಎನ್. ಮಹೇಶ್, ಸುನಿಲ್ ಬಿ ನಾಯ್ಕ್, ಹಾಗೂ ರೂಪಾಲಿ ಸಂತೋಷ್ ನಾಯ್ಕ್, ಹರ್ಷ, ಎಂ.ರೂಪ ಕಲಾ, ಮುಂತಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here