
ಬೆಂಗಳೂರು: ನಗರದ ಸಿಸಿಬಿ ಪೊಲೀಸರು ಭಾರೀ ದಾಳಿ ನಡೆಸಿ, 2 ವಿದೇಶಿ ಪ್ರಜೆ ಸೇರಿ 7 ಮಂದಿಯನ್ನು ಬಂಧಿಸಿ ₹9.93 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಬಂಧಿತರಿಂದ ಒಟ್ಟು 3.858 ಕೆ.ಜಿ. ಎಂಡಿಎಂಎ ಕ್ರಿಸ್ಟಲ್, 41 ಗ್ರಾಂ ಎಕ್ಸ್ಟಸಿ ಮಾತ್ರೆಗಳು, 1.082 ಕೆ.ಜಿ. ಹೈಡ್ರೋ ಗಾಂಜಾ, 6 ಕೆ.ಜಿ. ಗಾಂಜಾ ಹಾಗೂ ಅಪರಾಧಕ್ಕೆ ಬಳಸಿದ 1 ಕಾರು ಮತ್ತು 1 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಸಾಫ್ಟ್ವೇರ್ ಇಂಜಿನಿಯರ್ ಕೆವಿನ್ ರೋಜರ್ ಅವರನ್ನು ಸಿಸಿಬಿ ಬಂಧಿಸಿದ್ದು, ಕೇರಳದಿಂದ ಕಡಿಮೆ ಬೆಲೆಗೆ ಹೈಡ್ರೋ ಗಾಂಜಾ ತಂದು, ಬೆಂಗಳೂರಿನ ಪರಿಚಿತರಿಗೆ ಮಾರಾಟ ಮಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಆತನಿಂದ 500 ಗ್ರಾಂ ಹೈಡ್ರೋ ಗಾಂಜಾ, 1 ಕಾರು, 1 ಬೈಕ್ ಮತ್ತು 1 ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.
ಆಡುಗೋಡಿ ಪೊಲೀಸರು ದಂತವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ರಂಜಿತ್ ಆ್ಯಂಟೋನಿ ಅವರನ್ನು ಬಂಧಿಸಿದ್ದಾರೆ. ಅವರು ಸಹ ಮೋಜು-ಮಸ್ತಿಗಾಗಿ ಹಾಗೂ ಹೆಚ್ಚಿನ ಹಣಕ್ಕಾಗಿ ಹೈಡ್ರೋ ಗಾಂಜಾ ಮಾರಾಟ ಮಾಡುತ್ತಿದ್ದನೆಂದು ತಿಳಿದುಬಂದಿದೆ. ಆತನಿಂದ 300 ಗ್ರಾಂ ಹೈಡ್ರೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಇದೇ ವೇಳೆ, ಕೆ.ಜಿ.ನಗರ ಠಾಣೆ ಪೊಲೀಸರು ವಿದೇಶಿ ಅಂಚೆ ಕಚೇರಿಗೆ ಬಂದಿದ್ದ ಪಾರ್ಸೆಲ್ನಲ್ಲಿ ₹1 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 1.022 ಕೆ.ಜಿ. ಹೈಡ್ರೋ ಗಾಂಜಾ ಮತ್ತು ಇತರ ವಸ್ತುಗಳು ಸೇರಿದ್ದು, ಪಾರ್ಸೆಲ್ ಬುಕ್ ಮಾಡಿದ್ದ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.
ಹೆಬ್ಬಗೋಡಿ ಪೊಲೀಸರು ನೈಜೀರಿಯಾ ಮೂಲದ ಎನ್ಗ್ವು ಕಿಂಗ್ಸ್ಲೆ ಮತ್ತು ಥಾಮಸ್ ನವೀದ್ ಚಿಮೆ ಎಂಬ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ. ಇವರು ದೆಹಲಿಯಲ್ಲಿ ನೆಲೆಸಿರುವ ಇತರ ವಿದೇಶಿ ಪ್ರಜೆಗಳಿಂದ ಮಾದಕ ವಸ್ತುಗಳನ್ನು ಖರೀದಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಇವರಲ್ಲಿ ಒಬ್ಬ ಆರೋಪಿಯ ವಿರುದ್ಧ ಗುಜರಾತ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿದ್ದು, ಜಾಮೀನು ಪಡೆದು ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಒಟ್ಟಾರೆಯಾಗಿ, 7 ಮಂದಿಯನ್ನು (2 ವಿದೇಶಿ ಪ್ರಜೆ ಸೇರಿ) ಬಂಧಿಸಿ, ₹9.93 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.