Home ಸಿನಿಮಾ ಮಾರ್ಚ್ 24 ರಿಂದ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಮಾರ್ಚ್ 24 ರಿಂದ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

66
0
Advertisement
bengaluru

ಬೆಂಗಳೂರು:

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿ ಸಭೆ ಜರುಗಿತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಸಂಘಟಿಸುತ್ತಿರುವ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು 2021ರ ಮಾರ್ಚ್ 24 ರಿಂದ 31 ರವರೆಗೆ ಬೆಂಗಳೂರಿನಲ್ಲಿ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ ಬಾರಿ “ಭಾರತೀಯ ಪ್ರದರ್ಶನ ಕಲೆಗಳ ಮಹತ್ವ” ವಿಷಯದ ಮೇಲೆ ಚಿತ್ರೋತ್ಸವವನ್ನು ಏರ್ಪಡಿಸಲು ನಿರ್ಣಯಿಸಲಾಯಿತು.

ಭಾರತದ ಪ್ರತಿಷ್ಠಿತ ಚಿತ್ರೋತ್ಸವವಾಗಿ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಬೆಳೆದು ಬಂದಿದ್ದು, ಈಗಾಗಲೇ ದೇಶ-ವಿದೇಶಗಳಲ್ಲಿ ಪ್ರಸಿದ್ದಿ ಪಡೆದಿದೆ. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಅಂತಾರಾಷ್ಟ್ರೀಯ FIAPF ಮಾನ್ಯತೆ ದೊರೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದು ಇದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಕೋವಿಡ್ ನಿಯಮಾವಳಿಗಳು ಮತ್ತು ಮಾರ್ಗಸೂಚಿಗಳಿಗನುಸಾರವಾಗಿ ಈ ಚಿತ್ರೋತ್ಸವ ನಡೆಯಬೇಕೆಂದು ಅವರು ಸೂಚಿಸಿದರು.

bengaluru bengaluru
Bangalore International Film Festival from March 24

ಬೆಂಗಳೂರಿನ ರಾಜಾಜಿನಗರದಲ್ಲಿರುವ ಒರಾಯನ್ ಮಾಲ್‍ನ ಪಿವಿಆರ್ ಚಿತ್ರಮಂದಿರದ 11 ಪರದೆಗಳಲ್ಲಿ ಒಟ್ಟಾರೆ 50ಕ್ಕೂ ಹೆಚ್ಚು ದೇಶಗಳ ಸುಮಾರು 200 ಅತ್ಯುತ್ತಮ ಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು.

ಬೆಂಗಳೂರು ನಗರದಲ್ಲಿ ಏಳು ದಿನಗಳ ಕಾಲ ನಡೆಯುವ ಚಲನಚಿತ್ರೋತ್ಸವದಲ್ಲಿ ಏಷಿಯನ್ ಸಿನಿಮಾ, ಚಿತ್ರಭಾರತಿ (ಭಾರತೀಯ ಸಿನಿಮಾ) ಹಾಗೂ ಕನ್ನಡ ಸಿನಿಮಾಗಳ ಸ್ಪರ್ಧಾ ವಿಭಾಗವಿರುತ್ತದೆ. ಅಲ್ಲದೆ, ವಿಶ್ವಸಿನಿಮಾ, ಸಿಂಹಾವಲೋಕನ, ಗ್ರ್ಯಾಂಡ್ ಕ್ಲಾಸಿಕ್, ಕೆಲವು ದೇಶಗಳ ವಿಶೇಷ ಸಿನಿಮಾ, ಅಗಲಿದ ವಿಶ್ವದ, ಭಾರತದ ಮತ್ತು ಕನ್ನಡ ಚಿತ್ರರಂಗದ ಗಣ್ಯರ ಸಂಸ್ಮರಣೆ, ಚಲನಚಿತ್ರ ವಿಮರ್ಶಕರ ಅಂತಾರಾಷ್ಟ್ರೀಯ ಒಕ್ಕೂಟದ ಪ್ರಶಸ್ತಿ ವಿಭಾಗ, ನೆಟ್‍ಪ್ಯಾಕ್, ಜೀವನಚರಿತ್ರೆ ಆಧರಿಸಿದ ಚಿತ್ರಗಳ ವಿಭಾಗಗಳು ವಿವಿಧ ದೃಷ್ಟಿಕೋನವನ್ನು ಬಿಂಬಿಸಲಿವೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್ ವಿವರಿಸಿದರು.

Bangalore International Film Festival from March 24 2

ಚಿತ್ರೋತ್ಸವದಲ್ಲಿ ಅತ್ಯುತ್ತಮ ಸಿನಿಮಾಗಳ ಪ್ರದರ್ಶನದ ಜೊತೆಗೆ ಚಲನಚಿತ್ರರಂಗದ ನುರಿತ ದೇಶ-ವಿದೇಶಗಳ ನಿರ್ದೇಶಕರು, ಕಲಾವಿದರು, ತಂತ್ರಜ್ಞರೊಂದಿಗಿನ ಸಂವಾದ, ವಿಚಾರ ಸಂಕಿರಣ, ಚಿತ್ರಕಥೆ ರಚನೆ ಕಾರ್ಯಾಗಾರ, ಮಾಸ್ಟರ್‍ಕ್ಲಾಸ್ ಮೊದಲಾದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಚಿತ್ರೋದ್ಯಮಿಗಳಿಗೆ, ವಿದ್ಯಾರ್ಥಿಗಳಿಗೆ ಮತ್ತು ಸಿನಿಮಾಸಕ್ತರಿಗೆ ಅನುಕೂಲವಾಗಲಿದೆ . ಕನ್ನಡ ಸಿನಿಮಾಗಳ ಸೃಜನಶೀಲ ಮುಖಗಳನ್ನು ವಿಶ್ವದ ನಾನಾ ದೇಶಗಳಿಗೆ ಪರಿಚಯಿಸುವ ಕೆಲಸವೂ ಈ ಮೂಲಕ ನಡೆಯುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 13ನೇ ಆವೃತ್ತಿಯ ಲಾಂಛನವನ್ನು ಬಿಡುಗಡೆ ಮಾಡಿದರು.

ಸಭೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್.ಜೈರಾಜ್, ಹಿರಿಯ ಕಲಾವಿದರಾದ ಶೃತಿ, ತಾರಾ ಅನುರಾಧ , ಚಲನಚಿತ್ರ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಅಜುಂ ಪರ್ವೇಜ್, ಆಯುಕ್ತ ಪಿ.ಎಸ್.ಹರ್ಷ ಮತ್ತಿತರರು ಉಪಸ್ಥಿತರಿದ್ದರು.


bengaluru

LEAVE A REPLY

Please enter your comment!
Please enter your name here