
ಬೆಳಗಾವಿ: ಬೆಳಗಾವಿ ನಗರದಲ್ಲಿ “ಐ ಲವ್ ಮೊಹಮ್ಮದ್” ಮತ್ತು “ಐ ಲವ್ ಜೈ ಶ್ರೀರಾಮ್” ಬ್ಯಾನರ್ಗಳ ಪೈಪೋಟಿಯಿಂದ ಧಾರ್ಮಿಕ ಉದ್ವಿಗ್ನತೆ ಹೆಚ್ಚಿದೆ. ಒಂದು ಧಾರ್ಮಿಕ ಗುಂಪು ಬ್ಯಾನರ್ ಅಳವಡಿಸಿದ್ದರೆ, ಅದರ ವಿರುದ್ಧ ಇನ್ನೊಂದು ಸಂಘಟನೆ ಕೌಂಟರ್ ಬ್ಯಾನರ್ ಹಾಕಿದ್ದು, ನಗರದ ಹಲವು ಭಾಗಗಳಲ್ಲಿ ಶಾಂತಿ ಕದಡಿದೆ.
ಘಟನೆ ಖಡಕ್ ಗಲ್ಲಿಯಲ್ಲಿ ಪ್ರಾರಂಭವಾಗಿದೆ. ಇಲ್ಲಿ ಮೊದಲು “ಐ ಲವ್ ಮೊಹಮ್ಮದ್” ಎನ್ನುವ ಬ್ಯಾನರ್ ಅಳವಡಿಸಲಾಗಿತ್ತು. ಇದರ ವಿರುದ್ಧ ಹಿಂದೂ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ, “ಐ ಲವ್ ಜೈ ಶ್ರೀರಾಮ್” ಎಂಬ ಕೌಂಟರ್ ಬ್ಯಾನರ್ ಹಾಕಿವೆ. ಈ ಬ್ಯಾನರ್ನಲ್ಲಿ “ನಮ್ಮ ಪ್ರೀತಿ ಶಿವಾಜಿ ಮಹಾರಾಜರ ಮೇಲಿರಲಿದೆ, ನೀವು ಪ್ರತಾಪಗಢ ಯುದ್ಧ ಮರೆತೀರಾ?” ಎನ್ನುವ ಬರಹವೂ ಸೇರಿಸಲಾಗಿದೆ.
ನಗರದ ಹಲವು ಬೀದಿಗಳಲ್ಲಿ ಇದೀಗ ಈ ರೀತಿಯ ಬ್ಯಾನರ್ಗಳು ಕಾಣಿಸುತ್ತಿದ್ದು, ಕಾನೂನು ಸುವ್ಯವಸ್ಥೆಗೆ ಸವಾಲಾಗಿದೆ. ಕೆಲವು ಪ್ರದೇಶಗಳಲ್ಲಿ ಎರಡು ಗುಂಪುಗಳ ನಡುವೆ ವಾಗ್ವಾದ ಮತ್ತು ಕಲ್ಲುತೂರಾಟದ ಘಟನೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯರು ಪೊಲೀಸ್ ಇಲಾಖೆ ಮತ್ತು ನಗರ ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯವನ್ನು ಆರೋಪಿಸಿದ್ದಾರೆ. “ಅನಧಿಕೃತ ಬ್ಯಾನರ್ಗಳನ್ನು ತೆರವುಗೊಳಿಸುವ ಜವಾಬ್ದಾರಿ ಯಾರದ್ದು ಎಂಬುದರ ಕುರಿತು ಇಲಾಖೆಗಳು ಪರಸ್ಪರ ತಪ್ಪುಹೊರಿಸುತ್ತಿವೆ. ಪರಿಣಾಮವಾಗಿ ನಗರದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ,” ಎಂದು ನಿವಾಸಿಗಳು ತಿಳಿಸಿದ್ದಾರೆ.
ಪೊಲೀಸರು ಈಗ ತೀವ್ರ ಭದ್ರತೆ ಒದಗಿಸಿದ್ದು, ಸಂವೇದನಶೀಲ ಪ್ರದೇಶಗಳಲ್ಲಿ ಪೆಟ್ರೋಲ್ ಬಲವನ್ನು ಹೆಚ್ಚಿಸಿದ್ದಾರೆ. “ಶಾಂತಿ ಭಂಗಗೊಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಬೆಳಗಾವಿ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ಈ ನಡುವೆ ನಗರ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಎಲ್ಲಾ ಅನಧಿಕೃತ ಬ್ಯಾನರ್ಗಳನ್ನು ತಕ್ಷಣ ತೆರವುಗೊಳಿಸಲು ಸೂಚನೆ ನೀಡಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಮತ್ತಷ್ಟು ಉದ್ವಿಗ್ನತೆ ತಡೆಗಟ್ಟುವ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.