ಬೆಂಗಳೂರು:
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಶ್ರೀಗಂಧದ ಮರ ಕಡಿಯುತ್ತಿದ್ದಾಗ ತಡೆಯಲು ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದು, ಒಬ್ಬ ಅಸುನೀಗಿದ್ದು, ಮತ್ತೊಬ್ಬ ಸ್ಥಳದಿಂದ ಪರಾರಿಯಾಗಿದ್ದಾನೆ. ಮೃತಪಟ್ಟ ಆರೋಪಿಯು ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮಾಸ್ತಿ ಹೋಬಳಿ ನಟುವರಹಳ್ಳಿಯ ಮುನಿರಾಜು (38) ಎಂಬಾತನಾಗಿದ್ದು, ಈತ ಪಿಒಪಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಆರೋಪಿಗಳು ಕಾಂಪೌಂಡ್ ಹಾರಿ ಬಂದು ಕೃತ್ಯದಲ್ಲಿ ತೊಡಗಿರುವ ಶಂಕೆ ಇದೆ. ಈ ಹಿಂದೆ ಕೂಡ ಕಳ್ಳತನಕ್ಕೆ ಯತ್ನಿಸಿದ್ದರಾ ಎಂಬ ಬಗ್ಗೆ ತನಿಖೆ ನಡೆಯಲಿದೆ. ಈಗಾಗಲೇ ಸ್ಥಳಕ್ಕೆ ಬೆರಳಚ್ಚು ತಜ್ಞರು, ಸೋಕೋ ತಂಡ, ಎಫ್ಎಸ್ಎಲ್ ತಂಡ ಹಾಜರಿದ್ದು, ಪರಿಶೀಲನೆ ಹಾಗೂ ಸಾಕ್ಷಿಗಳ ಕಲೆಹಾಕುವಲ್ಲಿ ನಿರತರಾಗಿದ್ದಾರೆ.
ಘಟನಾ ಸ್ಥಳಕ್ಕೆ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್, ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ಲಕ್ಷ್ಮಿನಾರಾಯಣ್, ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್ ಅವರು, ”ಆರೋಪಿಗಳು ಶ್ರೀಗಂಧದ ಮರ ಕಳ್ಳತನ ಮಾಡುವ ದುರುದ್ದೇಶದಿಂದಲೇ ಕಾಂಪೌಂಡ್ ಜಿಗಿದು ಕಾಡಿಗೆ ಬಂದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಕಳ್ಳರು ಆಯುಧಗಳೊಂದಿಗೆ ಬಂದಿರುವುದು ಪತ್ತೆಯಾಗಿದೆ. ಕಾನೂನು ಪ್ರಕಾರ ತನಿಖೆ ಮುಂದುವರೆಯಲಿದೆ. ಹಿರಿಯ ಅಧಿಕಾರಿಗಳು ಈಗಾಗಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.”