Home ರಾಜಕೀಯ ರಾಜ್ಯದ 23 ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ದೇವರ ಹೆಸರಿನಲ್ಲಿ ಪ್ರಮಾಣವಚನ

ರಾಜ್ಯದ 23 ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ದೇವರ ಹೆಸರಿನಲ್ಲಿ ಪ್ರಮಾಣವಚನ

90
0
Basavaraj Bommai swears in the name of God as 30th Chief Minister of Karnataka

ಬೆಂಗಳೂರು:

ರಾಜ್ಯದ ನೂತನ ಮುಖ್ಯಮಂತ್ರಿ ಯಾಗಿ ಬಸವರಾಜ ಬೊಮ್ಮಾಯಿ ಅವರು ರಾಜಭವನದ ಗಾಜಿನ ಮನೆಯಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜಭವನದ ಗಾಜಿನ ಮನೆಯಲ್ಲಿ ಬುಧವಾರ ಬೆಳಿಗ್ಗೆ ನಿಗದಿತ ಸಮಯಕ್ಕಿಂತಲೂ ಮೂರು ನಿಮಿಷಗಳ ಮುನ್ನವೇ ನಡೆದ ವಿಶೇಷ ಸಮಾರಂಭದಲ್ಲಿ ರಾಜ್ಯಪಾಲ ಧಾವರ್ಚಂದ್ ಗೆಹ್ಲೋಟ್ ಅವರು ನೂತನ ಮುಖ್ಯಮಂತ್ರಿ ಬಸಚರಾಜ ಬೊಮ್ಮಾಯಿ ಅವರಿಗೆ ಅಧಿಕಾರ ಮತ್ತು ಗೋಪ್ಯತಾ ಪ್ರಮಾಣ ವಚನವನ್ನು ಬೋಧಿಸಿದರು.

ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಕಾರ್ಯಕ್ರಮ ನಡೆಸಿಕೊಟ್ಟರು.

ಗಣ್ಯಾತಿಗಣ್ಯರು, ಉನ್ನತ ಅಧಿಕಾರಿಗಳು, ಕುಟುಂಬದ ಸದಸ್ಯರು, ಪಕ್ಷದ ಕಾರ್ಯಕಕತು ಹಾಗೂ ಅಭಿಮಾನಿಗಳಿಂದ ಕಿಕ್ಕಿರಿದಿದ್ದ ಸಭಾಂಗಣದಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಕನ್ನಡ ಭಾಷೆಯಲ್ಲಿ ಹಾಗೂ ದೇವರ ಹೆಸರಿನಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದರು.

ಈ ಮುನ್ನ, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಪಿ ರವಿಕುಮಾರ್ ಅವರು ರಾಜ್ಯಪಾಲರ ಅನುಮತಿ ಕೋರಿ ಪ್ರಮಾಣ ವಚನ ಸಮಾರಂಭವನ್ನು ನಿರೂಪಿಸಿದರು.

ಬಸವರಾಜ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕರಿಸಿದೊಡನೆಯೇ ಒಂದೆಡೆ ಅಭಿಮಾನಿಗಳಿಂದ ಹರ್ಷೋದ್ಗಾರ ಮುಗಿಲು ಮುಟ್ಟಿತಲ್ಲದೆ, ಮತ್ತೊಂದೆಡೆ ವೇದಿಕೆಯ ಮೇಲೆ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರು ನೂತನ ಮುಖ್ಯಮಂತ್ರಿಗೆ ಹೂಗುಚ್ಛ ನೀಡಿ ಶುಭ ಕೋರಿದರು.

ನಂತರ, ವೇದಿಕೆಯ ಮುಂಭಾಗದಲ್ಲಿ ಆಸೀನರಾಗಿದ್ದ ಗಣ್ಯಾತಿಗಣ್ಯರ ಬಳಿ ತೆರಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಪ್ತಗೊಡನೆ ಶುಭಾಶಯ ವಿನಿಮಯ ಮಾಡಿಕೊಂಡರು.

ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವ ಧಮೇಂದ್ರ ಪ್ರಧಾನ್, ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ವ್ಯವಹಾರಗಳ ಉಸ್ತುವಾರಿ ಅರುಣ್‍ಸಿಂಗ್, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ, ನಿರ್ಗಮಿತ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಅವರ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದ ಗೋವಿಂದ ಎಂ ಕಾರಜೋಳ, ಡಾ ಸಿ. ಎನ್. ಅಶ್ವಥನಾರಾಯಣ ಮತ್ತು ಲಕ್ಷ್ಮಣ ಸಂಗಪ್ಪ ಸವದಿ, ಯಡಿಯೂರಪ್ಪ ನಿರ್ಗಮಿತ ಸಚಿವ ಸಂಪುಟದಲ್ಲಿ ಸಹೋದ್ಯೋಗಿಗಳಾಗಿದ್ದ ಕೆ. ಎಸ್. ಈಶ್ವರಪ್ಪ, ಎಸ್. ಸುರೇಶ್ ಕುಮಾರ್, ಉಮೇಶ್ ವಿಶ್ವನಾಥ್, ಮುರುಗೇಶ್ ಆರ್ ನಿರಾಣಿ, ಸಿ. ಸಿ. ಪಾಟೀಲ್, ಜೆ. ಸಿ. ಮಾಧುಸ್ವಾಮಿ, ವಿ. ಸೋಮಣ್ಣ, ಕೋಟಾ ಶ್ರೀನಿವಾಸ ಪೂಜಾರಿ, ಎಸ್. ಅಂಗಾರ, ಪ್ರಭು ಚೌವ್ಹಾóಣ್, ಅರಬೇಲ್ ಶಿವರಾಮ್ ಹೆಬ್ಬಾರ್, ಬಿ. ಸಿ. ಪಾಟೀಲ್, ಬೈರತಿ ಬಸವರಾಜು, ಎಸ್. ಟಿ. ಸೋಮಶೇಖರ್, ಎಂ. ಸಿ. ನಾರಾಯಣಗೌಡ, ಎನ್. ನಾಗರಾಜು (ಎಂ. ಟಿ. ಬಿ ನಾಗರಾಜ್ ), ಕೆ. ಗೋಪಾಲಯ್ಯ ಮತ್ತು ಸಿ. ಪಿ. ಯೋಗೇಶ್ವರ್, ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಪಕ್ಷದ ರಾಜ್ಯದಲ್ಲಿನ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ, ಪಕ್ಷದ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖಂಡ ಆರ್. ವಿ. ದೇಶಪಾಂಡೆ, ಜಾತ್ಯಾತೀತ ಜನತಾ ದಳದ ಮುಖಂಡ ಎ. ಟಿ. ರಾಮಸ್ವಾಮಿ, ರಾಜ್ಯ ವಿಧಾನ ಸಭೆಯ ಸದಸ್ಯರಾದ ಎಲ್. ರವಿಸುಬ್ರಮಣ್ಯ , ಅರವಿಂದ ಬೆಲ್ಲದ್ ಹಾಗೂ ಹಲವು ಗಣ್ಯರು, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಮತ್ತು ಮಹಾ ನಿರೀಕ್ಷಕ ಪ್ರವೀಣ್ ಸೂದ್ ಅವರೂ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.

ರಾಜ್ಯದ 11 ನೇ ಮುಖ್ಯಮಂತ್ರಿಯಾಗಿದ್ದ ಸೋಮಪ್ಪ ರಾಯಪ್ಪ ಬೊಮ್ಮಾಯಿ ಅವರ ಸುಪುತ್ರರಾದ ಬಸವರಾಜ ಬೊಮ್ಮಾಯಿ ಅವರು ಪ್ರಸ್ತುತ ರಾಜ್ಯ ವಿಧಾನ ಸಭೆಯಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಶಿಗ್ಗಾವಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸಿದ್ದವನಹಳ್ಳಿ ನಿಜಲಿಂಗಪ್ಪ ಅವರೂ ಮುಖ್ಯಮಂತ್ರಿಯಾಗಿದ್ದರು ಎಂಬುದು ವಿಶೇಷ.

ಹೆಚ್. ಡಿ. ದೇವೇಗೌಡ ಮತ್ತು ಹೆಚ್. ಡಿ. ಕುಮಾರಸ್ವಾಮಿ ಅವರ ನಂತರ ಕರ್ನಾಟಕದಲ್ಲಿ ಎರಡನೇ ಬಾರಿಗೆ ಎಸ್. ಆರ್. ಬೊಮ್ಮಾಯಿ ಮತ್ತು ಬಸವರಾಜ ಬೊಮ್ಮಾಯಿ ಅವರಿಗೆ ತಂದೆ ಮತ್ತು ಮಗ ಜೋಡಿ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುತ್ತಿದ್ದಾರೆ ಎಂಬುದು ಗಮನಾರ್ಹ.

LEAVE A REPLY

Please enter your comment!
Please enter your name here