ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ ಗುಪ್ತ ರವರ ನಿರ್ದೇಶನ
ಬೆಂಗಳೂರು:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ನಗರದ ಜನತೆಯ ಮೂಲಭೂತ ಸೌಕರ್ಯ ಹಾಗೂ ಕುಂದುಕೊರತೆಗಳು ಹಾಗೂ ಅಗತ್ಯತೆಗಳನ್ನು ಕಲ್ಪಿಸಲು ಎಲ್ಲಾ ವಲಯಗಳಲ್ಲಿ ವಾರಕ್ಕೊಮ್ಮೆ “ಸಾರ್ವಜನಿಕ ಕುಂದು ಕೊರತೆ ಸಭೆ” ಗಳನ್ನು ನಡೆಸಲು ಮುಖ್ಯ ಆಯುಕ್ತರು ನಿರ್ದೇಶಿಸಿರುತ್ತಾರೆ.
ಪಾಲಿಕೆ ಮುಖ್ಯ ಆಯುಕ್ತರು, ಪಾಲಿಕೆಯ ಎಲ್ಲಾ ಎಂಟು ವಲಯಗಳ, ವಲಯ ಆಯುಕ್ತರು ತಮ್ಮ ಅಧ್ಯಕ್ಷತೆಯಲ್ಲಿ, ವಲಯದ ಜಂಟಿ ಆಯುಕ್ತರು ಹಾಗೂ ಅಧೀನ ಸಿಬ್ಬಂದಿಗಳೊಂದಿಗೆ ಪ್ರತಿ ವಾರ ಕಡ್ಡಾಯವಾಗಿ ಸಾರ್ವಜನಿಕ ಕುಂದು ಕೊರತೆ ಸಭೆಗಳನ್ನು ಆಯೋಜಿಸಲು ಸೂಚಿಸಲಾಗಿದೆ.
ಇಂತಹ ಸಭೆಗಳನ್ನು ಆಯೋಜಿಸುವಾಗ ಸಭೆ ದಿನಾಂಕ, ಸ್ಥಳ ಹಾಗೂ ಸಮಯದ ಮಾಹಿತಿಯನ್ನು ಸಾರ್ವಜನಿಕರಿಗೆ ಮುಂಚಿತವಾಗಿ ತಿಳಿಸಲು ವ್ಯಾಪಕ ಪ್ರಚಾರ ಮಾಡುವಂತೆ ತಿಳಿಸಿದ್ದಾರೆ. ಸಾರ್ವಜನಿಕರಿಂದ ಬರುವ ಸಲಹೆ, ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವಂತೆ ಎಲ್ಲಾ ವಲಯ ಆಯುಕ್ತರವರಿಗೆ ನಿರ್ದೇಶನ ನೀಡಿದ್ದಾರೆ.
ವಲಯ ಮಟ್ಟದ ಸಭೆಗೆ ಸಂಬಂಧಪಟ್ಟ ಪಾಲಿಕೆಯ ಎಲ್ಲಾ ವಿಭಾಗದ ಅಧಿಕಾರಿಗಳನ್ನು ಹಾಗೂ ವಿವಿಧ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಬೆಸ್ಕಾಂ, ಬಿ.ಡ್ಲ್ಯೂ.ಎಸ್.ಎಸ್.ಬಿ, ಪೋಲಿಸ್, ಟ್ರಾಫಿಕ್, ಸ್ಮಂ ಬೋಡ್೯, ಹೌಸಿಂಗ್ ಬೋಡ್೯, ಇತರೆ ಸರ್ಕಾರಿ ಇಲಾಖೆಗಳ ಅಧಿಕಾರಿಗಳನ್ನು ಮತ್ತು ವಲಯದಲ್ಲಿನ ಸಕ್ರಿಯ ಸರ್ಕಾರೇತರ ಸಂಸ್ಥೆಗಳು(ಎನ್.ಜಿ.ಓ), ವಲಯ ವ್ಯಾಪ್ತಿಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು(ಆರ್.ಡಬ್ಲ್ಯೂ.ಎ) ರವರನ್ನು ಆಹ್ವಾನಿಸಿ ಅವರಿಂದ ಕುಂದು ಕೊರತೆಗಳನ್ನು ಕುರಿತು ಚರ್ಚಿಸಿ, ಪಾಲಿಕೆಯಿಂದ ಸಾರ್ವಜನಿಕರಿಗೆ ನೀಡಲಾಗುತ್ತಿರುವ ವಿವಿಧ ಸೇವೆಗಳ ಮಾಹಿತಿ ನೀಡುವುದರಲ್ಲಿ ಯಾವುದೇ ರೀತಿಯ ಕುಂದುಕೊರತೆ ದೂರುಗಳಿದ್ದಲ್ಲಿ ಶೀಘ್ರದಲ್ಲಿ ಅವುಗಳನ್ನು ನಿವಾರಿಸಲು ಹಾಗೂ ಸೂಕ್ತ ಸಲಹೆಗಳನ್ನು ಸ್ವೀಕರಿಸಿ ಅವುಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಪಾಲಿಕೆ ವ್ಯಾಪ್ತಿಗೊಳಪಡುವ ಕುಡಿಯುವ ನೀರು ಪೂರೈಕೆ, ಶುಚಿತ್ವ, ಬೀದಿದೀಪ ಹೀಗೆ ಒಟ್ಟಾರೆ ವ್ಯವಸ್ಥೆಗಳ ಕುರಿತಾದ ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ಪ್ರತಿವಾರ ವಲಯ ವ್ಯಾಪ್ತಿಯಲ್ಲಿ ವಿಶೇಷ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಯುವ ಸಾರ್ವಜನಿಕ ಕುಂದು ಕೊರತೆ ಸಭೆಗಳಲ್ಲಿ ಜನತೆ ಪರಿಹಾರ ಕಂಡುಕೊಳ್ಳುವಂತೆ ಮುಖ್ಯ ಆಯುಕ್ತರು ರವರು ತಿಳಿಸಿದ್ದಾರೆ.