ಬೆಂಗಳೂರು:
ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹ ಗುರಿಯನ್ನು ಸಮರ್ಥವಾಗಿ ಸಾಧಿಸಬೇಕು, ಅದಕ್ಕಾಗಿ ಅಗತ್ಯ ತಂತ್ರಜ್ಞಾನದ ಸಹಾಯ ಪಡೆದುಕೊಂಡು ತೆರಿಗೆ ಸಂಗ್ರಹಿಸಲು ಸೂಕ್ತ ಕ್ರಮ ವಹಸಿಲು ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ್ ಗುಪ್ತ ಅವರು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹಿಸುವ ಸಂಬಂಧ ಬುಧವಾರದಂದು ನಡೆದ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಕಂದಾಯ ಅಧಿಕಾರಿಗಳು, ಸಹಾಯ ಕಂದಾಯ ಅಧಿಕಾರಿಗಳು ಆಸ್ತಿ ತೆರಿಗೆ ಸಂಗ್ರಹಿಸುವಲ್ಲಿ ಕಾರ್ಯೋನ್ಮುಖರಾಗಬೇಕು. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ನೀಡಿ ಆಸ್ತಿ ತೆರಿಗೆ ಸಂಗ್ರಹಿಸಲು ಸೂಕ್ತ ಕ್ರಮ ವಹಿಸಬೇಕು ಎಂದರು.
ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಆಸ್ತಿ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷ ಈ ವೇಳೆಗೆ ರೂ.2465.85 ಕೋಟಿ ಸಂಗ್ರಹವಾಗಿತ್ತು. ಪ್ರಸಕ್ತ ಸಾಲಿನಲ್ಲಿ ಈ ವೇಳೆಗೆ 2,667.77 ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದು, ಎಲ್ಲಾ ವಲಯಗಳಲ್ಲೂ ನಿಗದಿತ ಗುರಿಯನ್ನು ತಲುಪಲು ಸಂಬಂಧಪಟ್ಟ ಕಂದಾಯ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮಾನ್ಯ ಮುಖ್ಯ ಆಯುಕ್ತರು ಸೂಚನೆ ನೀಡಿದರು.
Read Here: BBMP Chief Commissioner Gaurav Gupta tests Covid-positive
ಇದನ್ನೂ ಓದಿ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರಿಗೆ ಕೋವಿಡ್-ಪಾಸಿಟಿವ್ ದೃಢ
ಆಸ್ತಿ ತೆರಿಗೆ ವ್ಯಾಪ್ತಿಗೆ ಬಾರದ ಆಸ್ತಿಗಳನ್ನು ಪತ್ತೆ ಮಾಡಿ ತೆರಿಗೆ ವ್ಯಾಪ್ತಿಗೆ ತರಬೇಕು. ತೆರಿಗೆ ಸಂಗ್ರಹ ಸಂಬಂಧವಾಗಿ ಸುಧಾರಿತ ತಂತ್ರಜ್ಞಾನದ ಆವಶ್ಯಕತೆ ಕಂಡುಬಂದಲ್ಲಿ ಆ ನಿಟ್ಟಿನಲ್ಲಿಯೂ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಾಲಿಕೆಗೆ ಹೆಚ್ಚು ಮೊತ್ತ ಬಾಕಿ ಉಳಿಸಿಕೊಂಡಿರುವ ಟಾಪ್ ಡಿಫಾಲ್ಟ್ ಗಳ ಪಟ್ಟಿ ಅನುಸಾರ ಕಾನೂನು ರೀತಿಯ ಕ್ರಮ ಕೈಗೊಂಡು ತೆರಿಗೆ ವಸೂಲಿ ಮಾಡಿ. ಆಸ್ತಿ ತೆರಿಗೆ ಸಂಗ್ರಹವನ್ನು ಒಂದು ಗುರಿಯಾಗಿಟ್ಟುಕೊಂಡು ಎಲ್ಲಾ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಅವರು ಹೇಳಿದರು.
ಪ್ರಸಕ್ತ ಸಾಲಿನಲ್ಲಿ 4,000 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಇದುವರೆಗೆ 2,667.77 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದ್ದು(ವಲಯವಾರು ತೆರಿಗೆ ಸಂಗ್ರಹ ಮಾಹಿತಿ ಪಟ್ಟಿ ಲಗತ್ತಿಸಿದೆ), ಎಲ್ಲಾ ಅಧಿಕಾರಿಗಳು ಗುರಿಯನ್ನು ತಲುಪಸಲು ಶ್ರಮವಹಿಸಿ ಕಾರ್ಯನಿರ್ವಹಿಸಬೇಕು ಎಂದರು.
ಸಭೆಯಲ್ಲಿ ವಿಶೇಷ ಆಯುಕ್ತರು(ಕಂದಾಯ) ಡಾ. ದೀಪಕ್.ಆರ್.ಎಲ್ ಹಾಗೂ ಎಲ್ಲಾ ವಲಯ ಆಯುಕ್ತರುಗಳು, ಎಲ್ಲಾ ವಲಯಗಳ ಜಂಟಿ ಆಯುಕ್ತರುಗಳು, ಕಂದಾಯ ವಿಭಾಗದ ಉಪ ಆಯುಕ್ತರು, ಕಂದಾಯ ವಿಭಾಗದ ಜಂಟಿ ಆಯುಕ್ತರು ಹಾಗೂ ಎಲ್ಲಾ ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ವಲಯವಾರು ಆಸ್ತಿ ತೆರಿಗೆ ಸಂಗ್ರಹದ ವಿವರ: ದಿನಾಂಕ: 25.1.2022 ಕ್ಕೆ ಇರುವಂತೆ: (ರೂ. ಕೋಟಿಗಳಲ್ಲಿ)
- ಯಲಹಂಕ – 265.98
- ಮಹದೇವಪುರ – 683.07
- ದಾಸರಹಳ್ಳಿ – 73.78
- ಆರ್.ಆರ್.ನಗರ – 182.00
- ಬೊಮ್ಮನಹಳ್ಳಿ – 285.04
- ಪಶ್ವಿಮ – 272.11
- ದಕ್ಷಿಣ – 398.54
- ಪೂರ್ವ – 507.26
ಒಟ್ಟು : 2667.77 ಕೋಟಿ